Asianet Suvarna News Asianet Suvarna News

ಕಾಂಗ್ರೆಸ್‌ ಸೇರುವ ಸುಳಿವು ನೀಡಿದ ಮುನೇನಕೊಪ್ಪ? ಬಿಜೆಪಿ ಇನ್ನೊಂದು ವಿಕೆಟ್‌ ಪತನ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಗಮ ಮಂಡಳಿ, ಪಕ್ಷದಲ್ಲಿ ಸ್ಥಾನ‌ಮಾನವನ್ನೂ ಕೊಡಲಿಲ್ಲ. ಲೋಕಸಭಾ ಚುನಾವಣೆ ವೇಳೆ ನನ್ನ ಅಂತಿಮ ನಿರ್ಧಾರ ಹೇಳುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ತಿಳಿಸಿದ್ದಾರೆ.

Farmer minister Shankar Patil Munenakoppa hinted to join Congress Another BJP wicket fall sat
Author
First Published Aug 28, 2023, 12:39 PM IST

ಬೆಂಗಳೂರು (ಆ.28): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಕಾರ್ಯಕರ್ತರನ್ನ ಸರಿಯಾಗಿ‌ ನಡೆಸಿಕೊಂಡಿಲ್ಲ ಎಂಬ ನೋವಿದೆ. ನಿಗಮ ಮಂಡಳಿ, ಪಕ್ಷದಲ್ಲಿ ಸ್ಥಾನ‌ಮಾನ ಕೊಡುವ ಕೆಲಸ ಆಗಲಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ ಎಂಬ ನೋವು ಇದೆ. ಲೋಕಸಭಾ ಚುನಾವಣೆ ವೇಳೆ ನನ್ನ ಅಂತಿಮ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್‌ ಸೇರ್ಪಡೆಯ ಸುಳಿವನ್ನು ಬಿಚ್ಚಿಟ್ಟಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರನಾಲ್ಕು ದಿನಗಳಿಂದ ದೊಡ್ಡ ಸುದ್ದಿ ಹರಿದಾಡುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಕೆಲ ಸಚಿವರ  ಆದಿಯಾಗಿ ಎಲ್ಲರ ಬಾಯಲ್ಲು ಒಂದು ಮಾತು ಹೇಳಿಕೆ‌ ಕೇಳುತ್ತಿದ್ದೇನೆ. ನನಗೆ ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿಲ್ಲ. ನಾನು ಯಾವುದೇ ಸಭೆಗಳನ್ನು ನಡೆಸಿಲ್ಲ. ನನ್ನ ಕುಟುಂಬದಲ್ಲಿ ಆಗಿರುವ ಘಟನೆಗಳ ಕಾರಣಕ್ಕೆ ನಾನು ಪಕ್ಷದ (ಬಿಜೆಪಿ) ಸಭೆಗಳಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು.

ಮೋಡ ಬಿತ್ತನೆ ಕಾರ್ಯಕ್ಕೆ ಎಳ್ಳು ನೀರು ಬಿಟ್ಟ ಸಿಎಂ ಸಿದ್ದರಾಮಯ್ಯ: ಕೃಷಿ ಸಚಿವರ ಚಿಂತನೆ ಠುಸ್‌!

ಧಾರವಾಡದಲ್ಲಿ ಬಿಜೆಪಿಯ ಪ್ರಮುಖರು ಪಕ್ಷ ತೊರೆದಿದ್ದಾರೆ: ರಾಜ್ಯದಲ್ಲಿ ನನ್ನನ್ನು ಬಿಜೆಪಿಗೆ ಕರೆತಂದ ಅನೇಕ ನಾಯಕರು ಜಿಲ್ಲೆಯಲ್ಲಿ ಇದ್ದಾರೆ. ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿ ಅನೇಕ ಪ್ರಮುಖರು ಪಕ್ಷ ತೊರೆದಿದ್ದಾರೆ. ನಾನು ಈ ವೇಳೆ ದಿವಂಗತ ಅನಂತ ಕುಮಾರ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಈಗ ರಾಜ್ಯದಲ್ಲಿ ಪ್ರಹ್ಲಾದ್ ಜೋಶಿ ಬಿಜೆಪಿ ನೇತೃತ್ವ ವಹಿಸಬೇಕು. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಜೋಶಿ ಅವರ ಮೇಲಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಅಭಿಪ್ರಾಯ ತಿಳಿಸಿದರು.

ನಿಗಮ ಮಂಡಳಿ, ಪಕ್ಷದ ಸ್ಥಾನಮಾನವನ್ನೂ ಕೊಡಲಿಲ್ಲ: ಇನ್ನು ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಕಾರ್ಯಕರ್ತರನ್ನ ಸರಿಯಾಗಿ‌ ನಡೆಸಿಕೊಂಡಿಲ್ಲ ಎಂಬ ನೋವಿದೆ. ರಾಜ್ಯದ ಯಾವುದೇ ನಿಗಮ ಮಂಡಳಿ ಅಥವಾ ಪಕ್ಷದಲ್ಲಿ ಸೂಕ್ತ ಸ್ಥಾನ‌ಮಾನ ಕೊಡುವ ಕೆಲಸ ಆಗಲಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ ಎಂಬ ನೋವು ಇದೆ. ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಪ್ರಹ್ಲಾದ್ ಜೋಶಿ ಅವರೇ ತೆಗೆದುಕೊಳ್ಳಬೇಕು. ಅನಂತ ಕುಮಾರ್, ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು. 

ಸಿದ್ದರಾಮಯ್ಯ ಸರ್ಕಾರಕ್ಕೆ ಯಶಸ್ವಿ 100 ದಿನ ಸಂಭ್ರಮ: ನುಡಿದಂತೆ ನಡೆದಿದ್ದೇವೆಂದ ಸಿಎಂ

ಜನವರಿಯಲ್ಲಿ ಅಂತಿಮ ನಿರ್ಧಾರ ಪ್ರಕಟ: ಇಷ್ಟೆಲ್ಲಾ ಪಕ್ಷ ಬಿಡುವ ಸುಳಿವನ್ನು ನೀಡಿದ್ದರೂ ಕೂಡ, ಮಾಜಿ ಸಚಿವ ಮುನೇನಕೊಪ್ಪ ಮಾತಲ್ಲಿ‌ ಇನ್ನೂ ನಿಗೂಢ ಅರ್ಥವಿದೆ. ಇನ್ನು ಮಾಧ್ಯಮದವರು ಬಿಜೆಪಿ ತೊರೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನ ನಿರ್ಧಾರವನ್ನು ಮುಂದಿನ ಜನವರಿಯಲ್ಲಿ ತಿಳಿಸುತ್ತೇನೆ. ಎಲ್ಲರನ್ನೂ ಕರೆದು ನನ್ನ ನಿರ್ಧಾರ ತಿಳಿಸುತ್ತೇನೆ. ಪಕ್ಷಾಂತರ ಮಾಡುವ ವಿಚಾರ ಬಂದಾಗ ತಿಳಿಸುತ್ತೇನೆ. ರಾಜಕೀಯ ಏನ್ ಬೇಕಾದ್ರು ಬೆಳವಣಿಗೆ ಆಗಬಹುದು.
ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರು ನಿಮಗೆ ತಿಳಿಸುತ್ತೇನೆ ಎಂದು ಕಾಂಗ್ರೆಸ್‌ ಸೇರುವ ಸುಳಿವನ್ನು ನೀಡಿದರು.

Follow Us:
Download App:
  • android
  • ios