ಡಿಕೆಸು, ಡಿಕೆಶಿ ಅವರದು ಜಿನ್ನಾ ಸಂಸ್ಕೃತಿ: ಈಶ್ವರಪ್ಪ ಕಿಡಿ
ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೂಗು ಎತ್ತಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರದು ಜಿನ್ನಾ ಸಂಸ್ಕೃತಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಶಿವಮೊಗ್ಗ (ಫೆ.03): ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೂಗು ಎತ್ತಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರದು ಜಿನ್ನಾ ಸಂಸ್ಕೃತಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಕೇಂದ್ರ ಸರ್ಕಾರದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ ಎಂದು ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೂಗು ಎತ್ತಿದ್ದಾರೆ.
ಈ ಹಿಂದೆ ಇದೇ ಕಾಂಗ್ರೆಸ್‌ನವರು ಕೇವಲ ಅಧಿಕಾರಕ್ಕಾಗಿ ಹಿಂದೂಸ್ತಾನ- ಪಾಕಿಸ್ತಾನ ಅಂತಾ ಒಡೆದು ದೇಶವನ್ನು ಎರಡು ಭಾಗ ಮಾಡಿದ್ದರು. ಹಿಂದೂ, ಮುಸ್ಲಿಂ ಎಲ್ಲರೂ ಒಟ್ಟಾಗಿ ಇದ್ದಾಗ ದೇಶ ವಿಭಜನೆ ಆಯ್ತು. ಕಾಂಗ್ರೆಸ್ ನಾಯಕರದ್ದು ಒಂದು ರೀತಿಯ ಜಿನ್ನಾ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನು ಅವರ ಸಹಯೋದರ ಡಿಸಿಎಂ ಡಿಕೆ.ಶಿವಕುಮಾರ್ ಸಮರ್ಥನೆ ಮಾಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಇದನ್ನು ಒಪ್ಪಲ್ಲ ಎಂದಿರೋದು ಸಂತೋಷದ ವಿಚಾರ.
ಸಂಸದ ಡಿ.ಕೆ.ಸುರೇಶ್ ದೇಶದ್ರೋಹಿ: ಅಪ್ಪಚ್ಚು ರಂಜನ್ ಆಕ್ರೋಶ
ಹಿಂದೂಸ್ತಾನ- ಪಾಕಿಸ್ತಾನ ಆದ್ಮೇಲೆ ಈಗ ಮತ್ತೆ ದೇಶವನ್ನು ಎರಡು ಭಾಗ ಮಾಡಲು ಹೊರಟಿದ್ದಾರೆ. ಡಿ.ಕೆ.ಸುರೇಶ್ ಅವರು ರಾಜ್ಯಕ್ಕೆ ಬಜೆಟ್‌ನಲ್ಲಿ ಏನು ಸಿಕ್ಕಿದೆ, ಏನೂ ಸಿಕ್ಕಿಲ್ಲ ಎಂದು ಲೋಕಸಭೆಯಲ್ಲಿ ಚರ್ಚೆ ಬಿಟ್ಟು ರಸ್ತೆಯಲ್ಲಿ ಹೋಗೋ ದಾಸನ ತರ ಮಾತಾಡಿದ್ದಾರೆ. ಇಡೀ ದೇಶದಲ್ಲಿ ನಾನು ಒಬ್ಬ ರಾಜಕಾರಣಿ, ಬದುಕಿದ್ದೇನೆ ಎಂದು ತೋರಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರಿಗೆ ದೇಶ ಎಂದರೇ ತಾಯಿ ಎನ್ನುವ ಮನೋಭಾವವಿಲ್ಲ ಎಂದು ಹರಿಹಾಯ್ದರು.
ಸುಳ್ಳು ಶ್ವೇತಪತ್ರ ಹೊರಡಿಸಿದರೆ ಸಿದ್ದರಾಮಯ್ಯ ಬೆತ್ತಲೆ: ಕೆ.ಶಿವರಾಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಶೇ.40ಕ್ಕಿಂತ ಜಾಸ್ತಿ ಕಮಿಷನ್ ತೆಗೆದುಕೊಳ್ತಾ ಇದ್ದಾರೆ ಅಂತಾ ಕಾಂಗ್ರೆಸ್‌ನವರೇ ಹೇಳ್ತಾ ಇದ್ದಾರೆ. ಕಂಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಈಗ ಕಣ್ಮುಚ್ಚಿ ಕುಳಿತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಶೇ.40 ಕಮಿಷನ್ ಅಂತಾ ಬೊಬ್ಬೆ ಹೊಡೆಯುತ್ತಿದ್ದರು. ಈಗ ಕಾಂಗ್ರೆಸ್‌ನವರು ಏನ್ ಹೇಳ್ತಾರೆ ಎಂದು ಪ್ರಶ್ನಿಸಿದರು. ಗುತ್ತಿಗೆದಾರರು ಇವತ್ತು ಕಣ್ಣೀರು ಹಾಕ್ತಾ ಇದ್ದಾರೆ. ಸರ್ಕಾರ ಬಂದು ಏಳು ತಿಂಗಳು ಆಯ್ತು, ಒಂದು ಬುಟ್ಟಿ ಮಣ್ಣು ಹಾಕಿದ್ದಾರಾ? ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ. ನಾನು ಸ್ವಾಗತ ಮಾಡುತ್ತೇನೆ. ಆದರೆ, ಸುಳ್ಳು ಶ್ವೇತಪತ್ರ ಹೊರಡಿಸಿದರೆ ಆರ್ಥಿಕ ಪರಿಸ್ಥಿತಿಯಿಂದ ಸಿದ್ದರಾಮಯ್ಯ ಬೆತ್ತಲೆ ಆಗ್ತಾರೆ ಎಂದು ಚಾಟಿ ಬೀಸಿದರು.
ದೇವೇಗೌಡರ ಮೇಲಿನ ಗೌರವಕ್ಕೆ ಸುಮ್ಮನಿದ್ದೇನೆ: ಸಚಿವ ಚಲುವರಾಯಸ್ವಾಮಿ
ಜಾತಿ ಜಾತಿಗಳೆಲ್ಲ ಛಿದ್ರ: 9 ವರ್ಷದಿಂದ ಜಾತಿಗಣತಿ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಈಗಾಗಲೇ ಜಾತಿಗಣತಿ ವರದಿ ರೆಡಿ ಇದೆ ಅಂತಾ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಆದರೆ, ವರದಿ ಜಾರಿಗೊಳಿಸಲು ಸಿದ್ದರಾಮಯ್ಯ ರೆಡಿ ಇಲ್ಲ. ಜಾತಿಗಣತಿ ವರದಿ ಲೋಕಸಭೆ ಚುನಾವಣೆವರೆಗೂ ಬಿಡುವುದಿಲ್ಲ. ದೇಶ ಮಾತ್ರ ಅಲ್ಲ. ಜಾತಿ, ಜಾತಿಗಳನ್ನು ಛಿದ್ರ ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಬೆಲ್ ಪ್ರಶಸ್ತಿ ಕೊಡಬೇಕು. ಲೋಕಸಭಾ ಚುನಾವಣೆ ಮುಗಿದ ಮೇಲೆ ಸರ್ಕಾರ ಇರುವುದಿಲ್ಲ. ಗ್ಯಾರಂಟಿನೂ ಇರುವುದಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು ಎಂದು ಲೇವಡಿ ಮಾಡಿದರು. ಕೇಂದ್ರ ಬಜೆಟ್‌ನನ್ನು ಸಂತೋಷದಿಂದ ಸ್ವಾಗತ ಮಾಡ್ತೇನೆ. ಕೇಂದ್ರ ಸರ್ಕಾರ ಮೂಲಸೌಕರ್ಯ, ವಿದ್ಯುತ್‌ಗೆ ಒತ್ತು ನೀಡಿದೆ. ಬಡವರು, ರೈತ, ಮಹಿಳೆಯರು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಹ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದರು.