ಕೆಇಎ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಸಚಿವ ಪ್ರಿಯಾಂಕ ಖರ್ಗೆಯವರ ಆಪ್ತ: ಆರಗ ಜ್ಞಾನೇಂದ್ರ
ಪಿಎಸ್‌ಐ ಹಗರಣದಲ್ಲಿ ಆರ್.ಡಿ.ಪಾಟೀಲ್‌ನನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಆಗ ಪರೀಕ್ಷಾ ಅಕ್ರಮಗಳ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಬಗ್ಗೆ ಪ್ರಿಯಾಂಕ ಖರ್ಗೆ ಹಲವು ಬಾರಿ ಹೇಳಿಕೆ ನೀಡಿದ್ದರು.
ತೀರ್ಥಹಳ್ಳಿ (ನ.11): ಪಿಎಸ್‌ಐ ಹಗರಣದಲ್ಲಿ ಆರ್.ಡಿ.ಪಾಟೀಲ್‌ನನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಆಗ ಪರೀಕ್ಷಾ ಅಕ್ರಮಗಳ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಬಗ್ಗೆ ಪ್ರಿಯಾಂಕ ಖರ್ಗೆ ಹಲವು ಬಾರಿ ಹೇಳಿಕೆ ನೀಡಿದ್ದರು. ಆದರೆ, ಆತ ಯಾರ ಪ್ರಭಾವದಿಂದ ಜೈಲಿನಿಂದ ಹೊರಗೆ ಬಂದಿದ್ದಾನೆ ಎಂಬುದನ್ನು ಸಚಿವ ಪ್ರಿಯಾಂಕ ಖರ್ಗೆಯವರು ಈಗ ಜನತೆಗೆ ತಿಳಿಸಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್.ಡಿ.ಪಾಟೀಲ್‌ಗೂ, ಕಾಂಗ್ರೆಸ್‌ಗೂ ಸಂಬಂಧ ಇಲ್ಲ ಎಂದು ಪ್ರಿಯಾಂಕ ಖರ್ಗೆಯವರು ವಿಧಾನಸಭೆಯಲ್ಲಿ ಸುಳ್ಳು ಹೇಳಿದ್ದರು. ಆದರೆ, ಆತ ಪ್ರಿಯಾಂಕ ಖರ್ಗೆಯವರ ಆಪ್ತ. ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಆರ್.ಡಿ. ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರು. ಆರ್.ಡಿ. ಪಾಟೀಲ್ ಮತ್ತು ಪ್ರಿಯಾಂಕ ಖರ್ಗೆಯವರು ಇರುವ ಕಲಬುರಗಿ ಜಿಲ್ಲೆಯಲ್ಲಿಯೇ ಪರೀಕ್ಷಾ ಅಕ್ರಮಗಳು ಹೇಗೆ ನಡೆಯುತ್ತಿವೆ. ಕೆಇಇ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಆರ್.ಡಿ.ಪಾಟೀಲ್, ಜಾಮೀನು ತಿರಸ್ಕಾರ ಆಗುವವರೆಗೂ ಎಲ್ಲಿದ್ದ?.
ಆತನನ್ನು ಪೊಲೀಸರು ಯಾಕೆ ಬಂಧಿಸಲಿಲ್ಲ?. ಅವರ ಮೇಲೆ ಯಾರ ಒತ್ತಡ ಇತ್ತು ಎಂಬುದನ್ನು ರಾಜ್ಯದ ಜನತೆಗೆ ಪ್ರಿಯಾಂಕ ಖರ್ಗೆ ತಿಳಿಸಬೇಕು ಎಂದು ವಾಗ್ದಾಳಿ ನಡೆಸಿದರು. ತಮ್ಮ ಬಗಲಲ್ಲೇ ಎಲ್ಲಾ ಅಪರಾಧಿಗಳನ್ನು ಇಟ್ಟುಕೊಂಡು ಪ್ರಿಯಾಂಕ ಖರ್ಗೆ ಊರಿಗೆ ಆಚಾರ ಹೇಳುವುದನ್ನು ಕೈ ಬಿಡಬೇಕು. ಆರ್.ಡಿ. ಪಾಟೀಲ ಕಾಂಪೌಂಡ್ ಗೋಡೆ ಹಾರಿ ಹೋಗಲು ಸ್ಥಳೀಯ ಪೊಲೀಸರು ಸಹಕರಿಸಿದ್ದಾರೆ ಎಂದು ಹೇಳುತ್ತಾರೆ. ಯಾರ ಒತ್ತಡದಿಂದ ಪೊಲೀಸರು ಸಹಕರಿಸಿದ್ದಾರೆ.
ಜೆಡಿಎಸ್, ಬಿಜೆಪಿಯಿಂದ ಅನೇಕ ಶಾಸಕರು ಕಾಂಗ್ರೆಸ್ಸಿಗೆ: ಸಚಿವ ತಿಮ್ಮಾಪುರ
ಅಂದು ಆರ್.ಡಿ. ಪಾಟೀಲನ ಕೊರಳಪಟ್ಟಿ ಹಿಡಿದು ಬಂಧಿಸಿದ್ದ ಪೊಲೀಸರು, ಇಂದು ಯಾರ ಒತ್ತಡದಿಂದ ಬಂಧಿಸಲಿಲ್ಲ? ಎಂದು ಅವರು ಪ್ರಶ್ನಿಸಿದರು. ಪ್ರಿಯಾಂಕ ಖರ್ಗೆಯವರು ಅಂದು ನನ್ನ ರಾಜೀನಾಮೆ ಕೇಳಿದ್ದರು. ಇಂದು ಅವರೇ ಅಧಿಕಾರದಲ್ಲಿದ್ದಾರೆ. ಯಾಕೆ ಪದೇ, ಪದೇ ಅಕ್ರಮಗಳು ನಡೆದರೂ ಸಚಿವರು ಅದನ್ನು ಗಮನಿಸಲಿಲ್ಲ, ಅಧಿಕಾರಿಗಳಿಗೆ ಸೂಚನೆ ನೀಡಿಲ್ಲ. ರಾಜ್ಯದ ಜನ ಅವರ ಕಡೆ ಬೆರಳು ಮಾಡಿ ತೋರಿಸುವಂತೆ ಆಗಿದೆ. ಇದಕ್ಕೆ ಅವರೇ ಸ್ಪಷ್ಟನೆ ಕೊಡಬೇಕು. ಇಂಥ ಸ್ಥಿತಿಯಲ್ಲಿ ಅವರು ಹೇಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.