ಮಹಾರಾಷ್ಟ್ರ ರೀತಿ ರಾಜ್ಯ ಸರ್ಕಾರ ಪತನ: ರಮೇಶ್ ಜಾರಕಿಹೊಳಿ ಭವಿಷ್ಯ
ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಪತನವಾಗಬಹುದು. ಒಂದೇ ರಾತ್ರಿಯಲ್ಲಿ ಎಲ್ಲವೂ ಬದಲಾಗಬಹುದು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿ (ಅ.31): ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಪತನವಾಗಬಹುದು. ಒಂದೇ ರಾತ್ರಿಯಲ್ಲಿ ಎಲ್ಲವೂ ಬದಲಾಗಬಹುದು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ರಾಜಕಾರಣ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದಲೇ ರಾಜ್ಯ ಸರ್ಕಾರ ಪತನ ಆಗಲಿದೆ. ಶೀಘ್ರದಲ್ಲೇ ಡಿ.ಕೆ.ಶಿವಕುಮಾರ್ ಮಾಜಿ ಮಂತ್ರಿಯಾಗಲಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರಕರಣವೊಂದರಲ್ಲಿ ಆಗಲಿರುವ ಹಿನ್ನಡೆಯಿಂದ ಮಾಜಿಯಾಗಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿಲ್ಲ. ಆದರೂ ಡಿ.ಕೆ.ಶಿವಕುಮಾರ್ ನಾಟಕ ಮಂಡಳಿ ಬಿಜೆಪಿಯ ಹೆಸರು ಕೆಡಿಸುತ್ತಿದೆ. ಆಪರೇಷನ್ ಕಮಲದ ಬಗ್ಗೆ ನಾವು ಚಕಾರ ಎತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರ ಸರ್ವಾಧಿಕಾರಿ ಧೋರಣೆ, ಸೊಕ್ಕಿನಿಂದಾಗಿ 2019ರಲ್ಲಿ ನಾವೇ ಸರ್ಕಾರ ಉರುಳಿಸಿದ್ದೇವೆಯೇ ಹೊರತು ಬಿಜೆಪಿ ನಾಯಕರಲ್ಲ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ವಿರುದ್ಧ ನಾವು ಸಂಚು ಮಾಡಿಲ್ಲ. ಗ್ಯಾರಂಟಿ ಯೋಜನೆ ಈಡೇರಿಸಲಾಗದೆ ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ. ಏನೇ ಇದ್ದರೂ ದಾಖಲೆ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಲೋಕಸಭೆ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಹೋರಾಟ: ಸಚಿವ ಎಚ್.ಕೆ.ಪಾಟೀಲ್
ಡಿಕೆಶಿ ಸಿ.ಡಿ. ಮಾಸ್ಟರ್: ಡಿ.ಕೆ.ಶಿವಕುಮಾರ್ ಸಿ.ಡಿ. ಮಾಸ್ಟರ್. ಎಲ್ಲರ ಸಿ.ಡಿ. ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಅವರೇನು ದೊಡ್ಡ ವ್ಯಕ್ತಿಯಲ್ಲ. ಧೈರ್ಯಶಾಲಿಯೂ ಅಲ್ಲ. ಪುಕ್ಕಲು, ಮೋಸಗಾರ. ಅವರಿಗೆ ಹೋರಾಟ ಮಾಡುವ ಶಕ್ತಿಯೂ ಇಲ್ಲ. ಪ್ರತಿಪಕ್ಷದಲ್ಲಿದ್ದಾಗ ಅಧಿಕಾರದಲ್ಲಿದ್ದವರ ಕಾಲಿಗೆ ಬೀಳುತ್ತ ಓಡಾಡುವ ಡಿ.ಕೆ.ಶಿವಕುಮಾರ್, ಅಧಿಕಾರದಲ್ಲಿದ್ದಾಗ ಎದೆ ಉಬ್ಬಿಸಿಕೊಂಡು ಓಡಾಡುತ್ತಾರೆ ಎಂದು ಆರೋಪಿಸಿದರು.
ಮಾಜಿ ಶಾಸಕಗೂ ಬ್ಲ್ಯಾಕ್‌ಮೇಲ್: 20 ದಿನದ ಹಿಂದೆ ಮಾಜಿ ಶಾಸಕ ನಾಗರಾಜಗೆ ಸಿ.ಡಿ. ಇದೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ನಿನ್ನದು, ರಮೇಶನದ್ದು ಬಹಳ ಜಾಸ್ತಿಯಾಗಿದೆ. ಎಸ್‌ಐಟಿ ರದ್ದುಗೊಳಿಸಿ ತನಿಖೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನಾನು ಕೂಡ ಸಿ.ಡಿ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ. ಎಷ್ಟೇ ಸಿ.ಡಿ. ಬಂದರೂ ನಾನು ಹೆದರಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ದೂರ ಉಳಿಯಲು ನಿರ್ಧಾರ: ಮುಂದಿನ ಎರಡು ವರ್ಷಗಳ ಕಾಲ ನಾನು ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಮನೆ ಹಾಗೂ ದೇವರ ದರ್ಶನಕ್ಕೆ ಆದ್ಯತೆ ನೀಡಲು ದೃಢಸಂಕಲ್ಪ ಮಾಡಿದ್ದೇನೆ. ಬಿಜೆಪಿ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ನಾನು ಅನಿವಾರ್ಯವಾಗಿ ಈಗ ಮಾಧ್ಯಮಗಳ ಎದುರು ಬರಬೇಕಾಯಿತು ಎಂದು ಹೇಳಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭಾನುವಾರವೂ ಭೇಟಿಯಾಗಿದ್ದೆ ಎಂದ ರಮೇಶ್ ಜಾರಕಿಹೊಳಿ, ಶೆಟ್ಟರ್ ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಗಳ ಎಡವಟ್ಟುಗಳಿಂದ ಕಾವೇರಿ ಸಮಸ್ಯೆ ಜೀವಂತ: ಎಚ್.ವಿಶ್ವನಾಥ್
ರಾಜ್ಯದ ಜನ ಚುನಾವಣೆಯಲ್ಲಿ ಏನು ತೀರ್ಪು ನೀಡಬೇಕೋ ನೀಡಿದ್ದಾರೆ. ನಮಗೆ ಮಾಡಲು ಅನೇಕ ಕೆಲಸಗಳಿವೆ. ಆ ಕೆಲಸ ಮಾಡುತ್ತಿದ್ದೇವೆ. ಅನಗತ್ಯ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ. ಆಪರೇಷನ್ ಬಗ್ಗೆ ಎಲ್ಲ ಮಾಹಿತಿಯೂ ಗೊತ್ತಿದೆ. ಆದರೆ ಅವರ ಯಾವುದೇ ಪ್ರಯತ್ನ ಫಲ ನೀಡಲ್ಲ.
- ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ