ನಾವು ಹಿಂದೂಗಳು ಭಾರತಾಂಬೆ ಮಕ್ಕಳು: ರಾಮಲಿಂಗಾರೆಡ್ಡಿಗೆ ಈಶ್ವರಪ್ಪ ಹೇಳಿದ್ದೇನು?
ರಾಗಿಗುಡ್ಡ ಗಲಭೆ ಪ್ರಕರಣದಲ್ಲಿ ಬಿಜೆಪಿಯ ಕೆಲವರು ವೇಷ ಮರೆಸಿಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಶಿವಮೊಗ್ಗ (ಅ.06): ರಾಗಿಗುಡ್ಡ ಗಲಭೆ ಪ್ರಕರಣದಲ್ಲಿ ಬಿಜೆಪಿಯ ಕೆಲವರು ವೇಷ ಮರೆಸಿಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಇದು ಹೌದು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಎಸ್‌ಪಿ ಅವರು ಹೇಳಿದರೆ ರಾಮಲಿಂಗ ರೆಡ್ಡಿ ಹೇಳಿದಂಗೆ ನಾನು ಕೇಳುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಎಸೆದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗ ರೆಡ್ಡಿ ಇಷ್ಟು ಕೆಳಮಟ್ಟದ ರಾಜಕೀಯಕ್ಕೆ ಇಳಿಯುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಅವರು ಶಿವಮೊಗ್ಗಕ್ಕೆ ಬರಲಿ, ಅವರ ಎದುರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಎಸ್‌ಪಿ ಅವರನ್ನು ಕೂರಿಸಿ ಕೇಳುತ್ತೇನೆ ಎಂದರು. ರಾಮಲಿಂಗ ರೆಡ್ಡಿ ಅವರು ಕತ್ತಲಲ್ಲಿ ಕೂತು ಬಿಜೆಪಿಯತ್ತ ಒಂದು ಬಾಣ ಬಿಟ್ಟಿದ್ದಾರೆ. ಅವರಿಗೆ ಮಧು ಬಂಗಾರಪ್ಪ ಹಾಗೂ ಎಸ್‌ಪಿ ಅವರ ಮೇಲೆ ನಂಬಿಕೆ ಇಲ್ಲವೆಂದರೆ ಜೈಲಿಗೆ ಹೋಗಿ, ರಾಗಿಗುಡ್ಡ ಪ್ರಕರಣದಲ್ಲಿ ಬಂಧನವಾಗಿರುವ ಮುಸ್ಲಿಂ ಗೂಂಡಾಗಳನ್ನು ಮಾತನಾಡಿಸಿದರೆ ಸತ್ಯಾಂಶ ಗೊತ್ತಾಗುತ್ತದೆ ಎಂದು ಕುಟುಕಿದರು.
ಕ್ಷಮೆಯಾಚಿಸಲಿ: ರಾಗಿಗುಡ್ಡದಲ್ಲಿ ಹಿಂದುಗಳ ಮನೆಗಳನ್ನು ಹುಡುಕಿ ಕಲ್ಲೊಡೆದರೂ ನಾವು ಯಾವುದೇ ಮುಸ್ಲಿಂ ವ್ಯಕ್ತಿಗಳಿಗೆ ತೊಂದರೆ ಕೊಟ್ಟಿಲ್ಲ. ಹಿಂದೂಗಳು ನಾವು ಭಾರತಾಂಬೆ ಮಕ್ಕಳು. ಈ ರೀತಿ ಕದ್ದುಮುಚ್ಚಿ ಹೊಡೆಯುವ ಅವಶ್ಯಕತೆ ಇಲ್ಲ. ರಾಮಲಿಂಗ ರೆಡ್ಡಿ ನನಗೆ ಬುದ್ಧಿಭಮ್ರಣೆಯಾಗಿತ್ತು, ಹೀಗಾಗಿ ನಾನು ಈ ರೀತಿ ಹೇಳಿದ್ದೇನೆ ಎಂದು ಹೇಳುವ ಮೂಲಕ ರಾಜ್ಯದ ಎಲ್ಲ ಹಿಂದುಗಳ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ರಾಗಿಗುಡ್ಡ ಗಲಭ ಪ್ರಕರಣಕ್ಕೆ ಸಂಬಂಧ ಸಚಿವ ರಾಮಲಿಂಗ ರೆಡ್ಡಿ ಅವರು ಸುಳ್ಳು ಸುದ್ದಿಯನ್ನು ನೀಡಿ ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಸುದ್ದಿ ಹರಡುವವರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್‌ಪಿ, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಅದರಂತೆ ರಾಮಲಿಂಗ ರೆಡ್ಡಿ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಬರುತ್ತದೆ: ಈಶ್ವರಪ್ಪ
ಇದು ಸಣ್ಣ ಘಟನೆಯಲ್ಲ: ರಾಗಿಗುಡ್ಡ ಪ್ರಕರಣ ಕುರಿತು ಗೃಹಸಚಿವ ಜಿ.ಪರಮೇಶ್ವರ್ ಅವರು ಇದು ಸಣ್ಣ ಘಟನೆ ಎಂದು ಹೇಳಿದ್ದಾರೆ. ಇದು ಸಣ್ಣ ಘಟನೆಯಾದರೆ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಬರಬೇಕಿತ್ತು? ಇಬ್ಬರು ಹುಡುಗರು ಗೋಲಿ ಆಡುವಾಗ ಹೊಡೆದಾಡಿರುವ ಘಟನೆ ಅಲ್ಲ. ಲಾಂಗು, ದೊಣ್ಣೆ, ಕಲ್ಲು ಹಿಡಿದುಕೊಂಡು ಬಂದು ಗಲಾಟೆ ಮಾಡಿದ್ದಾರೆ. ಇದು ಸಣ್ಣ ಘಟನೆ ಎಂದು ಗೃಹಮಂತ್ರಿಗೆ ಯಾರು ಮಾಹಿತಿ ಕೊಟ್ಟರೋ ಗೊತ್ತಿಲ್ಲ ಎಂದು ಈಶ್ವರಪ್ಪ ಖಾರವಾಗಿ ಹೇಳಿದರು. ಮೆರವಣಿಗೆಯಲ್ಲಿ ಮುಸ್ಲಿಂನವರು ರಟ್ಟಿನ ಖಡ್ಗ ಹಿಡಿದಿದ್ದರು, ನಿಜವಾದ ಖಡ್ಗ ಹಿಡಿದಿಲ್ಲ ಎಂದು ಹೇಳಿದ್ದಾರೆ.
ರಟ್ಟಿನ ಖಡ್ಗ ಜೊತೆಗೆ ಒರ್ಜಿನಲ್ ಖಡ್ಗನೂ ಇತ್ತು. ಹೀಗಾಗಿ ಸರಿಯಾದ ಮಾಹಿತಿ ಪಡೆಯದೇ ಈ ರೀತಿ ಹೇಳಿಕೆ ನೀಡೋ ಗೃಹಮಂತ್ರಿಗಳು ರಾಜ್ಯವನ್ನು ಹೇಗೆ ರಕ್ಷಣೆ ಮಾಡೋತ್ತಾರೋ, ನನಗಂತೂ ಗೊತ್ತಿಲ್ಲ. ಹಿಂದೂ ಸಮಾಜವನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ ಎಂದು ಕಿಡಿಕಾರಿದರು. ಗೃಹಸಚಿವ ಪರಮೇಶ್ವರ್ ಅವರು ಇರುವುದು ಕೇವಲ ಮುಸ್ಲಿಂ ರಕ್ಷಣೆ ಮಾಡುವುದಕ್ಕೆ ಅಷ್ಟೇ ಅಲ್ಲ ಹಿಂದುಗಳ ರಕ್ಷಣೆಯೂ ಮಾಡಬೇಕು. ಕ್ರಿಶ್ಚಿಯನ್ ರಕ್ಷಣೆಯೂ ಮಾಡಬೇಕು. ಇದಕ್ಕಾಗಿಯೇ ಅವರು ಇರೋದು, ರಾಗಿಗುಡ್ಡಕ್ಕೆ ಪರಮೇಶ್ವರ್ ಬಂದು, ಇಲ್ಲಿನ ಅಧಿಕಾರಿಗಳ ಬಳಿ ಕೂತು ಮಾತನಾಡಲಿ, ಅದನ್ನು ಬಿಟ್ಟು ನೀವು ಏನೇ ಮಾಡಿದರೂ ನಾವಿದ್ದೇವೆ ಎಂದು ಮುಸ್ಲಿಂ ಗೂಂಡಾಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಅವರು ಹೇಳಿಕೆ ಕೊಡಬಾರದು ಟೀಕಿಸಿದರು.
ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿ: ಕೆ.ಎಸ್.ಈಶ್ವರಪ್ಪ
ಡಿಸಿಎಂ ಸ್ಥಾನದಿಂದ ಡಿಕೆಶಿ ತೆಗೆಯಿರಿ: ಗೂಂಡಾ, ಕೊಲೆಗಡುಗರು ಹಿಂಸೆ ಮಾಡೋರನ್ನು ಜೈಲಿನಿಂದ ಬಿಡುಗಡೆ ಮಾಡವೇಕು ಎಂದು ಪತ್ರ ಬರೆಯುವ ಮೂಲಕ ಉಪಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇಂತ ಡಿಸಿಎಂ ಈ ರಾಜ್ಯಕ್ಕೆ ಅಗತ್ಯ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಮೂರು- ನಾಲ್ಕು ಮಂದಿ ಡಿಸಿಎಂ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಇದಕ್ಕೂ ಮೊದಲು ಗೂಂಡಾಗಿರಿ ಮಾಡಿಕೊಂಡು, ಗಲಭೆ ಎಬ್ಬಿಸುವ ವ್ಯಕ್ತಿಗಳ ಮೇಲಿರುವ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಹೇಳುವ ಡಿ.ಕೆ.ಶಿವಕುಮಾರ್ ಅವರನ್ನು ಡಿಸಿಎಂ ಸ್ಥಾನದಿಂದ ಕಿತ್ತಾಕಿ ಅಮೇಲೆ ಬೇಕಾದರೆ ಸಿದ್ದರಾಮಯ್ಯ ಯಾರನ್ನಾದರೂ ಡಿಸಿಎಂ ಮಾಡಲಿ. ಆದರೆ, ಪ್ರಾಮಾಣಿಕರನ್ನು ಡಿಸಿಎಂ ಆಗಿ ಮಾಡಲಿ ಎಂದು ಹೇಳಿದರು.