ಕುಟುಂಬ ರಾಜಕಾರಣ: ಕಾಂಗ್ರೆಸ್ಸಿಗೆ ಒಳಪೆಟ್ಟು ಆತಂಕ!

ಕುಟುಂಬ ರಾಜಕಾರಣದ ಆರೋಪ ಹಾಗೂ ಮತದಾರರಲ್ಲಿರುವ ಅಸಮಾಧಾನವನ್ನು ಕಾಂಗ್ರೆಸ್ ನಾಯಕರು ಹೇಗೆ ವಿಶ್ಲೇಷಿಸುತ್ತಾರೆ? ಚುನಾವಣೆ ವೇಳೆ ಮತದಾರರನ್ನು ಹೇಗೆ ಮನವೊಲಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. 

Family politics is concern for Congress in Sandur Byelection grg

ಬಳ್ಳಾರಿ(ಅ.25):  ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಅಖಾಡಕ್ಕೆ ಸಜ್ಜಾಗಿರುವ ಕಾಂಗ್ರೆಸ್ಸಿಗೆ ಒಳಪೆಟ್ಟಿನ ಆತಂಕ ಎದುರಾಗಿದೆ. ಇಡೀ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿರುವ ಸಚಿವ ಸಂತೋಷ್ ಲಾಡ್ ಹಾಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತುಕಾರಾಂ ಅವರ ಜೋಡೆತ್ತಿನ ಹೋರಾಟ ಗೆಲುವಿನ ಹಾದಿ ಸುಗಮಗೊಳಿಸುತ್ತಿದೆ ಎಂಬ ವಿಶ್ವಾಸದ ನಡುವೆ ಕುಟುಂಬ ರಾಜಕಾರಣದ ಆರೋಪ ಕೈ ಅಭ್ಯರ್ಥಿಯ ರಾಜಕೀಯ ಎಂಟ್ರಿಗೆ ಸಮಸ್ಯೆ ತಂದೊಡ್ಡುವ ಗುಮಾನಿಯೂ ಮೂಡಿದೆ. 

ಸಂಡೂರು ಉಪ ಚುನಾವಣೆ ಟಿಕೆಟ್ ತಮ್ಮ ಕುಟುಂಬಕ್ಕೆ ನೀಡುವಂತೆ ಸಂಸದ ತುಕಾರಾಂ ಬೇಡಿಕೆ ಇಡುತ್ತಿದ್ದಂತೆಯೇ ಕೈ ಪಕ್ಷದ ನಿಷ್ಠರಲ್ಲಿ ತೀವ್ರ ವಿರೋಧವೂ ವ್ಯಕ್ತವಾಯಿತು. ಸಂತೋಷ್ ಲಾಡ್ ಆಪ್ತರಲ್ಲಿ ಗುರುತಿಸಿಕೊಂಡಿದ್ದ ಜಿಪಂ ಮಾಜಿ ಸದಸ್ಯ ತುಮಟಿ ಲಕ್ಷ್ಮಣ ಹಲವು ದಶಕಗಳಿಂದ ಕಾಂಗ್ರೆಸ್‌ನಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಈ ಬೆಳವಣಿಗೆ ಸಂಡೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಆದರೆ, ಪಕ್ಷದ ಹಿರಿಯ ನಾಯಕರ ನಿಲುವನ್ನು ಬಹಿರಂಗವಾಗಿಯೇ ಯಾರೂ ಟೀಕಿಸಲು ಮುಂದಾಗದಿದ್ದರೂ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಕುರಿತು ಈಗಲೂ ಚರ್ಚೆಯಾಗುತ್ತಿದೆ. 

ಸಿಪಿ ಯೋಗೇಶ್ವರ್ ವಿರುದ್ದ ಗೆದ್ದು ಬೀಗ್ತಾರ ನಿಖಿಲ್ ಕುಮಾರಸ್ವಾಮಿ? ಚನ್ನಪಟ್ಟಣದ ಚದುರಂಗ!

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತುಕಾರಾಂ ಅವರನ್ನು ಮತ್ತೆ ಸಂಸದರನ್ನಾಗಿ ಮಾಡಲಾಗಿದೆ. ಅದೇ ಕುಟುಂಬಕ್ಕೆ ಶಾಸಕರಾಗಿ ಆಯ್ಕೆಯಾಗುವ ಅವಕಾಶ ನೀಡಿದರೆ, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದವರ ಪಾಡೇನು? ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದು ಈ ಬಾರಿ ಚುನಾವಣೆ ಗೆಲುವು ಸುಲಭವಿದೆ. ಇಂತಹ ಸಂದರ್ಭದಲ್ಲಾದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಸ್ಪರ್ಧೆಗಿಳಿಸಿ ಗೆಲ್ಲಿಸಿಕೊಳ್ಳುವ ಕಾಳಜಿಯನ್ನು ಸಚಿವ ಸಂತೋಷ್ ಲಾಡ್ ಸೇರಿದಂತೆ ಪಕ್ಷದ ರಾಜ್ಯ ನಾಯಕರು ತೋರಿಸಬೇಕಿತ್ತು ಎಂಬ ಮಾತು ಕೇಳಿ ಬಂದಿದೆ. ಈ ಹಿಂದೆ ಕೈ ಪಕ್ಷದ ಅಭ್ಯರ್ಥಿ ಪರ ಸಕ್ರಿಯವಾಗಿ ಶ್ರಮಿಸುತ್ತಿದ್ದ ಕಾರ್ಯಕರ್ತರಲ್ಲೂ ಅಸಮಾಧಾನದ ಹೊಗೆ ಹೊರ ಬಂದಿದೆ. ಈ ಎಲ್ಲ ಚರ್ಚೆಗಳು ಹಾಗೂ ಜನಾಭಿಪ್ರಾಯಗಳು ಚುನಾವಣೆ ಫಲಿತಾಂಶದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬ ಕುತೂಹಲವೂ ಇದೆ. 

ಕುಟುಂಬ ರಾಜಕಾರಣದ ಆರೋಪ ಹಾಗೂ ಮತದಾರರಲ್ಲಿರುವ ಅಸಮಾಧಾನವನ್ನು ಕಾಂಗ್ರೆಸ್ ನಾಯಕರು ಹೇಗೆ ವಿಶ್ಲೇಷಿಸುತ್ತಾರೆ? ಚುನಾವಣೆ ವೇಳೆ ಮತದಾರರನ್ನು ಹೇಗೆ ಮನವೊಲಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. 

ಗೆಲುವಿನ ಲೆಕ್ಕಾಚಾರ: 

ಒಂದೆಡೆ ಕುಟುಂಬ ರಾಜಕಾರಣ ಆರೋಪದ ಒಳಪೆಟ್ಟು ಫಲಿತಾಂಶದ ಮೇಲೆ ಪರಿಣಾಮ ಬೀರುವ ಗುಮಾನಿ ನಡುವೆ, ಜಾತಿ ಲೆಕ್ಕಾಚಾರದ ಮತಗಳು ಕೈ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವ ವಿಶ್ವಾಸ ಮೂಡಿಸಿದೆ. ದಲಿತ, ಮುಸ್ಲಿಂ, ಕುರುಬ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್ ಮತ ಬುಟ್ಟಿಗೆ ಬೀಳುವುದು ಖಚಿತ. ಪರಿಶಿಷ್ಟ ಹಾಗೂ ಲಿಂಗಾಯತ ಮತಗಳನ್ನು ಸೆಳೆಯುವಲ್ಲಿ ಸಚಿವ ಸಂತೋಷ್ ಲಾಡ್‌ ಯಶಸ್ವಿಯಾಗುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಮಹಿಳೆಯಾಗಿದ್ದು ಮಹಿಳೆಯರ ಮತಗಳನ್ನು ಸೆಳೆಯಬಹುದು. ಜೊತೆಗೆ ಐದು ಗ್ಯಾರಂಟಿ ಯೋಜನೆಗಳು ಮಹಿಳಾ ಮತಗಳನ್ನು ಒಗ್ಗೂಡಿಸುತ್ತವೆ. 

ಯಾಸೀರ್ ಅಹಮದ್‌ಗೆ ಶಿಗ್ಗಾವಿ ಟಿಕೆಟ್ ಕೊಟ್ಟ ಕಾಂಗ್ರೆಸ್; 6ನೇ ಬಾರಿಯೂ ಮುಸ್ಲಿಮರಿಗೆ ಮಣೆ!

ಸ್ಥಳೀಯರಿಗೆ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನದಿಂದ ಸಂಡೂರಿನ ಬಿಜೆಪಿಯ ಪ್ರಭಾವಿ ಮುಖಂಡ ಕಾರ್ತಿಕ್ ಘೋರ್ಪಡೆ ಉಪ ಚುನಾವಣೆಯಿಂದ ದೂರ ಉಳಿಯಲಿದ್ದಾರೆ ಎಂಬ ಚರ್ಚೆಗಳು ಕಾಂಗ್ರೆಸ್ಸಿಗರಿಗೆ ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಹಣಾಹಣಿಯಲ್ಲಿ ಗೆಲುವು ಯಾರಿಗೆ ಎಂಬ ಕುತೂಹಲ ಶುರುವಾಗಿದೆ.

• ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತುಕಾರಾಂ ಅವರನ್ನು ಮತ್ತೆ ಸಂಸದರನ್ನಾಗಿ ಮಾಡಲಾಗಿದೆ. 
. ಅದೇ ಕುಟುಂಬಕ್ಕೆ ಶಾಸಕರಾಗಿ ಆಯ್ಕೆಯಾಗುವ ಅವಕಾಶ ನೀಡಿದರೆ, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದವರ ಪಾಡೇನು? 
• ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದು ಈ ಬಾರಿ ಚುನಾವಣೆ ಗೆಲುವು ಸುಲಭವಿದೆ. 
• ಇಂತಹ ಸಂದರ್ಭದಲ್ಲಾದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಸ್ಪರ್ಧೆಗಿಳಿಸಿ ಗೆಲ್ಲಿಸಿಕೊಳ್ಳುವ ಕಾಳಜಿಯನ್ನು ಸಚಿವ ಸಂತೋಷ್ ಲಾಡ್ ಸೇರಿದಂತೆ ಪಕ್ಷದ ರಾಜ್ಯ ನಾಯಕರು ತೋರಿಸಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.

Latest Videos
Follow Us:
Download App:
  • android
  • ios