ಕೊಟ್ಟ ಭರವಸೆ ಈಡೇರಿಸಲಾಗದೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ಸಿಗರು ಕೆಲಸ ಮಾಡಲು ನಾಲಾಯಕ್‌ ಎಂದು ಮಾಜಿ ಸಚಿವ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಜೂ.21): ಕೊಟ್ಟ ಭರವಸೆ ಈಡೇರಿಸಲಾಗದೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ಸಿಗರು ಕೆಲಸ ಮಾಡಲು ನಾಲಾಯಕ್‌ ಎಂದು ಮಾಜಿ ಸಚಿವ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಚಿತಾವಣೆಯಿಂದ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ. ಇದು ಅಕ್ಷಮ್ಯ. ರಾಜ್ಯ ಸರ್ಕಾರ 10 ಕೆ.ಜಿ. ಅಕ್ಕಿ ಕೊಡುವುದು ಸುಳ್ಳು. ಪ್ರಧಾನಿ ಮೋದಿ ಅವರ ಅಕ್ಕಿ ಮಾತ್ರ ಗ್ಯಾರಂಟಿ. ಸರ್ಕಾರ ಗ್ಯಾರಂಟಿಗಳನ್ನು ಷರತ್ತುಗಳ ಮೇಲೆ ಜಾರಿ ಮಾಡುತ್ತಿದೆ. ಕಾಂಗ್ರೆಸ್ಸಿಗರದು ಮಾತು ತಪ್ಪಿದ, ಮೋಸ ಮಾಡುವ, ವಂಚನೆಯ ಸರ್ಕಾರ. 

ಅಕ್ಕಿ ಕೊಡುವುದನ್ನು ಮುಂದೂಡುವ ಉದ್ದೇಶದಿಂದ ಪ್ರಧಾನಿ ಮೋದಿ ಅವರ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಕೆಲಸ ಮಾಡಲು ನಾಲಾಯಕ್‌. ಕೆಲಸಕ್ಕೆ ಬಾರದವರು ಎಂದು ಕಿಡಿಕಾರಿದರು. ರಾಜ್ಯ ಸರ್ಕಾರದಲ್ಲಿ ಸಚಿವರು ಕೆಲಸ ಬಿಟ್ಟು ಬೇರೆಲ್ಲಾ ಮಾಡುತ್ತಿದ್ದಾರೆ ಎಂದು ಅವರದೇ ಪಕ್ಷದ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ ಎಂದು ನೆನಪಿಸಿದ ಅಶೋಕ್‌, ವಿದ್ಯುತ್‌ ದರ ಏರಿಕೆಯನ್ನು ಖಂಡಿಸಿದರು. ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮುಂದಿನ ದಿನಗಳಲ್ಲಿ ಟೈಯರ್‌ಗಳೂ ಇರುವುದಿಲ್ಲ ಎಂದು ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಟೀಕಿಸಿದರು.

ಧಮ್‌ ಇದ್ರೆ 15 ಕೆ.ಜಿ. ಅಕ್ಕಿ ಕೊಡಿ: ಸಿದ್ದುಗೆ ಸವಾಲ್ ಹಾಕಿದ ಮಾಜಿ ಸಿಎಂ ಬೊಮ್ಮಾಯಿ

10 ಕೇಜಿಗಾಗಿ ಬಿಜೆಪಿ ಬಿಗಿಪಟ್ಟು: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ಗ್ಯಾರಂಟಿ ಯೋಜನೆಯಡಿ ಬಡವರಿಗೆ ಹತ್ತು ಕೆ.ಜಿ. ಅಕ್ಕಿ ವಿತರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದೆ. ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಒಟ್ಟು ಮೂರು ಹಂತದಲ್ಲಿ ಹೋರಾಟಕ್ಕೆ ಮುಂದಾಗಿದೆ. ಈ ಪೈಕಿ ಮೊದಲ ಹಂತವಾಗಿ ಬಿಜೆಪಿ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಹತ್ತು ಸಂಘಟನಾತ್ಮಕ ವಿಭಾಗ ಕೇಂದ್ರಗಳಲ್ಲಿ ಹೋರಾಟ ನಡೆಯಲಿದೆ.

ಎರಡನೇ ಹಂತವಾಗಿ ಬರುವ ಜುಲೈ 4ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ಮೂರನೇ ಹಂತವಾಗಿ ಜುಲೈ ಮೊದಲ ವಾರದಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ. ‘ಹೇಳಿದ್ದೇನು, ಮಾಡಿದ್ದೇನು? ನುಡಿದಂತೆ ನಡೆಯದ ಕಾಂಗ್ರೆಸ್‌ ಸರ್ಕಾರ’ ಎಂಬುದು ಒಟ್ಟಾರೆ ಹೋರಾಟದ ಘೋಷವಾಕ್ಯ ಆಗಿರಲಿದೆ. ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮಾಜಿ ಸಚಿವ ಹಾಗೂ ಶಾಸಕ ಆರ್‌.ಅಶೋಕ್‌, ಪಕ್ಷದ ಸಂಘಟನಾತ್ಮಕ ವಿಭಾಗಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರ್ಗಿ ಹಾಗೂ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಪಕ್ಷದ ಶಾಸಕರು, ಸಂಸದರು, ಮುಖಂಡರು ಹಾಗೂ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕೇಂದ್ರದಿಂದ ಸರ್ವರ್ ಹ್ಯಾಕ್ ಆರೋಪ: ಜಾರಕಿಹೊಳಿಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು!

ಎಲ್ಲವೂ ಉಚಿತ ಎಂದಿದ್ದ ಕಾಂಗ್ರೆಸ್ಸಿಗರು ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ಕೆಲವಂತೂ ಅನುಷ್ಠಾನಕ್ಕೆ ಸಾಧ್ಯವಿಲ್ಲದ ಷರತ್ತುಗಳನ್ನು ಹಾಕಿದ್ದಾರೆ. ಹಿಂದೆ ಎಲ್ಲ ನಿರುದ್ಯೋಗಿ ಪದವೀಧರ ಯುವಕರಿಗೆ 3 ಸಾವಿರ ರು., ಡಿಪ್ಲೊಮಾ ಪಡೆದ ನಿರುದ್ಯೋಗಿಗಳಿಗೆ 1,500 ರು. ಕೊಡುವುದಾಗಿ ತಿಳಿಸಿದ್ದರು. ಈಗ 2022-23ರಲ್ಲಿ ಪದವಿ, ಡಿಪ್ಲೊಮಾ ಪಡೆದು ಆರು ತಿಂಗಳ ಪ್ರಯತ್ನದ ಬಳಿಕವೂ ಉದ್ಯೋಗ ಲಭಿಸದವರು ಎಂಬ ಷರತ್ತು ಹಾಕುತ್ತಿದ್ದಾರೆ ಎಂದು ಹರಿಹಾಯ್ದರು.