Asianet Suvarna News Asianet Suvarna News

ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌: ರಾಜ್ಯದ ಹಲವೆಡೆ ಮನೆ, ಕಚೇರಿಗಳ ಮೇಲೆ ದಾಳಿ!

ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಡಿ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ ಮೇಲೆ ಬುಧವಾರ ದಾಳಿ ನಡೆಸಿದೆ. 

lokayukta raid in govt officials residence and offices in Some districts of Karnataka gvd
Author
First Published Jan 31, 2024, 8:35 AM IST

ಬೆಂಗಳೂರು (ಜ.31): ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಡಿ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ ಮೇಲೆ ಬುಧವಾರ ದಾಳಿ ನಡೆಸಿದೆ. ಹಾಸನದಲ್ಲಿ ಆಹಾರ ನೀರಿಕ್ಷಕರ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಹೆಲ್ತ್ ಇನ್‌ಸ್ಪೆಕ್ಟರ್‌ ಜಗನ್ನಾಥ್ ನಿವಾಸದ ಮೇಲೆ ಲೋಕಾಯುಕ್ತ ಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ತಿರುಮಲೇಶ್, ಇನ್‌ಸ್ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿದೆ. ಜಗನ್ನಾಥ್ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ ಹಾಗೂ ಕಚೇರಿ ಮೇಲೂ ದಾಳಿ ಪರಿಶೀಲನೆ ನಡೆಸಲಾಗುತ್ತಿದೆ.

ಬಳ್ಳಾರಿಯ ಕೃಷ್ಣದೇವರಾಯ ವಿವಿ ವ್ಯಾಪ್ತಿಯಲ್ಲಿ ಬರುವ  ನಂದಿಹಳ್ಳಿ ಪಿಜಿ ಸೆಂಟರ್, ಸಂಡೂರಿನ ನಂದಿಹಳ್ಳಿ ಪಿಜಿ ಸೆಂಟರ್ ನಿರ್ದೇಶಕ ಡಾ. ರವಿ ಮನೆ ಮತ್ತು ಕಚೇರಿ ಮೇಲೆ ಮೇಲೆ ಲೋಕಯುಕ್ತ ಎಸ್ಪಿ ಸಿದ್ದರಾಜು ಲೋಕಾಯುಕ್ತ ದಾಳಿ ನಡೆಎಸಲಾಗಿದೆ. ಮೈಸೂರಿನಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ಮುಡಾ ಎಇಇ ಯಜ್ಞೇಂದ್ರ ವಿರುದ್ಧ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಾಕಷ್ಟು ಭ್ರಷ್ಟಾಚಾರದ ದೂರುಗಳು ಬಂದ ಹಿನ್ನಲೆಯಲ್ಲಿ ಜೆಪಿ ನಗರದ ಮನೆ ಹಾಗೂ  ವಿಜಯ ನಗರದ ಫ್ಲಾಟ್  ಹಾಗೂ ಕೆಆರ್‌.ನಗರದ ಅಣ್ಣನ ಮನೆಯಲ್ಲಿ ಶೋಧ ನಡೆಸಲಾಗಿದೆ, ಬೆಳ್ಳಂಬೆಳಗ್ಗೆ ಯಜ್ಞೇಂದ್ರ ಮನೆ ಮೇಲೆ ಮೈಸೂರು ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿದೆ.

ನಾನು ಕಾಂಗ್ರೆಸ್ಸಿಗೆ ಹೋಗಲ್ಲ, ಬಿಜೆಪಿಯಲ್ಲೇ ಇರುವೆ: ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ  ತಾಲೂಕಿನ ವಾಣಿಜ್ಯ ತೆರಿಗೆ ಅಧಿಕಾರಿ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಕಡೂರಿನಲ್ಲಿ ವಾಸವಾಗಿರುವ ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಆರ್. ನೇತ್ರಾವತಿ ಕಳೆದ 13 ವರ್ಷಗಳ ಅವಧಿಯಲ್ಲಿ ಆದಾಯಕ್ಕಿಂತ ಅಧಿಕ ಅಕ್ರಮ ಆಸ್ತಿಯನ್ನು  ಹೊಂದಿರುವ ಆರೋಪದ ಮೇಲೆ ಇಂದು ಬೆಳಿಗ್ಗೆ ಲೋಕಾಯುಕ್ತ ಕಾರ್ಯಾಚರಣೆ ನಡೆಸಿದೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಇನ್ಸ್ಪೆಕ್ಟರ್ ವೇದಾವತಿ, ಅನಿಲ್ ನಾಯಕ್ ,ಲೋಕೇಶ್, ಸವಿನಯ್, ಸಲ್ಮಾ ಪಾಲ್ಗೊಂಡಿದ್ದರು.

ಇತ್ತ ಮಂಡ್ಯದಲ್ಲಿ PWD ಇಲಾಖೆ EE ಹರ್ಷ ಎಂಬವರ ಮನೆ, ಕಚೇರಿ, ಕುಟುಂಬಸ್ಥರು, ಸಂಬಂಧಿಕರ ಮನೆ ಮೇಲೂ ಲೋಕ ದಾಳಿ ಮಾಡಿದೆ. ಇವರ ಮನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿದೆ. ಮಂಡ್ಯದ ಕಚೇರಿ, ಮಾವನ ಮನೆ, ನಾಗಮಂಗಲದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಲಾಗಿದೆ. ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ಆರು ಕಡೆ ದಾಳಿ ಮಾಡಿದ್ದಾರೆ. ಮಂಗಳೂರಿನಲ್ಲೂ‌ ಮೆಸ್ಕಾಂ ಇಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು,  ಮಂಗಳೂರಿನ ಅತ್ತಾವರ ವಿಭಾಗದ ಮೆಸ್ಕಾಂ ಇಇ ಶಾಂತಕುಮಾರ್ ಮನೆ, ಕಚೇರಿಯಲ್ಲಿ ಲೋಕಾ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ. 

ಬೆಂಗಳೂರಿನ ಶಾಂತಕುಮಾರ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.ಕಳೆದ ಐದಾರು ವರ್ಷಗಳಿಂದ ಮಂಗಳೂರಿನಲ್ಲಿ ಶಾಂತಕುಮಾರ್ ಕಾರ್ಯನಿರ್ವಹಿಸ್ತಿದ್ದಾರೆ. ಆದಾಯ ಮೀರಿ ಅಸ್ತಿ ಗಳಿಕೆ ಆರೋಪದಡಿ ದಾಳಿ ನಡೆಸಲಾಗಿದೆ.  ವಿಜಯನಗರದಲ್ಲಿ ಜೆಸ್ಕಾಂ ಇಲಾಖೆಯ AEE ಭಾಸ್ಕರ್ ಮನೆ ಮೇಲೆ ದಾಳಿ ಮಾಡಲಾಗಿದ್ದು, ಹೊಸಪೇಟೆ, ಕೊಪ್ಪಳದ ಗಿಣಗೇರಾ ದಲ್ಲಿರೋ ಭಾಸ್ಕರ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹೊಸಪೇಟೆ ಲೋಕಾಯುಕ್ತ ಪಿಐ ರಾಜೇಶ್ ಲಮಾಣಿ, ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಹಗರಿಬೊಮ್ಮನ ಹಳ್ಳಿಯಲ್ಲಿ AEEಯಾಗಿ ಭಾಸ್ಕರ್ ಕೆಲಸ ನಿರ್ವಹಣೆ ಮಾಡುತ್ತಿದ್ದರು. 

ಬಿಜೆಪಿಗರಿಗೆ ಹನುಮ, ರಾಮ ಬೇಕಿಲ್ಲ, ಮತ ಬೇಕಿದೆ: ಸಚಿವ ಆರ್.ಬಿ.ತಿಮ್ಮಾಪುರ

ಹೊಸಪೇಟೆಯ ಜಂಬುನಾಥ ರಸ್ತೆಯಲ್ಲಿರೋ ಜಂಬುಕೇಶ್ವರ ಬಡಾವಣೆಗ ಒಂದು ಮನೆ, ಆಕಾಶವಾಣಿ ಪ್ರದೇಶದಲ್ಲಿರೋ  ಎರಡು ಮನೆ ಮತ್ತು ಕೊಪ್ಪಳದ ಗಿಣಗೇರಾದಲ್ಲಿರೋ ಒಂದು ಮನೆಯ ಮೇಲೆ  ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದ್ಯ ಭಾಸ್ಕರ್ ಮನೆ ಮತ್ತು ಹಗರಿಬೊಮ್ಮನ ಹಳ್ಳಿಯ ಜೆಸ್ಕಾಂ ಕಚೇರಿಯ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಇನ್ನು ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಎಕ್ಸಿಕ್ಯುಟಿವ್ ಇಂಜಿನಿಯರ್ ಹನುಮಂತರಾಯಪ್ಪ ಮನೆ ಮೇಲೆ ದಾಳಿ ಮಾಡಲಾಗಿದೆ. ಶಿರಾಗೇಟ್ ಬಳಿಯ 80 ಫೀಟ್ ರಸ್ತೆಯಲ್ಲಿರುವ ಕೆಆರ್ ಡಿಐಎಲ್ ನಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿರುವ ಹನುಮಂತರಾಯಪ್ಪ ಮನೆ, ಕೊರಟಗೆರೆಯ ಕಚೇರಿ, ಮಿಡಿಗೇಶಿಯ ಫಾರಂ ಹೌಸ್ ಮೇಲೆ ದಾಳಿ ನಡೆಸಲಾಗಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.

Follow Us:
Download App:
  • android
  • ios