Asianet Suvarna News Asianet Suvarna News

ಕಾಂಗ್ರೆಸ್‌ನಿಂದ ಬರಗಾಲ, ಆತ್ಮಹತ್ಯೆ ಗ್ಯಾರಂಟಿ ಉಚಿತ: ಮಾಜಿ ಸಚಿವ ಡಾ.ಸುಧಾಕರ್‌

ಕಾಂಗ್ರೆಸ್‌ ನಾಯಕರಿಗೆ ಶ್ರೀರಾಮ ಬೇಕಿಲ್ಲ. ನ್ಯಾಯಾಲಯದಲ್ಲಿ ವಕೀಲರನ್ನು ನಿಯೋಜಿಸಿ ಶ್ರೀರಾಮ ಇಲ್ಲ, ರಾಮಸೇತು ಸತ್ಯವಲ್ಲ ಎಂದು ಕಾಂಗ್ರೆಸ್‌ ವಾದಿಸಿತ್ತು. ಈಗ ಅಸಂಖ್ಯಾತರ ಭಕ್ತಿಯನ್ನು ನೋಡಿ ಹೊಟ್ಟೆ ಉರಿಯಿಂದ ಮಂದಿರದ ಬಗ್ಗೆ ಮಾತನಾಡಲು ಶುರು ಮಾಡಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಹರಿಹಾಯ್ದರು. 

Ex Minister Dr K Sudhakar Slams On Congress Govt gvd
Author
First Published Jan 10, 2024, 11:59 PM IST

ಚಿಕ್ಕಬಳ್ಳಾಪುರ (ಜ.10): ಕಾಂಗ್ರೆಸ್‌ ನಾಯಕರಿಗೆ ಶ್ರೀರಾಮ ಬೇಕಿಲ್ಲ. ನ್ಯಾಯಾಲಯದಲ್ಲಿ ವಕೀಲರನ್ನು ನಿಯೋಜಿಸಿ ಶ್ರೀರಾಮ ಇಲ್ಲ, ರಾಮಸೇತು ಸತ್ಯವಲ್ಲ ಎಂದು ಕಾಂಗ್ರೆಸ್‌ ವಾದಿಸಿತ್ತು. ಈಗ ಅಸಂಖ್ಯಾತರ ಭಕ್ತಿಯನ್ನು ನೋಡಿ ಹೊಟ್ಟೆ ಉರಿಯಿಂದ ಮಂದಿರದ ಬಗ್ಗೆ ಮಾತನಾಡಲು ಶುರು ಮಾಡಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಹರಿಹಾಯ್ದರು. ತಾಲೂಕಿನ ಅಡ್ಡಗಲ್‌ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನ್ನಭಾಗ್ಯ ನೀಡಿದ್ದು ಪ್ರಧಾನಿ ಮೋದಿ: ಮಂತ್ರಾಕ್ಷತೆ ಅನ್ನಭಾಗ್ಯದ ಅಕ್ಕಿ ಎಂದು ಹೇಳುತ್ತಾರೆ. ಆದರೆ ಆ ಅನ್ನಭಾಗ್ಯವನ್ನು ಪ್ರಧಾನಿ ಮೋದಿ ನೀಡುತ್ತಿದ್ದಾರೆ. ಗ್ಯಾರಂಟಿ ಎಂದು ಹೇಳಿದವರು ಬರಗಾಲವನ್ನು ಮಾತ್ರ ಗ್ಯಾರಂಟಿಯಾಗಿ ನೀಡಿದ್ದಾರೆ. ರೈತರಿಗೆ ವಿದ್ಯುತ್‌ ಇಲ್ಲ, ನೀರಿಲ್ಲ, ನಾವು ನೀಡುತ್ತಿದ್ದ ಕಿಸಾನ್‌ ಸಮ್ಮಾನ್‌ ನಿಧಿ ಸಿಗುತ್ತಿಲ್ಲ. ಕಾಂಗ್ರೆಸ್‌ನಿಂದ ಬರಗಾಲ ಹಾಗೂ ಆತ್ಮಹತ್ಯೆ ಗ್ಯಾರಂಟಿ ಉಚಿತವಾಗಿ ಸಿಕ್ಕಿದೆ ಎಂದರು. ಈಗ ರಾಜ್ಯದ ಪಡಿತರದಲ್ಲಿ ಸಿಗುತ್ತಿರುವ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದರಲ್ಲೂ ಕಾಂಗ್ರೆಸ್‌ ಸರ್ಕಾರ ಕಡಿತ ಮಾಡಿ ಕಡಿಮೆ ಅಕ್ಕಿಯನ್ನು, ರಾಗಿಯನ್ನು ನೀಡುತ್ತಿದೆ. ಕಾಂಗ್ರೆಸ್‌ ನಾಯಕರು 10 ಕೆಜಿ ಅಕ್ಕಿ ಎಂದು ಉಡಾಫೆ ಮಾತನಾಡಿದ್ದಾರೆ. ಮಾತು ಕೊಟ್ಟಂತೆ 10 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಆಗ್ರಹಿಸಿದರು.

ದೇವಸ್ಥಾನಗಳು, ಧಾರ್ಮಿಕ ಕ್ಷೇತ್ರಗಳು ಪಾಲಿಥೀನ್ ಮುಕ್ತವಾಗಬೇಕು: ಮಹರ್ಷಿ ಆನಂದ ಗುರೂಜಿ

500 ವರ್ಷಗಳ ಕನಸು ನನಸಾಗಿ ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗಿದೆ. ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಕೈಗೊಂಡ ರಥಯಾತ್ರೆಯಲ್ಲಿ ಮುಖ್ಯ ಸಂಯೋಜಕರಾಗಿ ಕೆಲಸ ಮಾಡಿದ್ದ ನರೇಂದ್ರ ಮೋದಿ ಇಂದು ಪ್ರಧಾನಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಲಿರುವುದು ಅಭಿಮಾನ ತಂದಿದೆ ಎಂದರು. ವಿಶ್ವಕರ್ಮ ಯೋಜನೆ, ಮಹಿಳೆಯರ ಆರೋಗ್ಯ ಕಾಪಾಡುವ ಉಜ್ವಲ ಯೋಜನೆ, ಜನಧನ, ಬೀದಿ ಬದಿ ವ್ಯಾಪಾರಿಗಳಿಗೆ ನೇರ ಸಾಲ ನೀಡುವುದು ಮೊದಲಾದ ಯೋಜನೆಗಳನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಯೋಜನೆಗಳನ್ನು ಜನತೆಗೆ ತಲುಪಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ ಎಂದರು.

ಡೈರಿ ಮಿಲ್ಕ್ ಚಾಕಲೇಟ್ ನೀಡಿಕೆ: ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ, ದೂರು ಪ್ರತಿ ದೂರು ದಾಖಲು

ಕಾಂಗ್ರೆಸ್‌ನಿಂದ ಎಲ್ಲೆಡೆ ದಾರಿದ್ರ್ಯ: ಕಾಂಗ್ರೆಸ್‌ ಸರ್ಕಾರ ಬಂದ ನಂತರ ಎಲ್ಲ ಕಡೆ ದಾರಿದ್ರ್ಯ ಹಿಡಿದಿದೆ. ಯಾವಾಗ ವಿದ್ಯುತ್‌ ಕಡಿತವಾಗುತ್ತದೆ ಎಂದು ಗೊತ್ತಾಗುವುದಿಲ್ಲ. ರಸ್ತೆ ಗುಂಡಿ ಮುಚ್ಚಲು ಕ್ರಮ ವಹಿಸಿಲ್ಲ, ಕನಿಷ್ಠ 1 ಕಿ.ಮೀ. ರಸ್ತೆ ನಿರ್ಮಿಸಿಲ್ಲ ಎಂದು ಮಾಜಿ ಸಚಿವ ಡಾ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ರಾಮರಾಜ್ಯ ಕಟ್ಟುತ್ತಿದ್ದು, ಅವರೇ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ. ಇದಕ್ಕಾಗಿ ಎಲ್ಲರೂ ಕೈ ಜೋಡಿಸಿ. ಕೇಂದ್ರ ಸರ್ಕಾರದಿಂದ ಜನ ಔಷಧಿಗಳು ಶೇ.60-90 ರಿಯಾಯಿತಿಯಲ್ಲಿ ಸಿಗುತ್ತಿದೆ, ಆಯುಷ್ಮಾನ್‌ ಭಾರತ್‌ನಡಿ ವಿಮೆ ಸಿಗುತ್ತಿದೆ, ಹಿಂದುಳಿದ ವರ್ಗಕ್ಕೆ ಮುದ್ರಾ ಯೋಜನೆಯಡಿ 30 ಲಕ್ಷ ರೂ. ವರೆಗೆ ಸಾಲ ಸಿಗುತ್ತಿದೆ ಎಂದು ಹೇಳಿದರು. ಈ ವೇಳೆ ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌, ಬಿಜೆಪಿ ಮುಖಂಡ ಕೃಷ್ಣಾರೆಡ್ಡಿ, ಅಡ್ಡಗಲ್ ಗ್ರಾ.ಪಂ.ಅಧ್ಯಕ್ಷೆ, ಗ್ರಾಮಪಂಚಾಯತಿ ಸದಸ್ಯರು,ಸಿಬ್ಬಂದಿ, ಅಧಿಕಾರಿಗಳು ಇದ್ದರು.

Follow Us:
Download App:
  • android
  • ios