ಶಿವಮೊಗ್ಗ ಗಲಭೆ ಆರೋಪಿಗಳ ಎನ್‌ಕೌಂಟರ್ ಮಾಡಿ: ಎಂ.ಪಿ.ರೇಣುಕಾಚಾರ್ಯ
ಶಿವಮೊಗ್ಗ ರಾಗಿಗುಡ್ಡದ ಗಲಾಟೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರಷ್ಟೇ ಸಾಲದು, ಅಂಥವರನ್ನು ಎನ್ ಕೌಂಟರ್ ಮಾಡಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ದಾವಣಗೆರೆ (ಅ.07): ಶಿವಮೊಗ್ಗ ರಾಗಿಗುಡ್ಡದ ಗಲಾಟೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರಷ್ಟೇ ಸಾಲದು, ಅಂಥವರನ್ನು ಎನ್ ಕೌಂಟರ್ ಮಾಡಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಗಿಗುಡ್ಡದ ಗಲಾಟೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು.
ಹಿಂದೂಗಳನ್ನೇ ಗುರಿಯಾಗಿಸಿ, ಹಿಂದೂಗಳ ಮನೆಗಳ ಮೇಲೆ, ಕಾರು, ದ್ವಿಚಕ್ರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ, ಜಖಂಗೊಳಿಸಿ, ಆ ಹಿಂದೂಗಳ ಮನಸ್ಸಿನಲ್ಲಿ ಭಯಭೀತಿ ಹುಟ್ಟಿಸಲಾಗಿದೆ ಎಂದು ಆರೋಪಿಸಿದರು. ತಕ್ಷಣವೇ ಸಂತ್ರಸ್ತ ಹಿಂದೂಗಳಿಗೆ ಪರಿಹಾರ ನೀಡಿ, ಆ ಜನರಲ್ಲಿ ಧೈರ್ಯ ತುಂಬಿ, ಸರ್ಕಾರ ನೆರವಿಗೆ ಧಾವಿಸಲಿ. ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಮರ ತುಷ್ಟೀಕರಣಕ್ಕೆ ಮುಂದಾಗಿದೆ. ಇದರಿಂದ ಪ್ರಚೋದನೆಗೆ ಒಳಗಾದ ಕೆಲ ಪುಂಡರು ಈ ರೀತಿಯ ಕೃತ್ಯವೆಸಗಿದ್ಧಾರೆ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯದಲ್ಲಿ ಇನ್ನೊಬ್ಬ ಯಡಿಯೂರಪ್ಪ ಹುಟ್ಟಲು ಸಾಧ್ಯವಿಲ್ಲ: ಎಂ.ಪಿ.ರೇಣುಕಾಚಾರ್ಯ
ಗಲಭೆ ಹಿಂದೆ ಭಯೋತ್ಪಾದನಾ ಸಂಘಟನೆಗಳ ಪಾತ್ರ: ರಾಗಿಗುಡ್ಡ ಪ್ರಕರಣದ ಹಿಂದೆಯೂ ಭಯೋತ್ಪಾದನಾ ಸಂಘಟನೆಗಳ ಪಾತ್ರವಿದೆ. ಭಯೋತ್ಪಾದನೆ ಚಟುವಟಿಕೆಗಳು ನಡೆಸುವ ಯುವಕರೇ ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಕೃತ್ಯ ನಡೆಸಿದ್ದಾರೆ. ಇದು ಪೂರ್ವಯೋಜಿತ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳ ಮನೆ ಮೇಲೆ ನಡೆದಿರುವ ದಾಳಿ ಪೂರ್ವ ನಿಯೋಜಿತ ಕೃತ್ಯ. ಘಟನೆಯ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದೇನೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಐದಾರು ಕಡೆ ಈ ರೀತಿಯ ಘಟನೆ ನಡೆದಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಪೊಲೀಸರು ವಿಫಲ: ಈದ್ ಮೆರವಣೆಗೂ ಮೊದಲು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ. ಆದರೆ ಈದ್ ಮೆರವಣಿಗೆ ವೇಳೆ ಹಿಂದೂಗಳನ್ನು ಕೆರಳಿಸುವ ವೇಳೆ ಟಿಪ್ಪು, ಔರಂಗಜೇಬ್, ಅಖಂಡ ಭಾರತದ ಕಟೌಟ್ ನಿರ್ಮಿಸಿದ್ದಾರೆ. ಇದನ್ನು ತೆರವುಗೊಳಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ ಎಂದು ಗುಡುಗಿದರು. ಗಲಭೆ ನಡೆದ ವೇಳೆ ಇಲ್ಲಿನ ಎಸ್ಪಿ ಮೇಲೂ ಕಲ್ಲು ತೂರಲಾಗಿದೆ. ಪೊಲೀಸರಿಗೆ ಇಲ್ಲಿ ರಕ್ಷಣೆಯೇ ಇಲ್ಲವಾಗಿದೆ.
ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಸಿದ್ದನಗೌಡ ಹಾಗೂ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ: ಯಾಕೆ ಗೊತ್ತಾ?
ಗಲಭೆ ಸುತ್ತ ಪೊಲೀಸ್ ವೈಫಲ್ಯ ಎದ್ದು ಕಾಣುತ್ತದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಗಲಭೆ ನಡೆದಿದೆ. ಗಣೇಶೋತ್ಸವದಲ್ಲಿ ಭಾಗಿಯಾದವರ ಹುಡುಗರ ಮೇಲೆ ಹಲ್ಲೆಯಾಗಿದೆ. ರಕ್ಷಿಸಲು ಬಂದವರ ಮೇಲೂ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ. ಹಿಂದೂಗಳ ಮನೆ ಕಲ್ಲು ತೂರಿದ್ದಾರೆ. ಮುಸ್ಲಿಮರ ಒಂದೇ ಒಂದು ಮನೆಗೆ ಕಲ್ಲು ಬಿದ್ದಿಲ್ಲ. ಈ ಘಟನೆ ಏಕಾಏಕಿ ನಡೆದಿಲ್ಲ ಎಂದು ಆರೋಪಿಸಿದರು. ಘಟನೆ ವೇಳೆ ಮಹಿಳೆಯರನ್ನು ರಕ್ಷಿಸಲು ಬಂದವರ ಮೇಲೆ ಕೇಸ್ ಹಾಕಲಾಗಿದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದವರನ್ನು ಜೈಲಿಗೆ ಹಾಕಲಾಗಿದೆ. ಕ್ರಿಶ್ಚಿಯನ್ ರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ಕಿಡಿಕಾರಿದರು.