ಚೈತ್ರಾ ಕುಂದಾಪುರ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ: ಆರಗ ಜ್ಞಾನೇಂದ್ರ
ಚೈತ್ರ ಕುಂದಾಪುರ ಅವರನ್ನು ಸಿಸಿಬಿ ವಿಚಾರಣೆ ಒಳಪಡಿಸಲಾಗಿದೆ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ. ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೆಟ್ ಪಡೆಯುವ ಸಂಸ್ಕೃತಿ ಇಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.
ಶಿವಮೊಗ್ಗ (ಸೆ.17): ಚೈತ್ರ ಕುಂದಾಪುರ ಅವರನ್ನು ಸಿಸಿಬಿ ವಿಚಾರಣೆ ಒಳಪಡಿಸಲಾಗಿದೆ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ. ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೆಟ್ ಪಡೆಯುವ ಸಂಸ್ಕೃತಿ ಇಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ದೆಹಲಿ ಸಂಪರ್ಕ, ಆರ್‌ಎಸ್‌ಎಸ್ ಸಂಪರ್ಕ ಇದೆ ಅಂತಾ ಅವರು ಹೇಳ್ತಾರೆ ಅಷ್ಟೇ. ಅವರು ಯಾರೋ ಹೇಳಿದ ತಕ್ಷಣ ಬಿಜೆಪಿ ಟಿಕೇಟ್ ಬಿಕರಿ ಆಗಿಲ್ಲ. ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಹೇಳಿದರು.
ಸಚಿವ ಡಿ.ಸುಧಾಕರ್ ವಿರುದ್ದ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಒಬ್ಬರಿಗೊಂದು ಕಾನೂನು ರೀತಿ ವರ್ತನೆ ಮಾಡ್ತಿದೆ. ಪ್ರಕರಣಕ್ಕೆ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತರುವವರೆಗೆ ಸರ್ಕಾರ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸಿದೆ ಎಂದರು. ಭಯೋತ್ಪಾದಕ ಅರಾಫತ್ ಅಲಿಯನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ತೀರ್ಥಹಳ್ಳಿ ಅಂದಕೂಡಲೇ ಕುವೆಂಪು, ಗೋಪಾಲಗೌಡರು, ಅನಂತಮೂರ್ತಿ, ಕಡಿದಾಳು ಮಂಜಪ್ಪ ಹೆಸರು ಕೇಳಿ ಬರುತಿತ್ತು. ಅವರ ಹೆಸರು ಕೇಳಿ ನಾವೆಲ್ಲಾ ಹೆಮ್ಮೆ ಪಡುತ್ತಿದ್ದೆವು. ಇದೀಗ ತೀರ್ಥಹಳ್ಳಿ ಅಂದ್ರೆ ಟೆರರಿಸ್ಟ್ ಗಳ ಹೆಸರು ಕೇಳಿ ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಕ ವಸ್ತುಗಳಿಂದ ವಿಮುಖರಾಗಿ: ಬದುಕು ನಿರ್ಮಾಣದ ಕನಸು ಕಾಣುವ ವಯಸ್ಸಿನಲ್ಲಿ ಎಳೆಯರು ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ವಿದ್ಯಾರ್ಥಿಗಳು ದೃಢಸಂಕಲ್ಪದಿಂದ ಮಾದಕ ವಸ್ತುಗಳಿಗೆ ಬಲಿಯಾಗದೆ ವಿಮುಖರಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಸರ್ಕಾರಿ ಪ್ರೌಢಶಾಲೆ ಮಂಡಗದ್ದೆಯಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿ, ಕ್ಷೇತ್ರದಲ್ಲಿ ಮಾದಕವಸ್ತು ನಿರ್ಮೂಲನೆಗೆ ಪೊಲೀಸ್ ಇಲಾಖೆ ಎರಡು ತಿಂಗಳಿನಿಂದ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನದ ಬಗ್ಗೆ ಶಾಸಕ ವಿಜಯೇಂದ್ರ ಹೇಳಿದ್ದೇನು?
ಹಿಂದಿನ ಅವಧಿಯಲ್ಲಿ ರಾಜ್ಯಕ್ಕೆ ಎಂಟೂವರೆ ಸಾವಿರ ಶಾಲಾ ಕೊಠಡಿಗಳು ಮಂಜೂರು ಮಾಡಲಾಗಿದೆ. ಕ್ಷೇತ್ರದ ಗ್ರಾಮೀಣ ಶಾಲಾ ಅಭಿವೃದ್ಧಿಗಾಗಿ 57 ಕೊಠಡಿಗಳನ್ನು ನಿರ್ಮಾಣ ಮಾಡಿಸಿದ್ದೇನೆ. ನಮ್ಮ ನಡುವೆ ಅದ್ಬುತ ಪ್ರತಿಭೆಗಳು ಇರಬಹುದು. ಬೆಳೆಯುವ ಮಕ್ಕಳಿಗೆ ಸ್ಪೂರ್ತಿ ಮತ್ತು ಪ್ರೇರಣೆ ಸಿಕ್ಕರೆ ಉತ್ತಮ ಸಾಧನೆ ಮಾಡಬಲ್ಲರು. ಓದುವ ಸಂದರ್ಭದಲ್ಲಿ ಎಲ್ಲಾ ವಿಷಯದಲ್ಲೂ ಆಸಕ್ತಿ ಬೆಳೆಸಿಕೊಳ್ಳಿ ಎಂದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್, ಮಾಜಿ ತಾ.ಪಂ. ಸದಸ್ಯ ಬೇಗುವಳ್ಳಿ ಕವಿರಾಜ್, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಸುನಿತಾ ನಾಯ್ಕ್, ಸದಸ್ಯರಾದ ಪುಟ್ಟೋಡ್ಲು ರಾಘವೇಂದ್ರ, ಸಿಂಧುವಾಡಿ ಸತೀಶ್, ಕುಳ್ಳುಂಡೆ ನಾಗರಾಜ್, ಸುಂದರೇಶ್ ಶೆಟ್ಟಿ ಇದ್ದರು.