ಹೆಸರಿನಲ್ಲಿ ರಾಮ ಇದ್ದರೆ ಸಾಲದು, ಆತನ ಸಂಸ್ಕೃತಿ, ಗುಣವೂ ಮುಖ್ಯ: ಎಚ್.ಡಿ.ಕುಮಾರಸ್ವಾಮಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮ ಇದ್ದರೆ ಸಾಲದು. ರಾಮನಲ್ಲಿರುವ ಸಂಸ್ಕೃತಿ, ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯ (ಜ.31): ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮ ಇದ್ದರೆ ಸಾಲದು. ರಾಮನಲ್ಲಿರುವ ಸಂಸ್ಕೃತಿ, ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹನುಮಧ್ವಜ ತೆರವು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೆರಗೋಡಿನಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಬಾಯ್ಮಾತಿನಲ್ಲಿ ನಾನು ರಾಮಭಕ್ತ, ನನಗೂ ಭಕ್ತಿ ಇದೆ ಎಂದರೆ ಯಾರೂ ನಂಬುವುದಿಲ್ಲ.
ಇಂಥ ಸೂಕ್ಷ್ಮ ಪ್ರಕರಣಗಳಲ್ಲಿ ನಿಜವಾದ ರಾಮಭಕ್ತಿ ಪ್ರದರ್ಶಿಸಬೇಕು. ರಾಮಭಕ್ತರಿಗೆ, ಜನರ ಭಾವನೆಗಳಿಗೆ ನೋವುಂಟು ಮಾಡಿ ನಾನು ರಾಮಭಕ್ತ, ನನ್ನ ಹೆಸರಿನಲ್ಲೇ ರಾಮ ಇದೆ ಎಂದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು. ಕೆರಗೋಡಿನ ಜನರ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ. ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸಿದೆ. ಶಾಂತಿ-ಸೌಹಾರ್ದತೆ ನೆಲೆಸಿದ್ದ ಸ್ಥಳದಲ್ಲಿ ಅಶಾಂತಿಯನ್ನುಂಟುಮಾಡಿದೆ. ಸರ್ಕಾರದ ಉದ್ಧಟತನ, ಪೊಲೀಸರ ದೌರ್ಜನ್ಯದಿಂದ ಜನ ನೊಂದಿದ್ದಾರೆ.
ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ರಾಜ್ಯದ ಹಲವೆಡೆ ಮನೆ, ಕಚೇರಿಗಳ ಮೇಲೆ ದಾಳಿ!
ಅಮಾಯಕರ ಮೇಲೆ ಲಾಠಿ ಪ್ರಹಾರ ಸರ್ಕಾರದ ರಾಕ್ಷಸೀ ಸಂಸ್ಕೃತಿಯಾಗಿದೆ ಎಂದರು. ರಾಷ್ಟ್ರಧ್ವಜ, ನಾಡಧ್ವಜದ ಬಗ್ಗೆ ಕಾಂಗ್ರೆಸ್‌ನವರಿಗಿಂತಲೂ ಹೆಚ್ಚಿನ ಗೌರವ-ಮರ್ಯಾದೆ ನಮಗೂ ಇದೆ. ಅದೇ ರೀತಿ ಹನುಮ ಧ್ವಜದ ಬಗ್ಗೆಯೂ ಕಾಳಜಿ ಇದೆ. ಈ ಹೋರಾಟ ರಾಜಕೀಯಕ್ಕಾಗಿಯೂ ಅಲ್ಲ, ಸ್ವಾರ್ಥಕ್ಕಾಗಿ ನಡೆಯುತ್ತಿಲ್ಲ. ಇದು ಜನರ ಭಾವನೆಗಳ ಪರ ಹೋರಾಟ. ಹನುಮ ಧ್ವಜ ಮರುಸ್ಥಾಪನೆಯಾಗುವವರೆಗೂ ಇದು ಮುಂದುವರೆಯಬೇಕು ಎಂದು ಒತ್ತಾಯಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ‘ಕೇಸರಿಮಯ’: ಬಿಜೆಪಿ-ಜೆಡಿಎಸ್ ಮೈತ್ರಿ ನಂತರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತೆ ಕೇಸರಿ ಶಾಲು ಧರಿಸಿ ಕಮಲ ಪಡೆಯೊಳಗೆ ಕಾಣಿಸಿಕೊಂಡರು. ಸ್ಥಳೀಯ ಜೆಡಿಎಸ್ ನಾಯಕರ ಹೆಗಲ ಮೇಲೂ ಕೇಸರಿ ಶಾಲು ಕಂಡುಬಂದಿದ್ದು ವಿಶೇಷವಾಗಿತ್ತು. ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿರೋಧಿಸಿ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಬೆಂಬಲ ಸೂಚಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ನಗರಕ್ಕೆ ಆಗಮಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿ ಪುಟ್ಟ ವೇದಿಕೆಯನ್ನು ನಿರ್ಮಿಸಿದ್ದು, ಮಾಜಿ ಸಚಿವರಾದ ಸಿ.ಟಿ.ರವಿ, ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಪ್ರೀತಂಗೌಡ ಇದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ಕುಮಾರಸ್ವಾಮಿ ಅವರಿಗಾಗಿ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದ್ದರು. ಎಚ್‌ಡಿಕೆ ಬಂದ ಕೂಡಲೇ ಅವರನ್ನು ಬಿಜೆಪಿಯವರಿದ್ದ ವೇದಿಕೆಗೆ ಹೋಗಲು ಬಿಡದೆ ವಾಹನವನ್ನೇರಿಸಿದರು. ಅವರೊಂದಿಗೆ ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸೇರಿದಂತೆ ಇತರರು ವಾಹನವನ್ನೇರಿದರು. ಕುಮಾರಸ್ವಾಮಿಯವರನ್ನು ಕಂಡು ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಮಾತನಾಡುತ್ತಿದ್ದರೂ ಶಿಳ್ಳೆ ಹಾಕುತ್ತಿದ್ದರು. ಈ ನಡುವೆಯೂ ಪ್ರೀತಂಗೌಡ ಮಾತು ಮುಂದುವರೆಸಿದರು. ನಂತರ ಪ್ರೀತಂಗೌಡ ಸಿ.ಟಿ.ರವಿಗೆ ಮಾತನಾಡಲು ಹೇಳಿ ಮೈಕ್‌ನ್ನು ಕೈಗಿಟ್ಟರು.
ಕಾಂಗ್ರೆಸ್‌ಗೆ ಹನುಮ, ರಾಮನ ಶಾಪ ತಟ್ಟಲಿದೆ: ಸಂಸದ ನಳಿನ್ ಕುಮಾರ್ ಕಟೀಲು
ಕುಮಾರಸ್ವಾಮಿಯವರಿದ್ದ ವಾಹನದಲ್ಲಿ ಮೈಕ್ ಹಾಗೂ ಧ್ವನಿವರ್ಧಕವಿಲ್ಲದ ಕಾರಣ ಅವರು ಎಲ್ಲರತ್ತ ಕೈಬಿಸುತ್ತಿದ್ದರು. ಸಿ.ಟಿ.ರವಿ ಮಾತು ಆರಂಭಿಸಿದ ಕೆಲಸಮಯದಲ್ಲೇ ಕುಮಾರಸ್ವಾಮಿಯವರನ್ನು ವೇದಿಕೆಗೆ ಬರುವಂತೆ ಆಹ್ವಾನಿಸಿದರು. ಅದರಂತೆ ವಾಹನದಿಂದ ಕೆಳಗಿಳಿದುಬಂದ ಕುಮಾರಸ್ವಾಮಿ ಬಿಜೆಪಿಯವರು ಇದ್ದ ವೇದಿಕೆಗೆ ತೆರಳಿದರು. ಸ್ಥಳೀಯ ಜೆಡಿಎಸ್ ನಾಯಕರೂ ಅವರನ್ನು ಹಿಂಬಾಲಿಸಿದರು.