ಸರಸ್ವತಿ ಪುತ್ರನ ಬಾಯಲ್ಲಿ ಸುಳ್ಳು: ಮೊಯ್ಲಿ ವಿರುದ್ಧ ಎಚ್‌ಡಿಕೆ ಕಿಡಿ
ಮಣ್ಣಿನ ಮಕ್ಕಳಿಂದ ಕಾವೇರಿಗೆ ದ್ರೋಹ ಆಗಿದ್ದರೆ, ಏನು ಆಗಿದೆ ಎಂದು ಹೇಳಬೇಕಿತ್ತು. ಅದರ ಬದಲು ಬರೀ ಅಸತ್ಯವನ್ನೇ ಹೇಳಿ ಜನರ ಹಾದಿ ತಪ್ಪಿಸಿದ್ದಾರೆ ಎಂದು ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಸೆ.14): ಮಣ್ಣಿನ ಮಕ್ಕಳಿಂದ ಕಾವೇರಿಗೆ ದ್ರೋಹ ಆಗಿದ್ದರೆ, ಏನು ಆಗಿದೆ ಎಂದು ಹೇಳಬೇಕಿತ್ತು. ಅದರ ಬದಲು ಬರೀ ಅಸತ್ಯವನ್ನೇ ಹೇಳಿ ಜನರ ಹಾದಿ ತಪ್ಪಿಸಿದ್ದಾರೆ ಎಂದು ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇವರು ಕವಿ ಸರ್ವೋತ್ತೋಮರು, ಮಹಾಕವಿಗಳು. ರಾಷ್ಟ್ರಕವಿ ಕುವೆಂಪು ಅವರಿಗಿಂತ ಮಹಾನ್ ಕವಿಗಳು. ರಾಮಾಯಣವನ್ನು ಮಹಾನ್ವೇಷಣೆ ಮಾಡಿ ಮಹಾಕಾವ್ಯ ಬರೆದ ಮಹಾನುಭಾವರು. ಸರಸ್ವತಿ ಸಮ್ಮಾನ ಪುರಸ್ಕಾರ ಪಡೆದ ಸರಸ್ವತಿ ಪುತ್ರರು.
ಇಂತಹ ಸರಸ್ವತಿ ಪುತ್ರರ ಬಾಯಲ್ಲಿ ಸುಳ್ಳು ಬರಬಹುದೇ ಎಂದೂ ಅವರು ಲೇವಡಿ ಮಾಡಿದರು. ಮೊಯ್ಲಿ ತಪ್ಪು ಹಾಗೂ ಹಸಿ ಸುಳ್ಳುಗಳನ್ನು ಹೇಳಿದ್ದಾರೆ. ಇವರಿಂದ ನೀರಾವರಿಗೆ ನ್ಯಾಯ ಸಿಕ್ಕಿದ್ದು ಏನೂ ಇಲ್ಲ, ಆಗಿರುವುದೆಲ್ಲ ಅನ್ಯಾಯವೇ. ಈ ಹಿಂದೆ ಮುಖ್ಯ ಮಂತ್ರಿಯಾಗಿದ್ದ ಧರ್ಮಸಿಂಗ್, ಉಪ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನು ಕಾವೇರಿ ವಿಷಯದಲ್ಲಿ ದಾರಿ ತಪ್ಪಿಸಿದ್ದು ಇದೇ ವೀರಪ್ಪ ಮೊಯ್ಲಿ ಎಂದು ಟೀಕಿಸಿದರು. ಎರಡು ವರ್ಷ ಮುಖ್ಯಮಂತ್ರಿಯಾಗಿದ್ದು, ಅಧಿಕಾರ ಕಳೆದುಕೊಂಡು ಮನೆಗೆ ಹೋಗುವಾಗ ರಾಜ್ಯ ಬೊಕ್ಕಸವನ್ನು ದಿವಾಳಿ ಮಾಡಿದ್ದರು.
ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಸರ್ಕಾರಿ ನೌಕರರಿಗೆ ವೇತನ ನೀಡಲು ಹಣ ಇರಲಿಲ್ಲ. ಆಗ ಪಶ್ಚಿಮ ಬಂಗಾಳದ ಪಿಯರ್‌ಲೆಸ್ ಸಂಸ್ಥೆಗೆ ರಾಜ್ಯವನ್ನು ಒತ್ತೆ ಇಟ್ಟು ಸಾಲ ತಂದವರು ಇವರು. ಇಂತಹವರು ಮಣ್ಣಿನಮಕ್ಕಳಿಂದ ನೀರಾವರಿಗೆ ಅನ್ಯಾಯ ಆಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದ ನೀರಾವರಿ ಅನ್ಯಾಯದ ಅಧ್ಯಾಯಗಳನ್ನು ಒಮ್ಮೆ ತಿರುವಿ ಹಾಕಿದರೆ, ಇವರು ಎಸಗಿದ ಅನ್ಯಾಯಗಳೇನು ಎನ್ನುವುದು ಗೊತ್ತಾಗುತ್ತದೆ. ಯಾವ ಯಾವ ಸಂದರ್ಭದಲ್ಲಿ ಆ ಮಹಾನುಭಾವರಿಂದ ಏನೇನಾಯ್ತು ಎನ್ನುವುದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.