ಪ್ರಧಾನಿ ಮೋದಿ ದೈವಾಂಶ ಸಂಭೂತ, ಸಂಸ್ಕಾರವಂತ ಮನುಷ್ಯ: ಎಚ್.ಡಿ.ದೇವೇಗೌಡ
ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಒಬ್ಬ ಅತ್ಯುತ್ತಮ ನಾಯಕ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಣ್ಣಿಸಿದರು. ನಾಗಮಂಗಲ ತಾಲೂಕು ಆದಿ ಚುಂಚನಗಿರಿಯಲ್ಲಿ ನಡೆದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಡ್ಯ (ಜ.19): ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಒಬ್ಬ ಅತ್ಯುತ್ತಮ ನಾಯಕ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಣ್ಣಿಸಿದರು. ನಾಗಮಂಗಲ ತಾಲೂಕು ಆದಿ ಚುಂಚನಗಿರಿಯಲ್ಲಿ ನಡೆದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 60 ವರ್ಷಗಳಲ್ಲಿ ನಾನು ಯಾರನ್ನೂ ನಾಯಕನೆಂದು ಒಪ್ಪಿಕೊಂಡಿರಲಿಲ್ಲ. ಆದರೆ, ನಾನು ಈಗ ಮೋದಿ ಅವರನ್ನು ನಾಯಕನೆಂದು ಮನಸಾರೆ ಒಪ್ಪಿಕೊಂಡಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಅವರ ಆಡಳಿತವನ್ನು ಗಮನಿಸುತ್ತಾ ಬಂದಿದ್ದೇನೆ.
ನಾನು ಇದುವರೆಗೂ ಮೋದಿ ಅವರ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲ. ಪ್ರಧಾನಿಯಾಗಿ ನೀಡುತ್ತಿರುವ ಸಮರ್ಥ ಆಡಳಿತ ತೃಪ್ತಿದಾಯಕವಾಗಿದೆ ಎಂದು ಬಣ್ಣಿಸಿದರು. ನಾನೂ ಸೇರಿದಂತೆ ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್‌ಸಿಂಗ್ ಅವರಿಂದ ಮಾಡಲಾಗದ ಅದ್ಭುತ ಕೆಲಸಗಳನ್ನು ಮೋದಿ ಮಾಡಿ ತೋರಿಸಿದ್ದಾರೆ. ಮಾನಸ ಸರೋವರದಲ್ಲಿ ಹುಟ್ಟಿ ಹರಿಯುತ್ತಿದ್ದ ಪವಿತ್ರ ಗಂಗೆ ಕಲುಷಿತವಾಗಿದ್ದಳು. ಆ ಗಂಗೆಯನ್ನು ಶುದ್ಧೀಕರಣ ಮಾಡಲು ಕಂಕಣತೊಟ್ಟರು. ಕೆಲವೇ ವರ್ಷಗಳಲ್ಲಿ ಗಂಗೆ ನಿರ್ಮಲವಾದಳು. ಈಗ ಎಳನೀರಿನಂತೆ ಪರಿಶುದ್ಧವಾಗಿ ಹರಿಯುತ್ತಿದ್ದಾಳೆ. ಇದಕ್ಕೆ ಮೋದಿ ಅವರಲ್ಲಿರುವ ಪರಿಶುದ್ಧ ಮನಸ್ಸು ಕಾರಣ ಎಂದು ಹೇಳಿದರು.
ಅಯೋಧ್ಯೆ ರಾಮಮಂದಿರಕ್ಕೆ ಹೋಗಬೇಕೆಂಬ ಆಸೆ ಇದೆ: ಎಚ್.ಡಿ.ದೇವೇಗೌಡ
ಪ್ರಧಾನಿಯಾಗಿದ್ದರೂ ಮೋದಿ ಅವರು ಕೇದಾರನಾಥ, ಸೋಮನಾಥದಲ್ಲಿ ಪ್ರಾರ್ಥನೆ ಮಾಡುತ್ತಾರೆ. ಅವರಲ್ಲಿರುವ ಅಂತಃಶಕ್ತಿ ಬಹಳ ದೊಡ್ಡದು. ಕಳೆದ ಹತ್ತು ವರ್ಷಗಳ ಅವರ ಆಡಳಿತ, ಕಾರ್ಯವೈಖರಿ ನನಗೆ ಮೆಚ್ಚುಗೆಯಾಗಿದೆ. ಅವರು ಹುಟ್ಟಿದ್ದು ಗುಜರಾತ್, ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ವಾರಣಸಿ. ಕಾಶಿಗೆ ಹೊಸ ರೂಪ ಕೊಟ್ಟರು. ಇದೇ ಕಾರಣಕ್ಕೆ ನಾನು ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದೇನೆ. ಈ ವಿಷಯವಾಗಿ ನಾನು ಸುಳ್ಳು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮೋದಿ ಒಬ್ಬ ದೊಡ್ಡ ಮನುಷ್ಯ. ಸಂಸ್ಕಾರವಂತ ಮನುಷ್ಯ ಎನ್ನುವುದನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ.
ನಾನು ಕೆಲವು ದಿನಗಳ ಹಿಂದೆ ಅವರನ್ನು ಭೇಟಿ ಮಾಡಿದಾಗ ಅವರು ನನ್ನ ಹತ್ತಿರ ಬಂದು ಗೌರವದಿಂದ ಕೈ ಹಿಡಿದು ಕರೆದುಕೊಂಡು ಹೋಗಿ ಕುರ್ಚಿಯಲ್ಲಿ ಕೂರಿಸಿದರು. ಅಂತಹ ದೊಡ್ಡತನವನ್ನು ನಾನು ಯಾರಲ್ಲೂ ಕಂಡಿರಲಿಲ್ಲ ಎಂದು ಹೇಳಿದರು. ಮೋದಿ ದೈವಾಂಶ ಸಂಭೂತ. ಅವರು 11 ದಿನ ಆಹಾರ ಸೇವಿಸದೆ ಉಪವಾಸವಿರುತ್ತಾರೆಂದರೆ ಅವರಲ್ಲಿರುವ ಅಂತಃಶಕ್ತಿಯ ಅರಿವಾಗುತ್ತದೆ. ಅವರು ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆಂದರೆ ನಾನು ಒಪ್ಪುವುದಿಲ್ಲ. ಇದರಲ್ಲಿ ರಾಜಕೀಯ ಮಾಡುವುದಕ್ಕೆ ಏನಿದೆ. ದೇವರಲ್ಲಿ ಅವರಿಗಿರುವ ಅನನ್ಯ ಭಕ್ತಿ, ಶ್ರದ್ಧೆ ಅವರಿಗೆ ಆ ದಿವ್ಯಶಕ್ತಿಯನ್ನು ನೀಡಿದೆ ಎಂದು ಬಣ್ಣಿಸಿದರು.
ಶ್ರೀರಾಮಮಂದಿರ ವಿಷಯದಲ್ಲಿ ಏನೇ ವಿವಾದಗಳಿರಲಿ. ಹಿಂದೂ-ಮುಸ್ಲಿಂ ಸಂಘರ್ಷಗಳೇನೇ ಇರಲಿ. ನಾನು ಅವುಗಳ ಬಗ್ಗೆ ಮಾತನಾಡುವುದಿಲ್ಲ. ಅವೆಲ್ಲವನ್ನೂ ಮೀರಿ ಶಾಂತಿಯುತವಾಗಿ ಶ್ರೀರಾಮಮಂದಿರವನ್ನು ನಿರ್ಮಿಸುವುದು ಸುಲಭದ ಕಾರ್ಯವಲ್ಲ. ಕೆಲವೇ ಜನರು ಅವರನ್ನು ವಿರೋಧ ಮಾಡಬಹುದು. ರಾಮಮಂದಿರ ಉದ್ಘಾಟನೆಗೂ ಹೋಗದಿರಬಹುದು. ಆದರೆ, ದೇಶದ ಜನರು ಅವರನ್ನು ನಾಯಕ ಎಂದು ಒಪ್ಪಿಕೊಂಡಿರುವುದು ಬಹುದೊಡ್ಡ ಸಾಧನೆ ಎಂದರು.
ಮೇಕೆದಾಟು ಯೋಜನೆ ಅನುಷ್ಠಾನವಾಗದಿದ್ದರೆ ಬೆಂಗಳೂರಿಗೆ ಜಲಸಂಕಷ್ಟ: ದೇವೇಗೌಡ ಎಚ್ಚರಿಕೆ
ನಾನು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದೆ. ಮೋದಿ ಅವರೂ ಬಡ ಕುಟುಂಬದಲ್ಲೇ ಹುಟ್ಟಿದರು. ಆದರೆ, ಅವರು ಸಂಘ ಪರಿವಾರಕ್ಕೆ ಸಂಪೂರ್ಣ ಬೆಂಬಲ ನೀಡಿದರು. ನನಗೆ ರೈತರೇ ಪರಿವಾರ. ಅವರಿಗೆ ಶಕ್ತಿಯಾಗಿ ನಿಂತು ಹೋರಾಟ ಮಾಡಿದೆ. ಹಲವಾರು ರಾಜಕೀಯವಾಗಿ, ರೈತರ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಹಲವಾರು ಸವಾಲುಗಳನ್ನು ನನಗೆ ಎದುರಾಗಿದ್ದವು. ರೈತ ಸಮುದಾಯ, ಕಾಲಭೈರವನ ಕೃಪೆ, ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಆಶೀರ್ವಾದ ಎಲ್ಲವೂ ನನಗೆ ಶಕ್ತಿಯಾಗಿ ನಿಂತವು ಎಂದು ಹೇಳಿದರು.