6 ತಿಂಗಳಲ್ಲಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೀರಿ?: ಶಾಸಕ ಶಾಂತನಗೌಡಗೆ ರೇಣುಕಾಚಾರ್ಯ ಸವಾಲು
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಗೆ ಕಳೆದ 6 ತಿಂಗಳಲ್ಲಿ ಎಷ್ಟು ಅನುದಾನ ತಂದಿದ್ದೀರಿ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಮಾಜಿ ಸಚಿವ ಎಂ.ರೇಣುಕಾಚಾರ್ಯ ಶಾಸಕ ಡಿ.ಜಿ.ಶಾಂತನಗೌಡಗೆ ಸವಾಲು ಹಾಕಿದ್ದಾರೆ.
ದಾವಣಗೆರೆ (ನ.05): ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಗೆ ಕಳೆದ 6 ತಿಂಗಳಲ್ಲಿ ಎಷ್ಟು ಅನುದಾನ ತಂದಿದ್ದೀರಿ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಮಾಜಿ ಸಚಿವ ಎಂ.ರೇಣುಕಾಚಾರ್ಯ ಶಾಸಕ ಡಿ.ಜಿ.ಶಾಂತನಗೌಡಗೆ ಸವಾಲು ಹಾಕಿದ್ದಾರೆ. ನಾನು ಶಾಸಕನಾಗಿದ್ದಾಗ ಅವಳಿ ತಾಲೂಕಿನ ಅಭಿವೃದ್ಧಿಗೆ 4,500 ಕೋಟಿ ರು. ಅನುದಾನ ತಂದಿದ್ದೆ. ಉಳಿದ 1 ಸಾವಿರ ಕೋಟಿ ಅನುದಾನದಲ್ಲಿ ಮುಂದುವರಿದ ಅಭಿವೃದ್ಧಿ ಕಾಮಗಾರಿ ಸಾಗಿವೆ. ಇದನ್ನು ಹೊರತುಪಡಿಸಿ ನೀವೆಷ್ಟು ಅನುದಾನ ತಂದಿದ್ದೀರಿ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಯವರು ರಾಜ್ಯದ 224 ಕ್ಷೇತ್ರಕ್ಕೂ 50 ಲಕ್ಷದಂತೆ ಅನುದಾನ ಬಿಡುಗಡೆ ಮಾಡಿದ್ದಾರೆ.
ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಶಾಂತನಗೌಡರು ಹೊನ್ನಾಳಿ ಕ್ಷೇತ್ರಕ್ಕೆ ತಾವು ತಂದ ಅನುದಾನದ ಬಗ್ಗೆ ದಾಖಲೆಗಳ ಸಹಿತ ಜನರ ಮುಂದೆ ಮಾಹಿತಿ ನೀಡಲಿ. ಈಗ ನೀವು ಶಾಸಕರಾಗಿ ಮಾಡುತ್ತಿರುವ ಕೆಲಸಗಳೆಲ್ಲಾ ಹಿಂದೆ ಇದೇ ರೇಣುಕಾಚಾರ್ಯ ತಂದ ಸಾವಿರಾರು ಕೋಟಿ ರು. ಅನುದಾನದ ಮುಂದುವರಿದ ಕಾಮಗಾರಿ ಅಷ್ಟೇ ಎಂದು ತಿರುಗೇಟು ನೀಡಿದರು. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನಮ್ಮ ಕ್ಷೇತ್ರಕ್ಕೆ ಭರಪೂರ ಅನುದಾನ ಬಿಡುಗಡೆ ಮಾಡಿದ್ದರು. ನಬಾರ್ಡ್ ನದಿ ಕ್ಷೇತ್ರಗಳಿಗೆ ನೀರು ತುಂಬಿಸಲು 515 ಕೋಟಿ ರು. ಅನುದಾನ ತಂದಿದ್ದು ನಾನು. ಪದವಿ ಪೂರ್ವ ಕಾಲೇಜುಗಳು, ಪ್ರಾಥಮಿಕ ಶಾಲೆಗಳ ಕಟ್ಟಡ, ಸಿಮೆಂಟ್ ರಸ್ತೆಗಳು ಹೀಗೆ ಸಾಕಷ್ಟು ಮೂಲ ಸೌಕರ್ಯ, ಅಭಿವೃದ್ಧಿ ಕಾರ್ಯಗಳು ಆಗಿದ್ದು ಬಿಜೆಪಿ ಸರ್ಕಾರದಲ್ಲಿ ಎಂದು ರೇಣುಕಾಚಾರ್ಯ ಹೇಳಿದರು.
ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಸರ್ಕಾರ ಪತನ: ನಳಿನ್ ಕಟೀಲ್ ಭವಿಷ್ಯ
ಇಂದಿನಿಂದ ಬರ ಅಧ್ಯಯನ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ನ. 4, 5, ಮತ್ತು 6 ರಂದು ಬರ ಪರಿಸ್ಥಿತಿ ಅಧ್ಯಯನ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಂಡಲ ಅಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು, ಜಿಲ್ಲಾಮಟ್ಟದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮೂರು ತಿಂಗಳ ಹಿಂದೆಯೇ ಹೊನ್ನಾಳಿ, ನ್ಯಾಮತಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಬರ ಅಧ್ಯಯನ ಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕೃಷಿ ಸಚಿವ ಚಲುವರಾಯಸ್ವಾಮಿಯವರ ಭೇಟಿಯಾಗಿ ಬರಗಾಲ ಪಟ್ಟಿಗೆ ಸೇರಿಸಲು ಮನವಿ ಮಾಡಿದ್ದೆ, ಅದರಂತೆ ಭರವಸೆ ನೀಡಿದ ಬಳಿಕ ಅವಳಿ ತಾಲೂಕನ್ನು ಬರ ಪಟ್ಟಿಗೆ ಸೇರಿಸಿದರು, ಆದರೆ ಈ ವರೆಗೂ ಹಣ ಬಿಡುಗಡೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಮತ್ತೆ ಅವಳಿ ತಾಲೂಕಿನಾದ್ಯಂತ ಮೂರು ದಿನ ಬರ ಪರಿಸ್ಥಿತಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಕೂಡಲೇ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದರು.
ಕಾಂಗ್ರೆಸ್ಸಲ್ಲಿ ಯಾವುದೇ ಅತೃಪ್ತಿ ಇಲ್ಲ, ಬಿಜೆಪಿಯಲ್ಲಿ ಇದೆ: ಡಿಕೆಶಿ
ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಂದರ್ಭದಲ್ಲಿ ಅವರ ತಪ್ಪು ನಿರ್ಧಾರಗಳ ಬಗ್ಗೆಯೂ ಹೇಳಿದ್ದೇನೆ. ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ಇಡೀ ರಾಜ್ಯದ ಜನರು ಸಂಭ್ರಮಿಸಿದರು. ಅದಾದ ಬಳಿಕ ಯಡಿಯೂರಪ್ಪನವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಿ ರಾಯಣ್ಣ ಬ್ರಿಗೇಡ್ ಕಟ್ಟಿಸಿ ಕೊನೆಗೆ ಬಿಎಸ್‌ವೈ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳ ನೀಡಿ ಯಡಿಯೂರಪ್ಪನವರ ಇಳಿಸುವ ಕೆಲಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ವೈಫಲ್ಯಗಳು ಸಾಕಷ್ಟಿದ್ದರೂ ಯಾರೂ ಹೋರಾಟ ಮಾಡುತ್ತಿಲ್ಲ ಎಂದ ರೇಣುಕಾಚಾರ್ಯ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.