ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 660 ಪಿಡಿಒ, 604 ಗ್ರೇಡ್ 1 ಕಾರ್ಯದರ್ಶಿ ಹಾಊ 719 ಗ್ರೇಡ್ 2 ಕಾರ್ಯದರ್ಶಿ ಹುದ್ದೆಗಳು ಖಾಲಿಯಿವೆ. ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 150 ಪಿಡಿಒಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಉಳಿದ 510 ಪಿಡಿಒಗಳ ನೇಮಕಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ: ಪ್ರಿಯಾಂಕ್ ಖರ್ಗೆ
ವಿಧಾನ ಪರಿಷತ್(ಜು.22): ಬೇರೆ ಇಲಾಖೆ ಹಾಗೂ ಸ್ಥಳಗಳಿಗೆ ನಿಯೋಜನೆ ಮೇಲೆ ನೇಮಕವಾಗಿರುವ ಗ್ರಾಮ ಪಂಚಾಯತಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳನ್ನು ವಾಪಸು ಮಾತೃ ಇಲಾಖೆಗೆ ಕರೆಸಿಕೊಳ್ಳಲು ಆದೇಶಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಶಶಿಲ್ ಜಿ.ನಮೋಶಿ ಪರವಾಗಿ ಜೆಡಿಎಸ್‌ನ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 660 ಪಿಡಿಒ, 604 ಗ್ರೇಡ್ 1 ಕಾರ್ಯದರ್ಶಿ ಹಾಊ 719 ಗ್ರೇಡ್ 2 ಕಾರ್ಯದರ್ಶಿ ಹುದ್ದೆಗಳು ಖಾಲಿಯಿವೆ. ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 150 ಪಿಡಿಒಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಉಳಿದ 510 ಪಿಡಿಒಗಳ ನೇಮಕಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಗ್ರಾ.ಪಂ. ಕಾರ್ಯದರ್ಶಿ ಹುದ್ದೆ ಸೇರಿ ಆರ್‌ಡಿಪಿಆರ್ ಇಲಾಖೆಗೆ ಮಂಜೂರಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.
ಕೌನ್ಸೆಲಿಂಗ್ ಮೂಲಕ ಪಿಡಿಒಗಳ ವರ್ಗಾವಣೆ: ಸಚಿವ ಪ್ರಿಯಾಂಕ್ ಖರ್ಗೆ
ನನ್ನ ವಿರುದ್ಧ ಹಕ್ಕು ಚ್ಯುತಿ ಮಂಡನೆ:
ಶಾಸಕರೊಬ್ಬರ ಬಳಿ ಆಪ್ತ ಸಹಾಯಕರಾಗಿ ನಿಯೋನೆಗೊಂಡಿರುವ ಪಿಡಿಒ ಒಬ್ಬರು ಮಾತೃ ಇಲಾಖೆಗೆ ವಾಪಸಾಗದೆ ಶಾಸಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ನಮ್ಮದೇ ಪಕ್ಷದ ಶಾಸಕರು ಆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ವಿಧಾನಸಭೆಯಲ್ಲಿ ಹಕ್ಕು ಚ್ಯುತಿಯನ್ನೂ ಮಂಡಿಸಿದ್ದಾರೆ. ಹೀಗಾದರೆ ಇಲಾಖೆಯಲ್ಲಿ ಕೆಲಸ ಮಾಡುವುದು ಕಷ್ಟಎಂದು ಪ್ರಿಯಾಂಕ್ ಖರ್ಗೆ ಅಳಲು ತೋಡಿಕೊಂಡರು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಾಗವಾಗಿ ಕೆಲಸ ನಡೆಯುವಂತೆ ಮಾಡಲು ನಿಯೋಜನೆ ಮೇರೆಗೆ ಬೇರೆ ಇಲಾಖೆ ಹಾಗೂ ಬೇರೆ ಜಿಲ್ಲೆಗಳ ಗ್ರಾ.ಪಂ.ಗೆ ತೆರಳಿರುವ ಪಿಡಿಒಗಳನ್ನು ವಾಪಸು ಕರೆಸಿಕೊಳ್ಳಲಾಗುತ್ತಿದೆ. ಈ ಕುರಿತಂತೆ ಆದೇಶ ಹೊರಡಿಸಲಾಗಿದ್ದು, ಅವರಲ್ಲಿ ಬಹುತೇಕರು ಮಾತೃ ಇಲಾಖೆ ಹಾಗೂ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದವರು ವಾಪಸು ಬರುವುದನ್ನು ತಡೆಯಲು ಶಾಸಕರು, ಸಚಿವರ ಮೂಲಕ ಒತ್ತಡ ಹೇರುತ್ತಿದ್ದಾರೆ. ಆದರೆ, ಇಲಾಖೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡಬೇಕೆಂದರೆ ಸಿಬ್ಬಂದಿ, ಅಧಿಕಾರಿಗಳನ್ನು ವಾಪಸು ಕರೆಸಿಕೊಳ್ಳುವುದು ಅನಿವಾರ್ಯವಾಗಿದ್ದು, ಜನಪ್ರತಿನಿಧಿಗಳು ಅದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
