ಕಾಂಗ್ರೆಸ್ಸಲ್ಲಿ ಯಾವುದೇ ಅತೃಪ್ತಿ ಇಲ್ಲ, ಬಿಜೆಪಿಯಲ್ಲಿ ಇದೆ: ಡಿಕೆಶಿ
ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ಅದು ಏನಿದ್ದರೂ ಬಿಜೆಪಿಯಲ್ಲಷ್ಟೆ. ಅದಕ್ಕಾಗಿ ಅವರಿಗೆ ಈವರೆಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹುಬ್ಬಳ್ಳಿ (ನ.05): ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ಅದು ಏನಿದ್ದರೂ ಬಿಜೆಪಿಯಲ್ಲಷ್ಟೆ. ಅದಕ್ಕಾಗಿ ಅವರಿಗೆ ಈವರೆಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಎಲ್ಲಿ ಅಸಮಾಧಾನವಿದೆ? ತಿಳಿಸಿ ಎಂದು ಸುದ್ದಿಗಾರರಿಗೇ ಮರುಪ್ರಶ್ನೆಯಿತ್ತರು. ದೇಶ ಹಾಗೂ ರಾಜ್ಯದ ಇತಿಹಾಸದಲ್ಲೇ ಸರ್ಕಾರ ರಚನೆಯಾಗಿ ಐದಾರು ತಿಂಗಳು ಕಳೆದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದಿರುವುದು ಇದೇ ಮೊದಲು.
ವಿಪಕ್ಷ ನಾಯಕನ್ನೂ ಆಯ್ಕೆ ಮಾಡುವ ಸಾಮರ್ಥ್ಯ ಬಿಜೆಪಿಗಿಲ್ಲವಾಗಿದೆ. ಇಷ್ಟಾದರೂ ಕಾಂಗ್ರೆಸ್‌ನಲ್ಲೇ ಅಸಮಾಧಾನವಿದೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಬರ ಅಧ್ಯಯನವಾಗಿದೆ: ಬಿಜೆಪಿಯ ಬರ ಅಧ್ಯಯನ ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ, ಅವರು ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿ. ನಮ್ಮ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಕೃಷ್ಣಭೈರೇಗೌಡ ಅಧ್ಯಯನ ಮಾಡಿ ಸುಮಾರು 200 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಹಾಗಾದರೆ, ನಾವೇನೂ ಸುಮ್ಮನೆ ಘೋಷಣೆ ಮಾಡಿದ್ದೀವಾ? ಈ ಕುರಿತು ಮಂಡ್ಯ, ಹಾವೇರಿ ಹಾಗೂ ಇತರ ಜಿಲ್ಲೆಗಳಲ್ಲಿ ಪರಿಶೀಲನಾ ಸಭೆ ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸೇರುತ್ತೇನೆಂದು ಹೇಳೂ ಇಲ್ಲ, ಅರ್ಜಿ ಹಾಕಿಲ್ಲ: ಎಂ.ಪಿ.ರೇಣುಕಾಚಾರ್ಯ
ಡಿಸಿಎಂ ಡಿಕೆಶಿ ಸೇರಿ 15 ಸಚಿವರ ಜೊತೆ ಸಿಎಂ ಸಭೆ: ಮುಖ್ಯಮಂತ್ರಿ ಹುದ್ದೆ ಬಗ್ಗೆ ಕಾಂಗ್ರೆಸ್‌ನ ವಿವಿಧ ಬಣಗಳ ನಾಯಕರ ಪರ-ವಿರೋಧ ಹೇಳಿಕೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ 15 ಸಚಿವರಿಗೆ ಉಪಾಹಾರ ಕೂಟ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟುಹಾಕಿದೆ. ಮುಖ್ಯಮಂತ್ರಿಯವರ ನಿವಾಸ ಕಾವೇರಿಯಲ್ಲಿ ಬೆಳಗ್ಗೆ 9ಕ್ಕೆ ಈ ಉಪಾಹಾರ ಕೂಟ ನಡೆಯಲಿದ್ದು, ಈ ಕೂಟಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೇರಿದಂತೆ ಆಯ್ದ 15 ಮಂದಿ ಸಚಿವರಿಗೆ ಆಹ್ವಾನ ನೀಡಲಾಗಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಇತ್ತೀಚೆಗೆ ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರೊಂದಿಗೆ ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿಯವರು ಸಚಿವರೊಂದಿಗೆ ಉಪಾಹಾರ ಕೂಟ ಆಯೋಜಿಸಿರುವುದರಿಂದ ಈ ಸಭೆಯು ಮುಖ್ಯವಾಗಿ ಲೋಕಸಭಾ ಚುನಾವಣೆ ಸಿದ್ಧತೆಗೆ ಸಂಬಂಧಿಸಿದೆ ಎಂದು ಮೂಲಗಳು ಹೇಳಿವೆ.
ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನಿಸುತ್ತೆ: ಸಚಿವ ಸಂತೋಷ್ ಲಾಡ್
ಹೈಕಮಾಂಡ್ ನ ನಾಯಕರು ತಮಗೆ ನೀಡಿದ ಸೂಚನೆಯ ಅನ್ವಯ ಲೋಕಸಭಾ ಚುನಾವಣೆಗೆ ಸಚಿವರು ವಹಿಸಿಕೊಳ್ಳಬೇಕಾದ ಜವಾಬ್ದಾರಿಗಳ ಬಗ್ಗೆ ಉಪಾಹಾರ ಕೂಟದಲ್ಲಿ ಮುಖ್ಯಮಂತ್ರಿಯವರು ನಿರ್ದೇಶನ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೆ, ಶೀಘ್ರ ನಡೆಯಲಿರುವ ದೇಶದ ನಾಲ್ಕು ರಾಜ್ಯಗಳ ಚುನಾವಣೆಗೂ ಕೆಲ ಸಚಿವರಿಗೆ ಹೊಣೆಗಾರಿಕೆಯನ್ನು ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಲ್ಲದೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದ ವರ್ಚಸ್ಸು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು, ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ, ಆಡಳಿತ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆಯೂ ಸೂಚನೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.