ಆಮಿಷಕ್ಕೆ ಒಳಗಾಗದೇ ರೈತರ ಏಳ್ಗೆಗೆ ಕಟಿಬದ್ಧರಾಗಿ: ಕೋಡಿಹಳ್ಳಿ ಚಂದ್ರಶೇಖರ
ಅಧಿಕಾರ, ಅಂತಸ್ತು ಎಂದಿಗೂ ಶಾಶ್ವತವಲ್ಲ. ಸಮಾಜಕ್ಕೆ ನಾವು ನೀಡುವ ಕೊಡುಗೆ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತು ನೆನಪು ಮಾಡಿಕೊಡುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತ ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ಆಮಿಷಗಳಿಗೊಳಪಡದೇ ರೈತರ ಏಳ್ಗೆಗೆ ಕಟಿಬದ್ಧರಾಗಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸೊರಬ (ಡಿ.23) : ಅಧಿಕಾರ, ಅಂತಸ್ತು ಎಂದಿಗೂ ಶಾಶ್ವತವಲ್ಲ. ಸಮಾಜಕ್ಕೆ ನಾವು ನೀಡುವ ಕೊಡುಗೆ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತು ನೆನಪು ಮಾಡಿಕೊಡುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತ ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ಆಮಿಷಗಳಿಗೊಳಪಡದೇ ರೈತರ ಏಳ್ಗೆಗೆ ಕಟಿಬದ್ಧರಾಗಿ ಶ್ರಮಿಸಬೇಕು. ಎನ್.ಡಿ. ಸುಂದರೇಶ್ ಹಾಕಿಕೊಟ್ಟಿರುವ ಸಂಘಟನೆಯ ದಾರಿಯಲ್ಲಿ ಸಾಗಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ನೆನಪಿನ ಅಂಗಳÜದಲ್ಲಿ ರೈತ ಹೋರಾಟಗಾರ ಎನ್.ಡಿ. ಸುಂದರೇಶ್ ಪುಷ್ಪನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಕಬ್ಬು ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್: ರೈತರ ಆಕ್ರೋಶ
ಎನ್.ಡಿ. ಸುಂದರೇಶ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ರೈತ ಚಳುವಳಿಯಲ್ಲಿ 154 ರೈತರು ಬಂದೂಕಿಗೆ ಎದೆಯೊಡ್ಡಿದ್ದರು. ಇದು ಅಂದಿನ ರೈತ ನಾಯಕರ ಬದ್ಧತೆಯನ್ನು ತೋರಿಸುತ್ತದೆ. ಅದೇ ರೀತಿ ಮುಂದೆಯೂ ರಾಜ್ಯ ರೈತ ಸಂಘ ಬಲಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರೈತ ಸಂಘದ ಪದಾಧಿಕಾರಿಗಳು, ಅಧಿಕಾರ ಅಂತಸ್ತಿಗೆ ಆಸೆಪಡದೇ ಸಾಮಾನ್ಯ ಕಾರ್ಯಕರ್ತನಾಗಿ ಸಂಘಟನೆಗೊಳ್ಳಬೇಕು. ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್ ಮತ್ತು ರುದ್ರಪ್ಪ ಅವರಂಥ ರೈತ ಹೋರಾಟಗಾರರ ಮಾರ್ಗದರ್ಶನ ಹಾಗೂ ಅವರು ಹಾಕಿಕೊಟ್ಟಿರುವ ಸಾಧಿಸಲೇಬೇಕೆಂಬ ಗುರಿ ನಮ್ಮ ಮುಂದಿದೆ. ಆದ್ದರಿಂದ ರೈತ ಸಂಘವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಷ್ಟ್ರದಲ್ಲಿ ಬದ್ಧತೆಯೊಂದಿಗೆ ಗಟ್ಟಿಯಾಗಿ ನೆಲೆ ನಿಂತಿದೆ ಎಂದರು.
ದೇಶದಲ್ಲಿ ರಾಜ್ಯ ಸರ್ಕಾರ ಮಾತ್ರ ಭೂ ಕಾಯ್ದೆಯನ್ನು ಜಾರಿಗೊಳಿಸಿದೆ. ಅದನ್ನು ಕಿತ್ತೊಗೆಯುವುದೇ ನಮ್ಮ ಮೂಲ ಉದ್ಧೇಶವಾಗಿದೆ. ಇಂದಿನ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳನ್ನು ಹಳ್ಳಿಗಳಿಗೆ ನೂಕಿ ರೈತರ ಭೂಮಿಯನ್ನು ಕಸಿದುಕೊಂಡು ರೈತರು ಮತ್ತು ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿ, ಪಟ್ಟಣದ ಕೊಳಚೆ ಪ್ರದೇಶದಲ್ಲಿ ಕೆಲಸ ಮಾಡುವಂತ ಯೋಜನೆಗಳನ್ನು ರೂಪಿಸುವ ಯೋಜನೆ ಜಾರಿಗೊಳಿಸುವ ಹುನ್ನಾರ ನಡೆದಿದೆ. ಆದ್ದರಿಂದ ರೈತ ಸಮೂಹ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು. ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಸೈಯದ್ ಶಫೀವುಲ್ಲಾ ಹಿರೇಕಸವಿ ಅಧ್ಯಕ್ಷತೆ ವಹಿಸಿದ್ದರು.
ಈಗಲೂ ನಾನು ರೈತ ಸಂಘ ರಾಜ್ಯಾಧ್ಯಕ್ಷ: ಕೋಡಿಹಳ್ಳಿ ಚಂದ್ರಶೇಖರ್
ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ರಾಜ್ಯ ಸಂಚಾಲಕ ಉಮೇಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ನಾಯಕ, ಸಮಾಜ ಚಿಂತಕ ರಾಜಪ್ಪ ಮಾಸ್ತರ್, ನಾಗರಾಜ ಬೆಣ್ಣಿಗೆರೆ, ಸತೀಶ್ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗದ ರೈತ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುಳ್ಳು ಆರೋಪವನ್ನು ನನ್ನ ಮೇಲೆ ಹೊರಿಸಿದ್ದಾರೆ. ನಾನು ಭ್ರಷ್ಟನಾಗಿದ್ದರೆ ಸರ್ಕಾರವು ಇದಕ್ಕೆ ಭಾಗಿ ಆಗಿರುತ್ತದೆ. ಈ ಬಗ್ಗೆ ತನಿಖೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ನಾನು ನಿರ್ದೋಷಿ. ಆರೋಪಗಳು ಬುದ್ಧ, ಗಾಂಧೀಜಿ, ಬಸವಣ್ಣ ಅವರಿಗೂ ಬಿಟ್ಟಿಲ್ಲ
- ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ