ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ತಮ್ಮದೆಂದು ಹೇಳಲಾಗುತ್ತಿರುವ ವೈರಲ್ ಆಡಿಯೋವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಇದು ತಮ್ಮ ತೇಜೋವಧೆ ಮಾಡುವ ಉದ್ದೇಶದಿಂದ ಎಐ ತಂತ್ರಜ್ಞಾನ ಬಳಸಿ ಕೃತಕವಾಗಿ ಸೃಷ್ಟಿಸಿದ ಆಡಿಯೋ ಎಂದು ಆರೋಪಿಸಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಂಡ್ಯ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರದ್ದೆಂದು ಹೇಳಲಾಗುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಶಿವರಾಮೇಗೌಡ ಅವರೇ ಸ್ಪಷ್ಟನೆ ನೀಡಿದ್ದು, ಈ ಆಡಿಯೋ ಸಂಪೂರ್ಣವಾಗಿ ತಮಗೆ ಅಪಕೀರ್ತಿ ತರುವ ಉದ್ದೇಶದಿಂದ ಕೃತಕವಾಗಿ ಸೃಷ್ಟಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೇವಲ 2 ನಿಮಿಷ 42 ಸೆಕೆಂಡ್ ಮಾತ್ರ ಮಾತನಾಡಿದ್ದೇನೆ
ಈ ಕುರಿತು ಮಾತನಾಡಿದ ಅವರು, “ನಾನು ಜೆಡಿಎಸ್ ಪಕ್ಷದ ಒಬ್ಬ ಕಾರ್ಯಕರ್ತನೊಂದಿಗೆ ಕೇವಲ 2 ನಿಮಿಷ 42 ಸೆಕೆಂಡ್ ಮಾತ್ರ ಮಾತನಾಡಿದ್ದೇನೆ. ಆ ಸಂಭಾಷಣೆ ನಡೆದಿದ್ದು ಸುಮಾರು 18 ದಿನಗಳ ಹಿಂದೆ ಆಗಲೇ ಆಡಿಯೋವನ್ನು ವೈರಲ್ ಮಾಡಬೇಕಿದ್ದರೆ ಮಾಡಬಹುದಿತ್ತು. ಆದರೆ ಈಗ ಏಕಾಏಕಿ ಈ ಆಡಿಯೋ ವೈರಲ್ ಆಗಿರುವುದು ಸಂಶಯ ಹುಟ್ಟಿಸುತ್ತದೆ” ಎಂದು ಹೇಳಿದರು.
ವೈರಲ್ ಆಗಿರುವ ಆಡಿಯೋದಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಬಗ್ಗೆ ನಿಂದನಾತ್ಮಕ ಮಾತುಗಳನ್ನು ನಾನು ಆಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ನಾನು ಮಾತನಾಡಿದ್ದ ಮಾತುಗಳನ್ನು ತಮಗೆ ಬೇಕಾದಂತೆ ಕತ್ತರಿಸಿ, ಜೋಡಿಸಿ, ಸುಮಾರು 20 ನಿಮಿಷಗಳ ಆಡಿಯೋ ರೂಪದಲ್ಲಿ ಪರಿವರ್ತನೆ ಮಾಡಲಾಗಿದೆ. ಇದನ್ನು ಎಐ ತಂತ್ರಜ್ಞಾನ ಬಳಸಿ ತಿದ್ದುಪಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ” ಎಂದು ಆರೋಪಿಸಿದರು.
ನನ್ನ ತೇಜೋವಧೆ ಮಾಡುವ ಉದ್ದೇಶ
ಇದು ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ನಡೆಸಿದ ಕುತಂತ್ರ ಎಂದು ಶಿವರಾಮೇಗೌಡ ಆರೋಪಿಸಿದರು. “ಆ ಆಡಿಯೋದಲ್ಲಿ ಕೇಳಿಬರುವ ಹಲವಾರು ಮಾತುಗಳನ್ನು ನಾನು ಹೇಳಿಲ್ಲ. ನಾನು ಅಂಥ ಮಾತುಗಳನ್ನು ಆಡಿದ್ದರೆ, ಅದು 18 ದಿನಗಳ ಹಿಂದೆಯೇ ವೈರಲ್ ಆಗಬೇಕಿತ್ತು. ಆದರೆ ಇದೀಗ ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಿಯೋವನ್ನು ಸೃಷ್ಟಿಸಿ ಹರಿಬಿಟ್ಟಿದ್ದಾರೆ” ಎಂದು ಕಿಡಿಕಾರಿದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದ ಅವರು, “ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಹೇಳಿದರು. ಈ ಹೇಳಿಕೆ ಮಂಡ್ಯ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


