ಶ್ರೀರಾಮನ ಅವಹೇಳನ: ಸಿದ್ದು, ರಾಜಣ್ಣ ಕ್ಷಮೆಗೆ ಮಾಜಿ ಸಿಎಂ ಸದಾನಂದಗೌಡ ಆಗ್ರಹ
ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿದ ಸಹಕಾರ ಸಚಿವ ರಾಜಣ್ಣ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಅಥವಾ ರಾಜಣ್ಣ ಮೂಲಕ ಕ್ಷಮೆ ಕೇಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಆಗ್ರಹಿಸಿದ್ದಾರೆ.
ಬೆಂಗಳೂರು (ಜ.19): ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿದ ಸಹಕಾರ ಸಚಿವ ರಾಜಣ್ಣ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಅಥವಾ ರಾಜಣ್ಣ ಮೂಲಕ ಕ್ಷಮೆ ಕೇಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜಣ್ಣಗೆ ಈಗಲೂ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ ಎಂದು ಎಚ್ಚರಿಸಿದರು.
ನಾನು ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದವನು. ಅಲ್ಲಿ ಕುಳಿತವರು ತಮ್ಮ ಬುದ್ಧಿಯನ್ನು ರಾಜ್ಯದ ಹಿತಾಸಕ್ತಿಗೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಒಂದೂವರೆ ತಿಂಗಳಿನಿಂದ ಕಾಂಗ್ರೆಸ್ಸಿಗರ ಹೇಳಿಕೆ ಗಮನಿಸಿದರೆ ಹುಚ್ಚುಚ್ಚು ಮಾತುಗಳು ಕಂಡುಬರುತ್ತವೆ. ಹರಿಪ್ರಸಾದ್ ಅವರ ಗೋಧ್ರಾ ಹೇಳಿಕೆ, ರಾಜಣ್ಣ ಅವರ ಹೇಳಿಕೆ ಗಮನಿಸಿದ ಜನತೆ ಇನ್ನು ಸುಮ್ಮನೆ ಇರಲಾರರು ಎಂದು ಕಿವಿಮಾತು ಹೇಳಿದರು.
ಕೆಲ ಸ್ವಾಮೀಜಿಗಳಿಂದ ರಾಜಕೀಯಕ್ಕಾಗಿ ಶ್ರೀ ರಾಮಮಂದಿರ ಬಗ್ಗೆ ಅಪಸ್ವರ: ಸಂಸದ ಪ್ರತಾಪ್ ಸಿಂಹ
ರಾಮ ಇಲ್ಲ ಎಂದು ಅಫಿಡವಿಟ್ ಹಾಕಿದ ಈ ಅಯೋಗ್ಯರು ಇಂಥ ಹೇಳಿಕೆ ಕೊಡುವುದು ಅಚ್ಚರಿಯ ವಿಚಾರವಲ್ಲ. ಶ್ರೀರಾಮನ ಬಗ್ಗೆ ಹೀಗೆ ಮಾತನಾಡಿದರೆ ಅದರಿಂದ ಜನರು ಎದ್ದುಬಿಡುವ ಆತಂಕ ಉಂಟಾಗಿದೆ. ಶ್ರೀರಾಮನ ಸಂಬಂಧದ ವಾಲ್ ಪೋಸ್ಟರ್, ಬ್ಯಾನರ್‌ಗಳನ್ನು ಏಜೆಂಟರ ಮೂಲಕ ಹರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಪೋಸ್ಟರ್‌ಗಳು ಹರಿದು ಹೋಗಲಿವೆ ಎಂದು ಹರಿಹಾಯ್ದರು.
ಅಭ್ಯರ್ಥಿ ಯಾರಾದ್ರೂ ಮೋದಿಗಾಗಿ ಗೆಲ್ಲಿಸಿ: ಲೋಕಸಭಾ ಚುನಾವಣೆ ಸಿದ್ಧತೆ ಕುರಿತಂತೆ ಎರಡು ದಿನಗಳ ಕಾಲ ನಡೆದ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಬಿಜೆಪಿ ಮುಖಂಡರ ಸಭೆ ಮುಕ್ತಾಯಗೊಂಡಿದ್ದು, ಪಕ್ಷದಿಂದ ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿಸುವ ಸಲುವಾಗಿ ಗೆಲ್ಲಿಸಬೇಕು ಎಂಬ ಸೂಚನೆ ನೀಡಲಾಗಿದೆ.
ನಗರದ ಯಲಹಂಕ ಬಳಿಯಿರುವ ರೆಸಾರ್ಟ್‌ವೊಂದರಲ್ಲಿ ನಡೆದ 28 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ಏಳು ಕ್ಲಸ್ಟರ್‌ಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವ ಸಿ.ಟಿ.ರವಿ ಮತ್ತಿತರರು ಪಕ್ಷ ಗೆಲ್ಲುವ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಬಿಜೆಪಿಯಲ್ಲಿ ಭುಗಿಲೆದ್ದ ‘ನಿವೃತ್ತಿ’ ವಿವಾದ: ಯಡಿಯೂರಪ್ಪ Vs ಸದಾನಂದಗೌಡ
ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿನ ಪಕ್ಷದ ಸಂಘಟನೆಯ ಪರಿಸ್ಥಿತಿಯನ್ನು ವಿವರಿಸಿ ಚುನಾವಣೆ ಗೆಲ್ಲುವ ಬಗ್ಗೆ ಹಲವು ಸಲಹೆಗಳನ್ನು ನೀಡಿದರು. ಅಲ್ಲದೆ, ಮೋದಿ ನಾಯಕತ್ವದ ಅಗತ್ಯತೆ ಮತ್ತು ಕೇಂದ್ರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಕುರಿತು ಹೆಚ್ಚು ಪ್ರಚಾರ ಮಾಡಬೇಕಾಗಿದೆ. ಅಲ್ಲದೆ, ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ಮನವಿ ಮಾಡಿದರು ಎನ್ನಲಾಗಿದೆ.