ವಿಜಯೇಂದ್ರ ಪ್ರತಿಭೆಗೆ ಮೋದಿ, ಅಮಿತ್ ಶಾ ಮನ್ನಣೆ: ಎಸ್.ಎಂ.ಕೃಷ್ಣ
ಬಿ.ವೈ.ವಿಜಯೇಂದ್ರ ಅವರ ಪ್ರತಿಭೆಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಹತ್ವದ ಹೊಣೆಯನ್ನು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಬೆಂಗಳೂರು (ನ.14): ಬಿ.ವೈ.ವಿಜಯೇಂದ್ರ ಅವರ ಪ್ರತಿಭೆಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಹತ್ವದ ಹೊಣೆಯನ್ನು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ತಮ್ಮ ಛಾಪನ್ನು ತೋರಿಸಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.
ಸೋಮವಾರ ತಮ್ಮ ನಿವಾಸದಲ್ಲಿ ವಿಜಯೇಂದ್ರ ಭೇಟಿಯಾಗಿ ಆರ್ಶೀವಾದ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೃಷ್ಣ, ನೂತನವಾಗಿ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಆಗಿರುವ ವಿಜಯೇಂದ್ರ ಅವರನ್ನು ಹಾರ್ದಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಹತ್ತಾರು ವರ್ಷಗಳಿಂದ ಬಿಜೆಪಿಯನ್ನು ರಾಜ್ಯದಲ್ಲಿ ಭದ್ರವಾದ ಬುನಾದಿಯ ಮೇಲೆ ಕಟ್ಟಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಶ್ರಮಿಸಿದ್ದಾರೆ. ಅವರು ಕಟ್ಟಿದ ಆಸ್ತಿಯ ಮೇಲೆ ವಿಜಯೇಂದ್ರ ಅವರು ಬೃಹತ್ ಪಕ್ಷವನ್ನು ಕಟ್ಟುವ ಹಾಗೂ ಮುಂದಿನ ಲೋಕಸಭಾ ಚುನಾವಣೆ, ನಂತರ ಬರುವ ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ಛಾಪನ್ನು ಒತ್ತಿ ತೋರಿಸುವ ದೊಡ್ಡ ಜವಾಬ್ದಾರಿ ಹೊರಲಿದ್ದಾರೆ ಎಂದರು.
ಸಿದ್ದರಾಮಯ್ಯ ಈಗ ರಾಹುಲ್ ಗಾಂಧಿ ಲೇವಲ್‌ಗೆ ಮಾತನಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ವಿಜಯೇಂದ್ರರಿಗೆ ಎಲ್ಲ ವಿಧದ ಯಶಸ್ಸು ಸಿಗಲಿ ಎಂಬುದಾಗಿ ಹಾರೈಸಿದ್ದೇನೆ. ಇಂದಲ್ಲ ನಾಳೆ ಯುವ ಪ್ರತಿಭೆಗಳು ಹೊರಹೊಮ್ಮಬೇಕು. ಅವರ ಜೊತೆ ಹಿರಿಯರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಅದಕ್ಕೆ ನಾವು ಅನುವು ಮಾಡಿಕೊಟ್ಟು, ಅವರ ಕೈಗಳನ್ನು ಬಲಪಡಿಸಬೇಕು. ಅವರಿಗೆ ಮಾರ್ಗದರ್ಶನ ನೀಡಬೇಕು ಎಂದರು. ರಾಜ್ಯಾಧ್ಯಕ್ಷರ ಬದಲಾವಣೆ ಸಹಜ. ಹಿರಿಯರಾದ ನಾವು ಸಮನ್ವಯ ಸಾಧಿಸಿಕೊಂಡು ಹೋಗಬೇಕಾತ್ತದೆ. ಇಂದೆಲ್ಲಾ ನಾಳೆ ಯುವಕರು ಹೊರಹೊಮ್ಮಬೇಕು. ಅವರ ಕೈಗಳನ್ನ ಬಲಪಡಿಸಿ ಮಾರ್ಗದರ್ಶನ ನೀಡಬೇಕು. ಅವರ ಜೊತೆಯಲ್ಲಿ ನಾವು ನಡೆಯಬೇಕು ಎಂದು ಕೃಷ್ಣ ಹೇಳಿದರು.
ಕಾವೇರಿ ಬಗ್ಗೆ ರಾಜ್ಯಗಳು ಚರ್ಚಿಸಿ ಸಂಕಷ್ಟ ಸೂತ್ರ ರಚಿಸಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಾಲ್ಕು ರಾಜ್ಯಗಳು ಚರ್ಚಿಸಿ ಸಂಕಷ್ಟ ಸೂತ್ರ ರೂಪಿಸಿಕೊಂಡು ವಿವಾದಕ್ಕೆ ತರೆ ಎಳೆಯಬೇಕು. ಸಂಕಷ್ಟ ಸೂತ್ರದ ಚೌಕಟ್ಟಿನಲ್ಲಿ ನದಿ ನೀರು ನಿರ್ವಹಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಲಹೆ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಳೆ ಅಭಾವ ಉಂಟಾಗಿ ಕಷ್ಟಕರ ಪರಿಸ್ಥಿತಿ ಎದುರಾದಾಗ ಕಾವೇರಿ ನದಿ ನೀರನ್ನು ಯಾವ ರೀತಿ ಪಡೆಯಬೇಕು ಎಂಬುದರ ಬಗ್ಗೆ ಸಂಕಷ್ಟ ಸೂತ್ರ ರೂಪಿಸಿಕೊಳ್ಳುವುದು ಅಗತ್ಯ. ಕಾವೇರಿ ನದಿಪಾತ್ರದ ನಾಲ್ಕೂ ರಾಜ್ಯಗಳು ಸಂಕಷ್ಟ ಸೂತ್ರದ ಬಗ್ಗೆ ಚರ್ಚಿಸಿ ಆನಂತರ ಸಂಕಷ್ಟ ಸೂತ್ರದ ಚೌಕಟ್ಟಿನಲ್ಲಿ ನದಿ ನೀರು ನಿರ್ವಹಣೆ ಬಗ್ಗೆ ಸೂಕ್ತ ತೀರ್ಮಾನವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕರ್ತರನ್ನು ಗೌರವದಿಂದ ಕಾಣುವ ಏಕೈಕ ಪಕ್ಷ ಬಿಜೆಪಿ: ಬಿ.ವೈ.ವಿಜಯೇಂದ್ರ
ತಾವು ಮುಖ್ಯಮಂತ್ರಿಯಾಗಿದ್ದ ವೇಳೆಯೂ ಕಾವೇರಿ ವಿಚಾರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಾಕಷ್ಟು ಸಭೆ ನಡೆಸಿ ಸಂಧಾನ ಮಾಡಲು ಯತ್ನ ಮಾಡಿದರೂ ಸಫಲವಾಗಲಿಲ್ಲ. ಅಂತಿಮವಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು. ಆಗ ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೆಂಕಟಾಚಲಯ್ಯ, ಜಸ್ಟೀಸ್ ರವೀಂದ್ರ ಅವರಿಂದ ಕಾನೂನು ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲಾಗುತ್ತಿತ್ತು. ಅದೇ ರೀತಿ ರಾಜ್ಯ ಸರ್ಕಾರ ಮುಂದುವರೆಯಬೇಕು ಎಂದು ಅವರು ಸಲಹೆ ನೀಡಿದರು.