ಕಾಂಗ್ರೆಸ್ ಮನೆಯೊಂದು ನೂರು ಬಾಗಿಲಿನಂತಾಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್
ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಲ್ಲ ನೂರು ಬಾಗಿಲಿನಂತಾಗಿದೆ. ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ಸಿನವರು ಆಪರೇಷನ್ ಕಮಲದ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಕಿಡಿಕಾರಿದರು.
ಹುಬ್ಬಳ್ಳಿ (ನ.01): ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಲ್ಲ ನೂರು ಬಾಗಿಲಿನಂತಾಗಿದೆ. ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ಸಿನವರು ಆಪರೇಷನ್ ಕಮಲದ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಕಿಡಿಕಾರಿದರು. 135 ಶಾಸಕರು ಆಯ್ಕೆಯಾಗುವ ಮೂಲಕ ಸರ್ಕಾರ ರಚಿಸಿರುವ ಕಾಂಗ್ರೆಸ್ ಸರ್ಕಾರವನ್ನು ಯಾವ ಮೂರ್ಖ ಆಪರೇಷನ್ ಮೂಲಕ ಬೀಳಿಸಲು ಯತ್ನಿಸುತ್ತಾನೆ. ನಮ್ಮ ಪಕ್ಷ ಯಾವುದೇ ಆಪರೇಷನ್‌ಗೆ ಕೈಹಾಕಿಲ್ಲ. ಅವರಲ್ಲಿಯೇ ಇಂದು ಅಸಮಾಧಾನದ ಅಲೆ ಬೀಸುತ್ತಿದೆ. ಕಾಂಗ್ರೆಸ್ಸಿನವರೇ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಹಾಗೇನಾದರೂ ಸರ್ಕಾರ ಬಿದ್ದಲ್ಲಿ ಕಾಂಗ್ರೆಸ್ಸಿನವರೇ ಬೀಳಿಸುತ್ತಾರೆ ಎಂದು ಭವಿಷ್ಯ ನುಡಿದರು. ಮುಖ್ಯಮಂತ್ರಿಗಳು ಮಾತೆತ್ತಿದರೆ ಬರಿ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಮಾತನಾಡುತ್ತಾರೆ. ಆದರೆ, ಗ್ಯಾರಂಟಿಯ ಸೌಲಭ್ಯಗಳು ಸಮರ್ಪಕವಾಗಿ ಜನರಿಗೆ ತಲುಪಿಯೇ ಇಲ್ಲ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಹೊರತುಪಡಿಸಿದರೆ ಉಳಿದೆಲ್ಲ ಯೋಜನೆಗಳು ಹೆಸರಿಗೆ ಮಾತ್ರ ಎಂಬಂತಾಗಿದೆ.
ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಒಪ್ಪಿಗೆ ನೀಡಿ: ಹೈಕೋರ್ಟ್
ರಾಜ್ಯದ ರೈತರಿಗೆ ಸಮರ್ಪಕವಾದ ವಿದ್ಯುತ್ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಾವು ರೈತರಿಗೆ 3ಗಂಟೆ, 5ಗಂಟೆ, 7ಗಂಟೆ ವಿದ್ಯುತ್ ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ. ಇದು ಬರೀ ಮಾಧ್ಯಮಗಳ ಎದುರು ನೀಡುವ ಹೇಳಿಕೆಯಾಗಿದೆ. ಆದರೆ, ವಾಸ್ತವವಾಗಿ ಒಂದು ಗಂಟೆ ಸಹ ವಿದ್ಯುತ್ ನೀಡುತ್ತಿಲ್ಲ. ರಾಜ್ಯದಲ್ಲಿ ಬರದಿಂದಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಆತ್ಮಹತ್ಯೆಗೆ ಕೈಹಾಕುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಂಡಿ ಮುಚ್ಚಲು ₹10 ನೀಡಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ₹10 ಸಹ ನೀಡಿಲ್ಲ. ಗ್ಯಾರಂಟಿ ಯೋಜನೆಗಳಿಗಾಗಿಯೇ ₹50-60 ಸಾವಿರ ಕೋಟಿ ಹಣ ದುಂದುವೆಚ್ಚಕ್ಕೆ ಮುಂದಾಗಿರುವ ಸರ್ಕಾರದ ನಡೆ ಖಂಡನಾರ್ಹ. ಅಧಿಕಾರ ವಹಿಸಿ 6 ತಿಂಗಳಾದರೂ ಈ ವರೆಗೆ ಕ್ಷೇತ್ರಗಳಿಗೆ ನಯಾಪೈಸಾ ಅನುದಾನ ನೀಡಿಲ್ಲ ಎಂದರೆ ಅದರ ಮೇಲೆಯೇ ಶಾಸಕರು ಅರ್ಥಮಾಡಿಕೊಳ್ಳಲಿ. ಸರ್ಕಾರ ಇಂದು ದಿವಾಳಿ ಅಂಚಿಗೆ ತಲುಪಿದೆ ಎಂದರು.
ಕತ್ತೆ ಕಾಯುತ್ತಿದ್ದರಾ?: ಸರ್ಕಾರದ ತಪ್ಪುಗಳನ್ನು ಮುಚ್ಚಿಕೊಳ್ಳಲು, ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಆಪರೇಷನ್ ಕಮಲ, ಹುಲಿ ಉಗುರಿನ ವಿಷಯ ಮುನ್ನಲೆಗೆ ತರುತ್ತಿದ್ದಾರೆ. ನೂರಾರು ವರ್ಷಗಳಿಂದ ಹಲವು ಸೆಲಬ್ರಿಟಿಗಳು, ಮುಖಂಡರು, ಅಧಿಕಾರಿಗಳು ಹುಲಿ ಉಗುರು ಧರಿಸಿದ್ದಾರೆ. ಇಷ್ಟು ವರ್ಷ ಅರಣ್ಯಾಧಿಕಾರಿಗಳು ಇದನ್ನು ಗಮನಿಸಲಿಲ್ಲವೇ? ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯಾಧಿಕಾರಿಗಳು ಇಷ್ಟುವರ್ಷ ಏನ್ ಕತ್ತೆ ಕಾಯುತ್ತಿದ್ದರಾ? ಇಂತಹ ವಿಷಯಗಳನ್ನು ಮುಂದಿಟ್ಟು ಸರ್ಕಾರವು ಜನರ ಗಮನವನ್ನು ಬೇರಡೆಗೆ ಸೆಳೆಯುವುದನ್ನು ಕೈಬಿಡಲಿ ಎಂದರು.
ತಾರತಮ್ಯದಿಂದಾಗಿ ಪಕ್ಷ ಕೈಬಿಟ್ಟೆ: ಹಿಂದೆ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬೀಳಲು ನೇರ ಡಿಕೆಶಿನೇ ಕಾರಣ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ಅಂದಿನ ಸರ್ಕಾರ ಬೀಳಲು ಅಂದಿನ ಮಂತ್ರಿಮಂಡಳದ ನಡವಳಿಕೆಯೇ ಪ್ರಮುಖ ಕಾರಣ. ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾಕತಮ್ಯ ಮಾಡಿದರು. ಹಾವೇರಿ ಜಿಲ್ಲೆಯಿಂದ ಓರ್ವನೆ ಶಾಸಕನಾಗಿ ಆಯ್ಕೆಯಾದ ನನಗೆ ಮಂತ್ರಿಸ್ಥಾನ ನೀಡದೇ ಸಿದ್ದರಾಮಯ್ಯನವರು ಸ್ವಜಾತಿಯವರಿಗೆ ಆದ್ಯತೆ ನೀಡಿದರು. ಇದರಿಂದಾಗಿ ನನಗೆ ನೋವಾಗಿ ಅನಿವಾರ್ಯವಾಗಿ ನಾನು ಸೇರಿದಂತೆ ಸಮಾನ ಮನಸ್ಕರೆಲ್ಲ ಸೇರಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಬೇಕಾಯಿತು ಎಂದರು.
ಮುಂಬರುವ ಲೋಕಸಭಾ ಚುನಾವಣೆ ಕುರಿತು ಮಾತನಾಡಿ, ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಹೈಕಮಾಂಡ್ ಯಾವ ಅಭ್ಯರ್ಥಿಯನ್ನು ಸೂಚಿಸುತ್ತದೆಯೇ ಅವರ ಗೆಲುವುಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ ವಿರೋಧ ಪಕ್ಷದ ನಾಯಕನನ್ನು ಹಾಗೂ ರಾಜ್ಯಾಧ್ಯಕ್ಷರನ್ನು ಆಯ್ಕೆಮಾಡಲಿದೆ ಎಂದರು.
ಬೆಂಗಳೂರಿನಲ್ಲಿ ಚಿರತೆ ಹಿಡಿಯಲು 70 ಅರಣ್ಯ ಸಿಬ್ಬಂದಿ, ಥರ್ಮಲ್ ಡ್ರೋನ್ ಕ್ಯಾಮೆರಾ ಬಳಕೆ
ಡಿಕೆಶಿ ಸಿಡಿ ಕಿಂಗ್?: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕುರಿತು ಉತ್ತರಿಸಿದ ಬಿ.ಸಿ. ಪಾಟೀಲ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಿಡಿ ಕಿಂಗ್ ಎಂದು ಹೇಳುತ್ತಿದ್ದಾರೆ. ಸಿಡಿ ಮಾಡುವುದು, ಬ್ಲ್ಯಾಕ್‌ಮೇಲ್ ಮಾಡುವುದನ್ನೂ ಮಾಡಿದ್ದಾರೆ. ಅದೇ ರೀತಿ ನನ್ನನ್ನು ಖೆಡ್ಡಾಕ್ಕೆ ಕೆಡವಿದರು ಎಂದು ರಮೇಶ ಜಾರಕಿಹೊಳಿ ಅವರೇ ಆರೋಪಿಸಿದ್ದಾರೆ. ಸಿಬಿಐಗೆ ವಹಿಸುವಂತೆ ಹೇಳಿರುವುದನ್ನು ಗಮನಿಸಿದರೆ ನಾನು ನಿಷ್ಕಲ್ಮಶವಾಗಿದ್ದೇನೆ ಎಂಬುದು ರಮೇಶರ ಮಾತಿನ ಅರ್ಥ. ತನಿಖೆಗೆ ಒತ್ತಾಯಿಸಿರುವುದು ಸಂತಸದ ಸಂಗತಿ ಎಂದರು.