Asianet Suvarna News Asianet Suvarna News

ಅಕ್ಕಿ ಕೇಂದ್ರ ಸರ್ಕಾರದ್ದು, ಚೀಲ ಸಿದ್ದರಾಮಯ್ಯದು: ಅಶೋಕ್‌ ವ್ಯಂಗ್ಯ

ರಾಜ್ಯದ ಪಡಿತರದಾರರಿಗೆ ಕೇಂದ್ರ ಸರ್ಕಾರದಿಂದ 5 ಕೆ.ಜಿ. ಅಕ್ಕಿ ದೊರಕುತ್ತಿದೆ ಎಂಬ ಸತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲಾದರೂ ಒಪ್ಪಿಕೊಂಡದ್ದಕ್ಕೆ ಬಿಜೆಪಿ ಧನ್ಯವಾದ ಹೇಳುತ್ತದೆ ಎಂದ ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಅಕ್ಕಿ ಕೇಂದ್ರದ್ದು, ಚೀಲ ಸಿದ್ದರಾಮಯ್ಯ ಅವರದ್ದು ಎಂಬಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. 

Ex Minister R Ashok Slams On CM Siddaramaiah Over Rice Issue gvd
Author
First Published Jun 30, 2023, 4:00 AM IST

ಮಡಿಕೇರಿ (ಜೂ.30): ರಾಜ್ಯದ ಪಡಿತರದಾರರಿಗೆ ಕೇಂದ್ರ ಸರ್ಕಾರದಿಂದ 5 ಕೆ.ಜಿ. ಅಕ್ಕಿ ದೊರಕುತ್ತಿದೆ ಎಂಬ ಸತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲಾದರೂ ಒಪ್ಪಿಕೊಂಡದ್ದಕ್ಕೆ ಬಿಜೆಪಿ ಧನ್ಯವಾದ ಹೇಳುತ್ತದೆ ಎಂದ ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಅಕ್ಕಿ ಕೇಂದ್ರದ್ದು, ಚೀಲ ಸಿದ್ದರಾಮಯ್ಯ ಅವರದ್ದು ಎಂಬಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. 

ಮಡಿಕೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಆರ್‌. ಅಶೋಕ್‌, ಒಂದು ತಿಂಗಳ ಹಿಂದೆ ಅಕ್ಕಿ ಕೊಡಲಾಗದೆ ಹೋದರೆ ಅಕ್ಕಿಗೆ ಸಮನಾಗಿ ದುಡ್ಡು ನೀಡಿ ಎಂದು ಬಿಜೆಪಿ ಸಲಹೆ ನೀಡಿದಾಗ, ದುಡ್ಡನ್ನು ತಿನ್ನಲಾಗುತ್ತದೆಯೇ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರೇ ಈಗ 5 ಕೆ.ಜಿ. ಅಕ್ಕಿಯ ದರವನ್ನು ಪಡಿತರದಾರರಿಗೆ ನೀಡಲು ಮುಂದಾಗಿದ್ದಾರೆಂದು ಟೀಕಿಸಿದರು. ಭ್ರಷ್ಟಾಚಾರ ಮತ್ತು ವಂಚನೆ ಎಂಬುದು ಕಾಂಗ್ರೆಸ್‌ ನಾಯಕರ ರಕ್ತದಲ್ಲಿಯೇ ಇದೆ ಎಂದು ದೂರಿದ ಅಶೋಕ್‌, ಈಗಾಗಲೇ ಕಾಂಗ್ರೆಸ್‌ ಸರ್ಕಾರದಲ್ಲಿ ವರ್ಗಾವಣೆ ದಂಧೆ ಪ್ರಾರಂಭವಾಗಿದೆ. ರಾಜ್ಯದ ಜನತೆಗೆ ಕಾಂಗ್ರೆಸ್‌ ಮಾಡಿರುವ ಇಂಥ ವಂಚನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಬಡ ಜನರಿಗೆ ಅಕ್ಕಿ ಕೊಡಿ ಎಂದು ಹೇಳುವ ಕರ್ತವ್ಯ ಪ್ರಜ್ಞೆ ಬಿಜೆಪಿಗಿಲ್ಲ: ಸಚಿವ ಎಚ್‌.ಕೆ.ಪಾಟೀಲ್‌

ದೇಶದ ಕಾಳಜಿ ಇಲ್ಲ: ಓರ್ವ ಮೋದಿಯನ್ನು ಸೋಲಿಸಲು ದೇಶದ ಎಲ್ಲ ಭ್ರಷ್ಟಾಚಾರಿಗಳೂ ಬಿಹಾರದಲ್ಲಿ ಒಂದಾಗಿದ್ದರು. ಮೋದಿ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದೇ ಇವರ ಉದ್ದೇಶವಾಗಿದೆಯೇ ವಿನಾ ಭಾರತದ ಹಿತರಕ್ಷಣೆಯ ಕಾಳಜಿ ಇವರಿಗಿಲ್ಲ ಎಂದು ಟೀಕಿಸಿದ ಅಶೋಕ್‌, ಮೋದಿ ಸರ್ಕಾರದ ಸಾಧನೆಗಳನ್ನು ಪರಿಣಾಮಕಾರಿಯಾಗಿ ಮತದಾರರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದರು.

ಲೋಕಸಭಾ ಚುನಾವಣೆಗೆ ಸಜ್ಜಾಗಿ: ಸಭೆಯಲ್ಲಿ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಬಿಜೆಪಿ ಸೋಲಿನ ಆಘಾತದಿಂದ ಕಾರ್ಯಕರ್ತರು ಹೊರಬಂದು ಲೋಕಸಭೆ ಚುನಾವಣೆಗೆ ಸಜ್ಜಾಗಬೇಕು. ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ಮುಂದಿದೆ ಎಂದ ಅವರು, 5 ಕೆ.ಜಿ. ಅಕ್ಕಿ ಕೇಂದ್ರದಿಂದ ದೊರಕುತ್ತಿದೆ ಎಂಬ ಸತ್ಯವನ್ನು ಸಿದ್ದರಾಮಯ್ಯ ಈಗಲಾದರೂ ಒಪ್ಪಿಕೊಂಡಿರುವುದು ಸ್ವಾಗತಾರ್ಹ ಎಂದರು. ಬಿಜೆಪಿಯವರು ಚುನಾವಣೆಯಲ್ಲಿ ಸೋತಿದ್ದಾರೆಯೇ ವಿನಾ ಸತ್ತಿಲ್ಲ ಎಂದು ತೀಕ್ಷ$್ಣವಾಗಿ ನುಡಿದ ಸಂಸದ ಪ್ರತಾಪ್‌ ಸಿಂಹ, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರದ ಬೂಟಾಟಿಕೆ ಬಯಲು ಮಾಡುತ್ತೇವೆ. 

ಜಿ.ಪಂ. ತಾ.ಪಂ., ಸಹಕಾರ ಸಂಘಗಳ ಚುನಾವಣೆಯಲ್ಲಿ ಖಂಡಿತಾ ಗೆಲವು ಸಾಧಿಸುವ ಮೂಲಕ ಲೋಕಸಭಾ ಚುನಾವಣೆಗೂ ಭರ್ಜರಿಯಾಗಿ ಸಿದ್ಧರಾಗಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಲೋಕಸಭಾ ಚುನಾವಣೆಗೆ ಈ ಕ್ಷೇತ್ರದಿಂದ ಯಾರೇ ಸ್ಪರ್ಧಿಸಿದರೂ ಬಿಜೆಪಿಯನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಬೇಕು. ವೈಮನಸ್ಸು ಮರೆತು ಒಗ್ಗಟ್ಟಿನಿಂದ ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ ಪಕ್ಷ ಗೆಲ್ಲಿಸೋಣ ಎಂದು ಹೇಳಿದರು.

ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳ ಭರವಸೆಯಿಂದ ಕಾಂಗ್ರೆಸ್‌ ಅಭ್ಯರ್ಥಿಗಳು ರಾಜ್ಯದಲ್ಲಿ ಗೆಲುವು ಸಾಧಿಸಿದರು. ಕೊಡಗಿನಲ್ಲಿ ಕಳೆದ ಚುನಾವಣೆಗಿಂತ ಅಧಿಕ ಮತಗಳನ್ನು ಬಿಜೆಪಿ ಪಡೆದಿದೆಯಾದರೂ, ಜೆಡಿಎಸ್‌, ಎಸ್‌ಡಿಪಿಐ ಕೊನೇ ಹಂತದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದು ಕೂಡ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು. ಮತಗಳು ಹೆಚ್ಚಿನ ಪ್ರಮಾಣದಲ್ಲಿ ದೊರಕಿರುವುದನ್ನು ಗಮನಿಸಿದರೆ ಜನರ ಮನಸ್ಸಿನಲ್ಲಿ ಬಿಜೆಪಿ ಇನ್ನೂ ಇದೆ ಎಂಬುದು ಸ್ಪಷ್ಟವಾಗುತ್ತದೆ. ಸೋಲಿನ ಕಹಿ ಮರೆತು ಮುಂದಿನ ಗೆಲುವಿಗಾಗಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುವಂತೆಯೂ ಹೇಳಿದರು.

ವೇದಿಕೆಯಲ್ಲಿ ಮಾಜಿ ಸಚಿವ ಎಸ್‌.ಟಿ. ಸೋಮಶೇಖರ್‌, ವಿಧಾನಪರಿಷತ್‌ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್‌ ದೇವಯ್ಯ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಶಾಸಕ ಎಸ್‌.ಜಿ. ಮೇದಪ್ಪ, ಪ್ರಮುಖರಾದ ಬಿ.ಬಿ. ಭಾರತೀಶ್‌, ಮಾದಪ್ಪ, ಅರುಣ್‌ ಭೀಮಯ್ಯ, ಕೋಮಾರಪ್ಪ, ಮನುಮುಂಜುನಾಥ್‌, ಅಶ್ವಿನ್‌ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್‌ ಜೈನಿ ನಿರೂಪಿಸಿದರು.

ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು: ಸಂಸದ ಬಿ.ವೈ.ರಾ​ಘ​ವೇಂದ್ರ

ಪಡಿತರ ಅಂಗಡಿ ಮುಂದೆ ನಿಂತು ಜನರಿಗೆ ಮನವರಿಕೆ ಮಾಡಿ: ಮುಂದಿನ ತಿಂಗಳು ಕೇಂದ್ರದ 5 ಕೆ.ಜಿ. ಅಕ್ಕಿ ರಾಜ್ಯದ ಪಡಿತರದಾರರಿಗೆ ದೊರಕಲಿದೆ. ಈ ಸಂದರ್ಭ ಪ್ರತಿ ಪಡಿತರ ಅಂಗಡಿಗಳ ಮುಂದೆ ಬಿಜೆಪಿಯ ನಾಲ್ಕು ಕಾರ್ಯಕರ್ತರು ನಿಂತುಕೊಂಡು ಪಡಿತರದಾರರಿಗೆ ಇದು ಕೇಂದ್ರದ ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿ ಎಂದು ತಿಳಿಯಪಡಿಸಬೇಕಾಗಿದೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರ ನೀಡಿದ್ದ ಭರವಸೆ ಈಡೇರಿಲ್ಲ ಎಂಬುದನ್ನೂ ಜನರಿಗೆ ಮನವರಿಕೆ ಮಾಡುವ ಅಗತ್ಯವಿದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

Follow Us:
Download App:
  • android
  • ios