ಡಿ.ಕೆ.ಶಿವಕುಮಾರ್ ಕೇಡಿ ತರಹ ಆಡಬಾರದು: ಸಿ.ಟಿ.ರವಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಡಿ ತರಹ ಆಡಬಾರದು. ಆ ರೀತಿಯಲ್ಲಿ ನಡೆದುಕೊಳ್ಳುವುದು ಅವರ ಪಕ್ಷಕ್ಕೆ, ರಾಜ್ಯಕ್ಕೆ ಒಳ್ಳೆಯ ಲಕ್ಷಣವಂತೂ ಅಲ್ವೇ ಅಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು (ಅ.19): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಡಿ ತರಹ ಆಡಬಾರದು. ಆ ರೀತಿಯಲ್ಲಿ ನಡೆದುಕೊಳ್ಳುವುದು ಅವರ ಪಕ್ಷಕ್ಕೆ, ರಾಜ್ಯಕ್ಕೆ ಒಳ್ಳೆಯ ಲಕ್ಷಣವಂತೂ ಅಲ್ವೇ ಅಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ಲೂಟಿ ರವಿ ಎಂದು ಹೇಳಿರುವುದಕ್ಕೆ ಕಿಡಿ ಕಾರಿದ ಸಿ.ಟಿ.ರವಿ, ನಿಮ್ಮನ್ನು ಡಿಕೆ ಬದಲು ಕೇಡಿ ಎಂದು ಕರೆಯಬಹುದಲ್ವಾ ಎಂದು ಪ್ರಶ್ನಿಸಿದರು.
ಐಟಿ ದಾಳಿಯಲ್ಲಿ ಸಿಕ್ಕಿರುವುದು ಕಾಂಗ್ರೆಸ್‌ನವರ ಬೇನಾಮಿ ಹಣ ಎನ್ನುವುದು ನಮಗೆ ಬಂದಿರುವ ವರದಿ. ಇವರೇ ನಂಬರ್ 1, ನಂಬರ್ 2 ಬೇನಾಮಿಗಳ ಮೂಲಕ ಸಂಗ್ರಹಿಸಿರುವ ಹಣ ಎಂಬುದು ನಮಗೆ ಬಂದಿರುವ ಮಾಹಿತಿ. ನಮ್ಮದು ಆರೋಪ. ಅದನ್ನು ನಿರಾಕರಿಸುವ ಅಧಿಕಾರ ಅವರಿಗಿದೆ. ನಿರಾಕರಿಸುವ ಭರದಲ್ಲಿ ಕುಮಾರಸ್ವಾಮಿ ಅವರಿಗೆ ನಕಲಿ ಸ್ವಾಮಿ ಅಂತಾ ಹೇಳೋದು, ಆಶ್ವತ್ಥ ನಾರಾಯಣ ಅವರಿಗೆ ನವರಂಗಿ ನಾರಾಯಣ ಅನ್ನೋದು, ನನಗೆ ಸಿ.ಟಿ. ತೆಗೆದು ಲೂಟಿ ಅನ್ನೋದು ಸರಿಯೇ?. ಹಾಗಾದರೆ ನಿಮ್ಮ ಡಿಕೆ ತೆಗೆದು ಕೇಡಿ ಅನ್ನಬಹುದಲ್ವಾ ಎಂದು ಪ್ರಶ್ನಿಸಿದರು.
ಪಂಚರಾಜ್ಯ ಚುನಾವಣೆಗಾಗಿ ಹೈಕಮಾಂಡ್ ನಯಾಪೈಸೆ ಕೇಳಿಲ್ಲ: ಸಿದ್ದರಾಮಯ್ಯ
ಲೂಟಿ ರವಿಗೆ ತಕ್ಕ ಉತ್ತರ ನೀಡುವೆ: ‘ನಾನು ಹೇಡಿ ಅಲ್ಲ, ಹೆದರಿ ಎಲ್ಲಿಯೂ ಓಡಿ ಹೋಗಲ್ಲ. ಮಾಜಿ ಮುಖ್ಯಮಂತ್ರಿ ನಕಲಿ ಸ್ವಾಮಿ ಬ್ಲಾಕ್ ಮೇಲ್, ಲೂಟಿ ರವಿ ಎಲ್ಲರಿಗೂ ತಕ್ಕ ಉತ್ತರ ಕೊಡುತ್ತೇನೆ. ಅವರದೆಲ್ಲ ಬಿಚ್ಚಿಡುತ್ತೇನೆ. ಅದಕ್ಕಾಗಿ ಸೂಕ್ತ ಮುಹೂರ್ತ ನಿಗದಿ ಮಾಡುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಬೆಂಗಳೂರು ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ ಹಾಗೂ ಕುಮಾರಕೃಪ ಅತಿಥಿ ಗೃಹದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಹೈಕಮಾಂಡ್ ನಾಯಕರು ಹಾಗೂ ಸಚಿವರಿಗೆ ಹಣ ಕಲೆಕ್ಷನ್ ಟಾಸ್ಕ್ ನೀಡಿದ್ದಾರೆ’ ಎಂಬ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಟಿ. ರವಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರು.
‘ಯಾರಿಗೆ ಏನು ಉತ್ತರ ನೀಡಬೇಕೋ ನೀಡುತ್ತೇನೆ. ಅವರಿಗೆ ಐಟಿ ಇಲಾಖೆ ಪ್ರಕ್ರಿಯೆ ಗೊತ್ತಿಲ್ಲ. ಅವರು ಏಜೆಂಟರಂತೆ ಮಾತನಾಡುತ್ತಿದ್ದಾರೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅವರಂತೆ ಮಾತನಾಡಲು ಆಗುವುದಿಲ್ಲ. ನ್ಯಾಯಾಲಯದ ವಿಚಾರದಲ್ಲಿ ಆ ರೀತಿ ಮಾತನಾಡಿದರೆ ತಪ್ಪಾಗುತ್ತದೆ. ಅವರಿಗೆ ಉತ್ತರ ನೀಡಲು ಮುಹೂರ್ತ ಫಿಕ್ಸ್ ಮಾಡುತ್ತೇನೆ’ ಎಂದು ತಿಳಿಸಿದರು. ಪ್ರತಿಪಕ್ಷದವರ ಆರೋಪಕ್ಕೆ ಹೈವೋಲ್ಟೇಜೂ ಕೊಡ್ತಿನಿ, ಲೋವೋಲ್ಟೇಜೂ ಕೊಡ್ತಿನಿ. ನಕಲಿಗೂ ಕೊಡುವೆ, ಲೂಟಿಗೂ ಕೊಡುವೆ, ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ತಿರುಗೇಟು ನೀಡಿದರು.
ಕಾನೂನು ಪದವಿಗೆ ಸೇರದಿದ್ದರೆ ನಾನು ಕುರಿ ಕಾಯುತ್ತ ಇರಬೇಕಿತ್ತು: ಸಿದ್ದರಾಮಯ್ಯ
ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರು ಪ್ರತಿಭಟನೆ ಮಾಡಬೇಕು, ಪ್ರತಿಭಟನೆ ಮಾಡಿದರೆ ಜನರಿಗೆ ಅವರ ಎಲ್ಲಾ ತರಹದ ಲೂಟಿ ಬಗ್ಗೆ ಗೊತ್ತಾಗುತ್ತದೆ, ಎಲ್ಲವನ್ನೂ ಬಿಚ್ಚಿಡುತ್ತೇವೆ ಎಂದು ಎಚ್ಚರಿಸಿದರು. ಹೈಕೋರ್ಟ್ ತಡೆಯಾಜ್ಞೆ ತೆರವಿಗೆ ಸಿಬಿಐ ಮಾಡಿದ್ದ ಮನವಿಯನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್, ‘ಶಿವಕುಮಾರ್ ಎಲ್ಲಿಯೂ ಓಡಿ ಹೋಗೋಲ್ಲ’ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಹೌದು, ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ನ್ಯಾಯಾಲಯದ ವಿಚಾರಣೆ, ನೆಲದ ಕಾನೂನನ್ನು ನಾನು ಗೌರವಿಸುತ್ತೇನೆ’ ಎಂದರು.