ರೇವಣ್ಣ ಸರಿಯಾಗಿ ನಿಂಬೆಹಣ್ಣು ಮಂತ್ರಿಸಿಲ್ಲ: ಕಾಲೆಳೆದ ಅಶೋಕ್
‘ವಿಧಾನಸಭೆ ಚುನಾವಣೆ ವೇಳೆ ನಿಂಬೆಹಣ್ಣು ಸರಿಯಾಗಿ ಮಂತ್ರಿಸಿಲ್ಲ. ಸರಿಯಾಗಿ ಮಂತ್ರಿಸಿದ್ದಿದ್ದರೆ ಇನ್ನೊಂದು 40 ಸ್ಥಾನ ಬಂದು ಬುಗರಿಯಾಡಿಸುತ್ತಿದ್ದಿರಿ’ ಎಂದು ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಅವರನ್ನು ಬಿಜೆಪಿ ಸದಸ್ಯ ಆರ್.ಅಶೋಕ್ ಕಾಲೆಳೆದ ಪ್ರಸಂಗ ನಡೆಯಿತು
ವಿಧಾನಸಭೆ (ಜು.15): ‘ವಿಧಾನಸಭೆ ಚುನಾವಣೆ ವೇಳೆ ನಿಂಬೆಹಣ್ಣು ಸರಿಯಾಗಿ ಮಂತ್ರಿಸಿಲ್ಲ. ಸರಿಯಾಗಿ ಮಂತ್ರಿಸಿದ್ದಿದ್ದರೆ ಇನ್ನೊಂದು 40 ಸ್ಥಾನ ಬಂದು ಬುಗರಿಯಾಡಿಸುತ್ತಿದ್ದಿರಿ’ ಎಂದು ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಅವರನ್ನು ಬಿಜೆಪಿ ಸದಸ್ಯ ಆರ್.ಅಶೋಕ್ ಕಾಲೆಳೆದ ಪ್ರಸಂಗ ನಡೆಯಿತು. ಶುಕ್ರವಾರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕದ ಕುರಿತು ರೇವಣ್ಣ ಮಾತನಾಡುತ್ತಿದ್ದ ವೇಳೆ ಸ್ವಾರಸ್ಯಕರ ಚರ್ಚೆ ನಡೆಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಶೋಕ್ ನಮ್ಮ ನಾಯಕರು ಎಂದು ರೇವಣ್ಣ ಹೇಳಿದಾಗ ಸಚಿವ ಎಂ.ಬಿ.ಪಾಟೀಲ್, ರೇವಣ್ಣ ಅವರಿಗೆ ಅಶೋಕ್ ಮೇಲೆ ತುಂಬಾ ಪ್ರೀತಿ ಇದೆ ಎಂದು ಕಾಲೆಳೆದರು.
ಆಗ ರೇವಣ್ಣ, ಸಚಿವ ಜಿ.ಪರಮೇಶ್ವರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಚೆನ್ನಾಗಿದ್ದಾರೆ ಎಂದು ಹೇಳಿದಾಗ ಸದನವು ನಗೆಗಡಲಲ್ಲಿ ತೇಲಿತು. ಮಧ್ಯಪ್ರವೇಶಿಸಿದ ಅಶೋಕ್, ನಿಂಬೆಹಣ್ಣು ಸರಿಯಾಗಿ ಮಂತ್ರಿಸಿಲ್ಲ. ಸರಿಯಾಗಿ ಮಂತ್ರಿಸಿದ್ದಿದ್ದರೆ ಇನ್ನಷ್ಟುಸ್ಥಾನ ಗಳಿಸಿ ಆಟವಾಡಬಹುದಿತ್ತು ಎಂದು ಛೇಡಿಸಿದರು. ಇದಕ್ಕೆ ನಗುತ್ತಾ ತಿರುಗೇಟು ನೀಡಿದ ರೇವಣ್ಣ, ನೀವು ನಮ್ಮ ಮಾತು ಕೇಳಲಿಲ್ಲ. ನೀವಿಬ್ಬರು ಸೇರಿ ನಮ್ಮನ್ನು ತೆಗೆಯಲು ನೋಡಿದಿರಿ. ಇದರಿಂದ ನೀವೂ ಹೋದಿರಿ, ನಾವೂ ಹೋದೆವು ಎಂದು ಹೇಳಿದಾಗ ಇಡೀ ಸದನದಲ್ಲಿ ನಗು ಮೂಡಿತು.
ಮೆಟ್ರೋ ಸುರಂಗ ಕಾಮಗಾರಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್
ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ನೀವು ಜ್ಯೋತಿಷಿ ಬದಲಾಯಿಸಿ, ಅರ್ಧ ದಾರಿಯಲ್ಲಿಯೇ ಕೈಬಿಟ್ಟಿರಂತೆ. ಅವರನ್ನೇ ಇಟ್ಟುಕೊಂಡಿದ್ದರೆ ರಾಹುಕಾಲ, ಗುಳಿಕಕಾಲ ಎಲ್ಲವನ್ನೂ ಸರಿಯಾಗಿ ಹೇಳುತ್ತಿದ್ದರು. ಜ್ಯೋತಿಷಿಯನ್ನು ಬದಲಿಸಿದ್ದಕ್ಕೆ ಸರ್ಕಾರದ ಕುರ್ಚಿ ಸಿಗಲಿಲ್ಲ. ಈಗಿರುವ ಜ್ಯೋತಿಷಿ ನಿಮಗೆ ಸರಿಯಾಗಿ ಹೇಳುತ್ತಿಲ್ಲ ಎಂದು ಕಿಚಾಯಿಸಿದರು. ಇದೇ ವೇಳೆ ಬಿಜೆಪಿ ಸದಸ್ಯರು ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಹೆಸರು ಪ್ರಸ್ತಾಪಿಸಿದರು. ಆಗ ಎಚ್.ಕೆ.ಪಾಟೀಲ್, ಅವರೇ ನನ್ನನ್ನು ಬಿಟ್ಟಿದ್ದಾರೆ. ನೀವೇಕೆ ಪ್ರಸ್ತಾಪಿಸುತ್ತೀರಿ. ನಾವು ದೂರದಲ್ಲಿದ್ದೇವೆ ಎಂದರು.
ಆಗ ರೇವಣ್ಣ, ಯಾರ ಹತ್ತಿರನೂ ನಾನು ವಿರೋಧ ಕಟ್ಟಿಕೊಂಡಿಲ್ಲ. ಎಂ.ಬಿ.ಪಾಟೀಲ್ ಅವರ ತಂದೆಯವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲದವರು. ಅವರ ಸಂಬಂಧ ಚೆನ್ನಾಗಿದೆ. ಸಚಿವ ರಾಮಲಿಂಗಾರೆಡ್ಡಿ ನಾಲ್ಕು ಸಾವಿರ ಬಸ್ ಖರೀದಿಸುತ್ತಿದ್ದು, ನಮಗೂ 20 ಬಸ್ ಕೊಡಿ ಎಂದರು. ಇದಕ್ಕೆ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್, ನಿಮ್ಮ ನೇತೃತ್ವದಲ್ಲಿ ರಾಷ್ಟ್ರೀಯ ಸರ್ಕಾರ ಮಾಡೋಣ ಎಂದು ಛೇಡಿಸಿದರು. ಆಗ ಸಭಾಧ್ಯಕ್ಷರು, ವಿಧೇಯಕದ ಕಡೆ ಬನ್ನಿ ಎಂದಾಗ ಆ ವಿಷಯದ ಮೇಲೆ ಚರ್ಚೆ ಮುಂದುವರಿಯಿತು.
ಸಿದ್ದು ಪರ ರೇವಣ್ಣ ಬ್ಯಾಟಿಂಗ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಹಿರಿಯ ಸದಸ್ಯ ಎಚ್.ಡಿ. ರೇವಣ್ಣ ಅವರ ನಡುವಿನ ಸ್ನೇಹದ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದ್ದು, ‘ನಾನು ಎಂದಿಗೂ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿಲ್ಲ, ಮಾತನಾಡುವುದಿಲ್ಲ. ಅವರು ವರ್ಗಾವಣೆ ದಂಧೆ ಮಾಡಿದ್ದಾರೆ ಎಂಬುದನ್ನೂ ನಾನು ಒಪ್ಪುವುದಿಲ್ಲ’ ಎಂದು ರೇವಣ್ಣ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಣ್ಣ ಅವರು ಈಗಾಗಲೇ ಬಡವರ ಪರ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಆರನೇ ಗ್ಯಾರಂಟಿಯಾಗಿ ಕೊಬ್ಬರಿಗೆ 15000 ರು. ಬೆಂಬಲ ಬೆಲೆ ಘೋಷಣೆ ಮಾಡಲಿ’ ಎಂದು ಸದನಕ್ಕೆ ತಂದಿದ್ದ ಒಣ ಕೊಬ್ಬರಿ ಪ್ರದರ್ಶಿಸುತ್ತಾ ಮನವಿ ಮಾಡಿದರು.
ಸ್ಪೀಕರ್ ಕುರ್ಚಿ ವಾಸ್ತು ಬಗ್ಗೆ ಎಚ್.ಡಿ.ರೇವಣ್ಣರನ್ನು ಕೇಳಿ: ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು, ‘ನಿಮಗೂ ಸಿದ್ದರಾಮಯ್ಯ ಅವರಿಗೂ ಒಳ್ಳೆಯ ಸ್ನೇಹ ಇದೆ. ನೀವು ಹೇಳಿದರೆ ಅವರು ಏನೂ ಇಲ್ಲ ಎನ್ನುವುದಿಲ್ಲ’ ಎಂದು ಹಾಸ್ಯ ಮಾಡಿದರು. ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ, ‘ಅವರ ಸ್ನೇಹ ಎಷ್ಟುಗಾಢ ಎಂದರೆ ಚುನಾವಣೆ ವೇಳೆ ಅಪ್ಪಿ ತಪ್ಪಿಯೂ ಸಿದ್ದರಾಮಯ್ಯ ಅವರು ಹೊಳೆನರಸೀಪುರ ಕಡೆ ಹೋಗಲೇ ಇಲ್ಲ’ ಎಂದು ಕಾಲೆಳೆದರು. ಜೆಡಿಎಸ್ ಸದಸ್ಯ ಜಿ.ಟಿ. ದೇವೇಗೌಡ, ‘ಅವರ ಸ್ನೇಹ 35 ವರ್ಷಕ್ಕಿಂತ ಹಳೆಯದು. ಅವರ ಮಾತು ಇವರು, ಇವರ ಮಾತು ಅವರು ತಪ್ಪುವುದೇ ಇಲ್ಲ. ಅವರ ಸ್ನೇಹವನ್ನು ಯಾರೂ ತಡೆಯಲು ಆಗುವುದಿಲ್ಲ’ ಎಂದು ಹೇಳಿದರು.