ಕಾಂಗ್ರೆಸ್‌ನತ್ತ ದೃಷ್ಟಿಹಾಯಿಸಿರುವ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಪಕ್ಷದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. 

ಬೆಂಗಳೂರು (ಆ.27): ಕಾಂಗ್ರೆಸ್‌ನತ್ತ ದೃಷ್ಟಿಹಾಯಿಸಿರುವ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಪಕ್ಷದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಹೊಗಳಿ ಮಾತನಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋಗೆ ಆಗಮಿಸುವ ವೇಳೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ. ಕ್ಷೇತ್ರದಲ್ಲಿನ ಹೆಮ್ಮಿಗೆಪುರದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಹೇಳುವುದಕ್ಕೆ ಪ್ರಧಾನಿ ನರೇಂದ್ರ ಬೆಂಗಳೂರಿಗೆ ಆಗಮಿಸಿದ್ದರು. 

Add Asianetnews Kannada as a Preferred SourcegooglePreferred

ಅಲ್ಲಿಗೆ ತೆರಳುವುದಕ್ಕಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಿಗೆ ಬಸ್‌ ವ್ಯವಸ್ಥೆ ಮಾಡಿಕೊಡುವಂತೆ ಪಕ್ಷದಿಂದ ಸೂಚನೆ ನೀಡಲಾಗಿತ್ತು. ಅದರಂತೆ ಬಸ್‌ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಆದರೆ, ನನಗೆ ಯಾವುದೇ ಆಹ್ವಾನ ನೀಡಲಿಲ್ಲ ಎಂದರು. ನೀವು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಹೊಗಳಿದ್ದಕ್ಕೆ ಕರೆದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ತಿಂಗಳವರೆಗೆ ಶಾಸಕನಾಗಿ ಅವರನ್ನು ಭೇಟಿ ಮಾಡಿರಲಿಲ್ಲ. ಹೀಗಾಗಿ, ನನ್ನ ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನವೂ ಬಂದಿರಲಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ ಕಾರಣಕ್ಕೆ ಮೋದಿ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ ಎಂದು ಹೇಳಿದರು.

ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆ ಊಹಾಪೋಹ: ಆರ್‌.ಅಶೋಕ್‌

ಲೋಕಸಭೆಗೆ ಸ್ಪರ್ಧಿಸುವ ಹುಚ್ಚಿಲ್ಲ: ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮಗನನ್ನು ರಾಜಕೀಯಕ್ಕೆ ಕರೆತರುವ ಇಚ್ಛೆಯೂ ಇಲ್ಲ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ. ದೆಹಲಿಗೆ ಬರುವಂತೆ ಸೂಚನೆ ಬಂದ ತಕ್ಷಣ ವರಿಷ್ಠರ ಭೇಟಿಗೆ ತೆರಳುತ್ತೇನೆ ಎಂದೂ ಅವರು ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಹುಚ್ಚು ಇಲ್ಲ. ನನ್ನ ಮಗನನ್ನು ರಾಜಕೀಯಕ್ಕೆ ತರುವ ಇಚ್ಛೆ ಇಲ್ಲ. ಒಂದು ವೇಳೆ ನಾನು ಹಾಗೆ ಮಾಡಿದಾಗ ನೀವೇ ಪ್ರಶ್ನಿಸಿ ಎಂದರು.

ನನ್ನ ಕ್ಷೇತ್ರದಲ್ಲಿ ಈಗ ಉಚ್ಚಾಟನೆ ಮಾಡಿದ ಮುಖಂಡರ ತಂಡವು ಚುನಾವಣೆ ಪೂರ್ವದಲ್ಲಿ ನನಗೆ ಟಿಕೆಟ್‌ ತಪ್ಪಿಸಲು ಸಂಚು ಮಾಡಿತ್ತು. ಈಗ ಚುನಾವಣೆ ಮುಗಿದ ಬಳಿಕವೂ ನನ್ನ ವಿರುದ್ಧ ಕೆಲಸ ಮುಂದುವರೆಸಿದೆ. ನಾವು ಬಿಜೆಪಿಗೆ ಬಂದಾಗ ತಿಳಿ ವಾತಾವರಣವಿತ್ತು. ಬಿಜೆಪಿಗೆ ಬಂದ ಬಳಿಕ ನಾವು ಪಕ್ಷ ಹಾಗೂ ಸರ್ಕಾರದ ಕೆಲಸ ಮಾಡಿದ್ದೇವೆ. ಎಲ್ಲ ಕೆಲಸಗಳಲ್ಲೂ ಸಂಶಯಪಟ್ಟರೆ ಹೇಗೆ? ನನ್ನ ವಿರುದ್ಧ ಸಂಶಯಪಡುವುದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೇವಲ ನನ್ನ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಹೋಗಿಲ್ಲ. ರಾಜರಾಜೇಶ್ವರಿನಗರ ಕ್ಷೇತ್ರ, ಕೆ.ಆರ್‌.ಪುರ ಕ್ಷೇತ್ರಗಳಲ್ಲಿಯೂ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ಗೆ ಹೋಗಿದ್ದಾರೆ. 

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಕಾಂಗ್ರೆಸ್‌ನವರು ಆಪರೇಟ್‌ ಮಾಡುತ್ತಿದ್ದಾರೆ. ಇದು ಎಲ್ಲ ಕ್ಷೇತ್ರಗಳಲ್ಲಿಯೂ ನಡೆಯುತ್ತಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಇರುತ್ತಾರೆ. 10-15 ಜನ ಬೇರೆ ಪಕ್ಷಕ್ಕೆ ಹೋದರೆ ಯಾವುದೇ ಸಮಸ್ಯೆಯಿಲ್ಲ. ಬೇರೆ ಪಕ್ಷದವರು ಕ್ಷೇತ್ರದಲ್ಲಿ ಏನು ಬೇಕಾದರೂ ಮಾಡಲಿ. ಯಾವುದೇ ಸಭೆ ಮಾಡಿದರೂ ತೊಂದರೆ ಇಲ್ಲ. ನಾನು ಸಹ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಗ್ರಾಮ ಪಂಚಾಯಿತಿ, ವಾರ್ಡ್‌ವಾರು ಸಭೆ ಮಾಡುತ್ತಿದ್ದೇನೆ. ಕಾರ್ಯಕರ್ತರಲ್ಲಿ ಧೈರ್ಯ ತುಂಬುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು. ಎರಡು ದಿನದ ಹಿಂದೆ ದೆಹಲಿಗೆ ಬರುವಂತೆ ಸಂದೇಶ ಬಂದಿತ್ತು. ಈಗ ಅದಕ್ಕಾಗಿ ಕಾಯುತ್ತಿದ್ದೇನೆ. ಮತ್ತೆ ಸಂದೇಶ ಬಂದರೆ, ದೆಹಲಿಗೆ ಹೋಗುತ್ತೇನೆ ಎಂದು ಸೋಮಶೇಖರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾವು ಬಿಜೆಪಿ ಬಿಡೋದಿಲ್ಲ: ಎಸ್‌ಟಿಎಸ್‌, ಹೆಬ್ಬಾರ್‌, ಬೈರತಿ

ಘರ್‌ ವಾಪ್ಸಿ ಸುಳಿವು?
- ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಎಸ್‌.ಟಿ.ಸೋಮಶೇಖರ್‌ ಮತ್ತೆ ಕಾಂಗ್ರೆಸ್‌ ಸೇರುತ್ತಾರೆಂದು ಇತ್ತೀಚೆಗೆ ಗುಸುಗುಸು
- ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದಿದ್ದ ಎಸ್‌ಟಿಎಸ್‌
- ಈಗ ಡಿ.ಕೆ.ಶಿವಕುಮಾರ್‌ ಜತೆ ಜನಸ್ಪಂದನೆ ಕಾರ‍್ಯಕ್ರಮದಲ್ಲಿ ಭಾಗ
- ಈ ಹಿಂದೆಯೂ ಕೆಲವು ಬಾರಿ ಬಿಜೆಪಿ ವಿರುದ್ಧ ಮಾತಾಡಿದ್ದ ಶಾಸಕ
- ಈಗ ಮತ್ತೆ ಬಹಿರಂಗವಾಗಿ ಬಿಜೆಪಿ ವಿರುದ್ಧ ಮಾತು: ಬೇಸರದ ಸುಳಿವು