Asianet Suvarna News Asianet Suvarna News

ಕಾಂಗ್ರೆಸ್ ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ಪಕ್ಷವು ರಾಜ್ಯವನ್ನು ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಯಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದೊಳಗೆ 28ಕ್ಕೆ 28 ಸೀಟುಗಳನ್ನು ಮೈತ್ರಿ ಪಕ್ಷ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

Ex CM HD Kumaraswamy Reaction On JDS BJP Alliance gvd
Author
First Published Sep 14, 2023, 1:30 AM IST

ಹಾಸನ (ಸೆ.14): ಕಾಂಗ್ರೆಸ್ ಪಕ್ಷವು ರಾಜ್ಯವನ್ನು ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಯಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದೊಳಗೆ 28ಕ್ಕೆ 28 ಸೀಟುಗಳನ್ನು ಮೈತ್ರಿ ಪಕ್ಷ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ. ಸದ್ಯದಲ್ಲೇ ದೆಹಲಿಗೆ ಹೋಗಿ ಸಭೆಯಲ್ಲಿ ಭಾಗವಹಿಸುತ್ತೇವೆ ಎಂದರು. ಇನ್ನು, ಸಿದ್ದರಾಮಯ್ಯ 2004ರಲ್ಲಿ ನಾನು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಯಾವ್ಯಾವ ಬಿಜೆಪಿ ನಾಯಕನ ಸಂಪರ್ಕ ಮಾಡಿದ್ದಾರೆ ಎನ್ನುವುದೂ ಗೊತ್ತಿದೆ. 

ಸಿದ್ದರಾಮಯ್ಯ, ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಸೇರಿ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸಚಿವರಾಗಲು ಹೋಗಿದ್ದವರು, ಈಗ ಕೋಮುವಾದ, ಸಿದ್ಧಾಂತ ಎಂದು ಮಾತನಾಡುವಿದೇ ಅಲ್ಲದೆ, ಇವರೆಲ್ಲ ದೇವೇಗೌಡರ ಜಾತ್ಯಾತೀತತೆಯ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ನಮ್ಮ ಹೋರಾಟ ಒಂದು ಭಾಗ ಕಾಂಗ್ರೆಸ್ ವಿರುದ್ಧವೇ. ಸದ್ಯ ಜೆಡಿಎಸ್‌-ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮೈತ್ರಿ ಬಗ್ಗೆ ಖುಷಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್‌ ವಿರುದ್ಧ ರೇವಣ್ಣ ವಾಗ್ದಾಳಿ

ದೇವೇಗೌಡ, ಎಚ್‌ಡಿಕೆ ಅಧಿಕೃತ ಹೇಳಿಕೆ ಬಿಜೆಪಿ ಜತೆ ಮೈತ್ರಿ: ರಾಜ್ಯದ ಕಾಂಗ್ರೆಸ್‌ ಸರ್ಕಾರ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇದೀಗ ರಿಯಲ್‌ ಎಸ್ಟೇಟ್‌ ಬಿಲ್ಡರ್‌ಗಳಿಂದ ಎರಡು ಸಾವಿರ ಕೋಟಿ ರು. ಸುಲಿಗೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆ ನೆಪವಾಗಿಟ್ಟುಕೊಂಡು ಕೆಲವು ಪ್ರಭಾವಿಗಳು ದೊಡ್ಡ ಬಿಲ್ಡರ್‌ಗಳ ಸಭೆ ನಡೆಸಿದ್ದಾರೆ. ಈ ವೇಳೆ ಇಷ್ಟಿಷ್ಟುಕಪ್ಪ ಒಪ್ಪಿಸಲೇಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಬಿಲ್ಡರ್‌ಗಳಿಂದ ಪ್ರತಿ ಚದರ ಅಡಿಗೆ 100 ರು. ಲೆಕ್ಕದಲ್ಲಿ ವಸೂಲಿ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಎರಡು ಸಾವಿರ ಕೋಟಿ ರು. ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಆಪಾದಿಸಿದರು.

ಜನರ ಹಿತಕ್ಕಾಗಿ ಬಿಜೆಪಿ ಜತೆ ಮೈತ್ರಿ: ಕುಮಾರಸ್ವಾಮಿ ಮಾತನಾಡಿ, ಕೇವಲ ಮೂರೇ ತಿಂಗಳ ಆಡಳಿತಾವಧಿಯಲ್ಲಿ ದುರಾಡಳಿತದ ಪರಾಕಾಷ್ಠೆ ಮುಟ್ಟಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿದೆ. ಪ್ರತಿಪಕ್ಷಗಳಾಗಿ ನಾವು ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜನರ ಹಿತಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಕುಮಾರಸ್ವಾಮಿ ಪ್ರಕಟಿಸಿದರು. ಜೆಡಿಎಸ್‌-ಬಿಜೆಪಿ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಯಾವುದೇ ಸ್ವಾರ್ಥ ಇಲ್ಲ. 2006ರ ಅಧ್ಯಾಯ ಮತ್ತೆ ಪುನರಾವರ್ತನೆ ಮಾಡಲು ತೀರ್ಮಾನಿಸಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲವನ್ನೂ ತೀರ್ಮಾನ ಮಾಡುತ್ತೇನೆ. ಜನರ, ನಾಡಿನ ರಕ್ಷಣೆ ಉದ್ದೇಶದಿಂದ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.

ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಟಿಂಗ್‌ ಶಾಪ್‌ ಮಾಲೀಕ

ಸೀಟು ಹಂಚಿಕೆ ಎಚ್‌ಡಿಕೆ ಹೊಣೆ: ದೇವೇಗೌಡ ಮಾತನಾಡಿ, ಕೆಲವು ದಿನಗಳ ಹಿಂದೆ ನಾನು ದೆಹಲಿಗೆ ಹೋಗಿದ್ದು ನಿಜ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದೆ. ಬಿಜೆಪಿ-ಜೆಡಿಎಸ್‌ ಮೈತ್ರಿ ವಿಚಾರ ಸಂಬಂಧ ಚರ್ಚೆಯಾಗಿದೆ. ಈ ವಿಚಾರವಾಗಿ ಕುಮಾರಸ್ವಾಮಿ ಅವರು ಅಂತಿಮವಾಗಿ ಎಷ್ಟುಸೀಟು ಹಂಚಿಕೆ ಮಾಡಿಕೊಳ್ಳಬೇಕಿದೆ ಎಂಬುದನ್ನು ಬಿಜೆಪಿ ನಾಯಕರ ಜತೆ ಕುಳಿತು ಚರ್ಚೆ ನಡೆಸಿ ತೀರ್ಮಾನಿಸಲಿದ್ದಾರೆ ಎಂದರು. ಕುಮಾರಸ್ವಾಮಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಪ್ರೀತಿ-ವಿಶ್ವಾಸ ಇದೆ. 2018ರಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊಸದಾಗಿ ಪ್ರಮಾಣ ಸ್ವೀಕಾರ ಮಾಡಿ ಎಂದಿದ್ದರು. ಬಿಹಾರದ ನಿತೀಶ್‌ ಕುಮಾರ್‌ ಅವರಂತೆ ನಿಮ್ಮನ್ನೂ ದೀರ್ಘಾವಧಿ ಮುಖ್ಯಮಂತ್ರಿಯನ್ನಾಗಿ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದರು. ಆದರೆ, ನನ್ನನ್ನು ನೋಡಿಕೊಂಡು ಕುಮಾರಸ್ವಾಮಿ ಅವರು ಮೋದಿ ಅವರ ಆಹ್ವಾನವನ್ನು ನಯವಾಗಿಯೇ ತಿರಸ್ಕರಿದ್ದರು ಎಂದು ಸ್ಮರಿಸಿದರು.

Follow Us:
Download App:
  • android
  • ios