ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಕೋಮು ಗಲಭೆ ಜಾಸ್ತಿಯಾಗಿದೆ: ಶ್ರೀರಾಮುಲು
ಅಧಿಕಾರಕ್ಕೆ ಬಂದ ಕೇವಲ ನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಚಾಮರಾಜನಗರ (ಅ.08): ಅಧಿಕಾರಕ್ಕೆ ಬಂದ ಕೇವಲ ನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಆದೇಶಕ್ಕೆ ಮೊದಲೇ ಕಾವೇರಿ ನೀರು ಬಿಟ್ಟು ನಮ್ಮ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾರೆ, ಕಾನೂನು ವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದೆ. ಶಿವಮೊಗ್ಗ ಕಲ್ಲು ತೂರಾಟ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನ. ಕೇವಲ ಒಂದು ಸಮುದಾಯವನ್ನು ಓಲೈಸುವ ಮೂಲಕ ಸರ್ಕಾರ ರಾಜಕಾರಣಕ್ಕೆ ಮುಂದಾಗಿದೆ ಎಂದು ಅವರು ಆರೋಪಿಸಿದರು.
ಶಿವಮೊಗ್ಗ ಗಲಭೆಯನ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು, ಕೇವಲ ಪೊಲೀಸ್ ತನಿಖೆಯಿಂದ ನಿಷ್ಪಕ್ಷಪಾತ ವರದಿ ಬರಲ್ಲ. ಉನ್ನತ ಮಟ್ಟದ ತನಿಖೆ ನಡೆಯಬೇಕು, ಗೃಹ ಸಚಿವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಕೋಮು ಸಂಘರ್ಷ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಶಿವಮೊಗ್ಗ ಘಟನೆಯ ಹೊಣೆಯನ್ನು ನೇರವಾಗಿ ಸಿಎಂ ಹಾಗೂ ಡಿಸಿಎಂ ಹೊರಬೇಕು ಎಂದು ಅವರು ಕಿಡಿಕಾರಿದರು. ಎಸ್ ಸಿ ಹಾಗೂ ಎಸ್ ಟಿ ಸಮುದಾಯದ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ. ಎಸ್ ಟಿ ಸಮುದಾಯದವರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ.
Bitcoin Scam: 4 ಪೊಲೀಸ್ ಅಧಿಕಾರಿಗಳು ಸೇರಿ 6 ಮಂದಿಗೆ ಎಸ್‌ಐಟಿ ದಾಳಿ
ಎಸ್ ಸಿಪಿ, ಟಿಎಸ್ ಪಿ ಅನುದಾನ ತಂದಿದ್ದು ತಾವೇ ಎಂದುಕೊಂಡು ಸಿಎಂ ಸಿದ್ದರಾಮಯ್ಯ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಆ ಅನುದಾನ ಎಲ್ಲಿ ಹೋಗುತ್ತಿದೆ? ಇವರಿಂದಾಗಿ ದಲಿತ ಮಕ್ಕಳಿಗೆ ಸ್ಕಾಲರ್ಶಿಪ್ ಕೋಡೋಕೆ ಆಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು. ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆ ಇಂಡಿಯಾ ಮೈತ್ರಿಕೂಟ ಮಾಡಿಕೊಂಡಿದ್ದಾರೆ. ಅದರ ಭಾಗವಾಗಿ ಕಾವೇರಿ ವಿಚಾರದಲ್ಲಿ ಡಿಸಿಎಂ ಡಿಕೆಶಿ ತಮಿಳುನಾಡು ಸರ್ಕಾರವನ್ನು ಸಂತೈಸಲು ನಮ್ಮ ಜನರನ್ನು ಕಡೆಗಾಣಿಸಿದ್ದಾರೆ. ಹೀಗಾಗಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ ಎಲ್ಲರ ಸಮ್ಮುಖದಲ್ಲಿ ಕೂತು ಮಾತನಾಡಲಿದ್ದೇವೆ. ಮೈತ್ರಿ ವಿಚಾರವಿನ್ನೂ ಮಾತುಕತೆ ಹಂತದಲ್ಲಿದೆ. ನಮ್ಮ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.