ವಕ್ಫ್ ವಿಚಾರವಾಗಿ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ವಕ್ಫ್ ಅದಾಲತ್ ನಡೆದಿರುವ ಕಡೆ ಜಮೀನುಗಳು ತಮಗೆ ಸೇರಿದ್ದು ಎಂಬ ಹಕ್ಕು ಪ್ರತಿಪಾದನೆ ಕೇಳಿಬರುತ್ತಿದ್ದು, ಈ ವಿಚಾರವಾಗಿ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು (ಅ.30): ವಕ್ಫ್ ಅದಾಲತ್ ನಡೆದಿರುವ ಕಡೆ ಜಮೀನುಗಳು ತಮಗೆ ಸೇರಿದ್ದು ಎಂಬ ಹಕ್ಕು ಪ್ರತಿಪಾದನೆ ಕೇಳಿಬರುತ್ತಿದ್ದು, ಈ ವಿಚಾರವಾಗಿ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 12 ಜಿಲ್ಲೆಗಳಲ್ಲಿ ವಕ್ಫ್ ಹಕ್ಕು ಪ್ರತಿಪಾದನೆ ಕೇಳಿಬಂದಿದ್ದು, ಈಗಾಗಲೇ ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್, ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಯಾರು ಬೇಕಾದರೂ ಆಸ್ತಿ ನಮ್ಮದು ಎಂದು ಹಕ್ಕು ಪ್ರತಿಪಾದಿಸಬಹುದು.
ಆದರೆ ದಾಖಲೆಯಲ್ಲಿ ಯಾರ ಹೆಸರಿದೆ ಎಂಬುದು ಮುಖ್ಯವಾಗಿರುತ್ತದೆ ಎಂದು ಹೇಳಿದರು. ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಯಾರು, ಯಾರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ. ವಕ್ಫ್ ಅದಾಲತ್ ನಡೆದಿರುವ ಕಡೆಯಲ್ಲೆಲ್ಲಾ ಆಸ್ತಿಗಳು ತಮಗೆ ಸೇರಿದ್ದು ಎಂಬ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಅದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ವಿಜಯಪುರದಲ್ಲಿ ಸಾವಿರ ಎಕರೆಯಲ್ಲಿ 11 ಎಕರೆ ಮಾತ್ರ ವಿವಾದಕ್ಕೆ ಕಾರಣವಾಗಿದೆ. ಯಾರಿಗೂ ಅನ್ಯಾಯವಾಗಲು ಸರ್ಕಾರ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸೋಲಿನ ಭೀತಿಯಿಂದ ವಿವಾದ: ಕಾನೂನಾತ್ಮಕವಾಗಿ ಇಲ್ಲದ ಭೂಮಿ ವಾಪಸ್ ಪಡೆಯಲಾಗುತ್ತದೆ. ಇದನ್ನು ಪ್ರತಿಪಕ್ಷಗಳು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಉಪಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ವಕ್ಫ್ ವಿಚಾರವನ್ನು ವಿವಾದ ಮಾಡಲಾಗುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರತಿಪಕ್ಷ ನಾಯಕರು ರಾಜಕೀಯ ಕಾರಣಕ್ಕಾಗಿ ವಕ್ಫ್ ಆಸ್ತಿ ವಿಚಾರಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ 4 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ: ಆರೋಗ್ಯ ಭಾಗ್ಯ- ವೈದ್ಯಕೀಯ ಕ್ಷೇತ್ರಕ್ಕೆ ಭಾರಿ ಕೊಡುಗೆ
ಮುಂದಿನ ಜನದಲ್ಲಿ ಮುಸಲ್ಮಾನನಾಗಿ ಹುಟ್ಟಬೇಕು ಎಂದು ಹೇಳಿದ್ದು ಯಾರು? ಈಗ ಅದೇ ಜೆಡಿಎಸ್ ನಾಯಕರು ವಕ್ಫ್ ವಿವಾದದ ಕುರಿತು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ವರ್ಷದ ಹಿಂದೆ ಆರ್‌ಎಸ್‌ಎಸ್ ಬಗ್ಗೆ ಏನು ಹೇಳಿದ್ದರು? ಅವರಿಗೆ ತಮ್ಮ ಮಾತಿನ ಮೇಲೆ ಬದ್ಧತೆ ಇಲ್ಲ. ಕುಮಾರಸ್ವಾಮಿ ಕುರ್ಚಿ ಸಿಕ್ಕಾಗ ಜಾತ್ಯತೀತರಾಗುತ್ತಾರೆ. ಅದು ಹೋದಾಗ ಕಮ್ಯುನಲ್ ಆಗುತ್ತಾರೆ. ಅಧಿಕಾರಕ್ಕಾಗಿ ಸಿದ್ಧಾಂತಗಳು ಯಾವ ರೀತಿ ಬೇಕಾದರೂ ಬದಲಾಗಬಹುದೇ? ಎಂದು ವಾಗ್ದಾಳಿ ನಡೆಸಿದರು.