ನಾವು ಎಲ್ಲಿಯೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡಿಲ್ಲ; ಮಾಡುವುದೂ ಇಲ್ಲ. ಕೊಟ್ಟ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ಕಾಂಗ್ರೆಸ್‌ ಸರ್ಕಾರ ಕೆಲಸ ಮಾಡಲಿ. ಅದು ಬಿಟ್ಟು ವಿನಾಕಾರಣ ಬಿಜೆಪಿ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. 

ಹುಬ್ಬಳ್ಳಿ (ನ.14): ನಾವು ಎಲ್ಲಿಯೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡಿಲ್ಲ; ಮಾಡುವುದೂ ಇಲ್ಲ. ಕೊಟ್ಟ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ಕಾಂಗ್ರೆಸ್‌ ಸರ್ಕಾರ ಕೆಲಸ ಮಾಡಲಿ. ಅದು ಬಿಟ್ಟು ವಿನಾಕಾರಣ ಬಿಜೆಪಿ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಕಾಂಗ್ರೆಸ್‌ಗೆ ರಾಜ್ಯದಲ್ಲಿ ಪೂರ್ಣ ಬಹುಮತದ ಅಧಿಕಾರ ಕೊಟ್ಟಿದ್ದಾರೆ. ಕೊಟ್ಟ ಅಧಿಕಾರವನ್ನು ಬಳಸಿಕೊಂಡು ಕೆಲಸ ಮಾಡಬೇಕು. ನಾವು ಎಲ್ಲಿಯೂ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡಿಲ್ಲ; ಮಾಡುವುದೂ ಇಲ್ಲ. ರಾಜ್ಯದಲ್ಲಿ ನಮ್ಮದೇ ಕೆಲ ತಪ್ಪುಗಳಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ ಎಂದರು.

ತಮ್ಮನ್ನು ಕಂಡರೆ ಮೋದಿಗೆ ಭಯ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ರಾಹುಲ್‌ ಕೂಡ ಇದೇ ತರಹ ಬಾಲಿಶ ಹೇಳಿಕೆ ನೀಡಿದ್ದರು. ಮೋದಿ ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ ಎಂದಿದ್ದರು. ಈಗ ಸಿದ್ದರಾಮಯ್ಯ ಸಹ ರಾಹುಲ್ ಗಾಂಧಿ ಲೇವಲ್‌ಗೆ ಇಳಿದು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸ್ಥಿತಿ‌ ದೇಶದಲ್ಲಿ ಏನಿದೆ ಮೊದಲು ಅದಕ್ಕೆ ಉತ್ತರ ನೀಡಲಿ ಎಂದು ಟೀಕಿಸಿದರು. ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕಾಂಗ್ರೆಸ್‌ ಸರ್ಕಾರ ಜನತೆಯ ಸುಲಿಗೆ ಮಾಡುತ್ತಿದೆ. ರೈತರಿಗೆ ವಿದ್ಯುತ್‌ ಬಿಲ್‌ ನೀಡುತ್ತಿದೆ. ಅಭಿವೃದ್ಧಿ ಕೆಲಸಗಳೆಲ್ಲ ಕುಂಠಿತವಾಗಿವೆ. ಅಭಿವೃದ್ಧಿ ಕೆಲಸಕ್ಕೆ ಅನುದಾನವನ್ನೇ ಕೊಡುತ್ತಿಲ್ಲ. 

ಬಿಜೆಪಿ ಟೀಕಿಸಲು ಪ್ರಿಯಾಂಕ್ ಖರ್ಗೆಗೆ ನೈತಿಕತೆ ಇಲ್ಲ: ಎಂ.ಪಿ.ರೇಣುಕಾಚಾರ್ಯ

ಕಾಂಗ್ರೆಸ್‌ ಶಾಸಕರೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನೀವಾದರೂ ಅನುದಾನ ಕೊಡಿ ಎಂದು ಎಷ್ಟೋ ಶಾಸಕರು ನಮ್ಮ ಕಡೆ ಬರುತ್ತಿದ್ದಾರೆ. ಅದಕ್ಕೆ ನಾನು ಅವರಿಗೆಲ್ಲ ರಾಜ್ಯ ಸರ್ಕಾರದ ಮೂಲಕವೇ ನಾವು ಕೇಂದ್ರ ಅನುದಾನ ಕೊಡುತ್ತೇವೆ ಎಂದು ಹೇಳಿದ್ದೇನೆ ಎಂದು ನುಡಿದರು. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಸಿದು ಹೋಗಿದೆ. ಜನರ ಹಿತ ಮರೆತು ಸಿಎಂ, ಡಿಸಿಎಂಗಳ ಮಧ್ಯೆ ಜಗಳ ಹಚ್ಚುವ ಕೆಲಸ ನಡೆಯುತ್ತಿದೆ. ಇದನ್ನು ಮುಖ್ಯಮಂತ್ರಿಗಳೇ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮುಖ್ಯಮಂತ್ರಿಗಳು ಮೂವರು ಡಿಸಿಎಂ ಮಾಡಬೇಕು ಎಂದ್ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅನಗತ್ಯವಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.