ದೆಹಲಿಗೆ ಹೋಗಿ ನನ್ನ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದೂ ಕೇಳಿರಲಿಲ್ಲ: ಬಿಎಸ್‌ವೈ
ಶಾಸಕ ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ದೆಹಲಿಗೆ ಹೋಗಿ ನನ್ನ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದೂ ಕೇಳಿರಲಿಲ್ಲ ಎಂದು ಕುಟುಂಬ ರಾಜಕಾರಣದ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ನ.12): ಶಾಸಕ ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ದೆಹಲಿಗೆ ಹೋಗಿ ನನ್ನ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದೂ ಕೇಳಿರಲಿಲ್ಲ ಎಂದು ಕುಟುಂಬ ರಾಜಕಾರಣದ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಶನಿವಾರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೊಡ್ಡ ಸ್ಥಾನ ಲಭಿಸಿದಾಗ ಸವಾಲುಗಳು ಸಹಜ.
ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಗುರಿ ಮುಟ್ಟಲು ಕಷ್ಟವಿಲ್ಲ. ಆದರೆ, ಹಾದಿ ಕಠಿಣ ಇದೆ. ನಾನೂ ಸಹ ರಾಜ್ಯ ಪ್ರವಾಸ ಮಾಡಿ ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮಿಸುತ್ತೇನೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೂಕ್ತ ಸಮಯಕ್ಕೆ ಒಳ್ಳೆಯ ತೀರ್ಮಾನ ಮಾಡಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ. ಈ ಬಾರಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು.
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ವಿಜಯೇಂದ್ರ ಜೊತೆ ಪ್ರವಾಸ: ನಳಿನ್ ಕಟೀಲ್
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು ಎಂದರು. ದೆಹಲಿಯಲ್ಲಿ ಕುಳಿತು ವಿಜಯೇಂದ್ರನನ್ನು ಅಧ್ಯಕ್ಷನನ್ನಾಗಿ ಮಾಡಿ ಎಂದು ಯಾರನ್ನೂ ಕೇಳಿಲ್ಲ, ಬೇಕಾದರೆ ವಿಚಾರಿಸಿಕೊಳ್ಳಿ. ನಾವು ಪ್ರವಾಸ ಮಾಡಿದ ಬಳಿಕ ಜನತೆಯ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಗಮನಿಸಿದ ಬಳಿಕ ನಮ್ಮ ಬಲ ಗೊತ್ತಾಗಲಿದೆ. 25 ಕ್ಷೇತ್ರ ಗೆಲ್ಲುವುದು ಸುಲಭವಲ್ಲ. ರಾಜ್ಯಾದ್ಯಂತ ಓಡಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಎಲ್ಲರೂ ಒಟ್ಟಾಗಿ ಹೋದರೆ ಮಾತ್ರ ಯಶಸ್ಸು ಖಚಿತ ಎಂದು ಅಭಿಪ್ರಾಯಪಟ್ಟರು.
ಸವಾಲು ಎದುರಿಸುವ ಸಾಮರ್ಥ್ಯ ಹೊಂದಿದ ವಿಜಯೇಂದ್ರ: ವಯಸ್ಸು ಚಿಕ್ಕದಾದರೂ ಸಂಘಟನೆ ದೃಷ್ಠಿಯಿಂದ ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತೋಷದ ವಿಚಾರ. ರಾಜಕಾರಣವೇ ಪರೀಕ್ಷೆ, ಏನೇ ಸವಾಲು ಇದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಬಲಪಡಿಸಬೇಕಿದೆ. ಇದನ್ನು ವಿಜಯೇಂದ್ರ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಂಘಟನೆ ಪಕ್ಷದ ಹಿರಿಯ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟವಾಗಲಿದೆ: ಸಚಿವ ಈಶ್ವರ ಖಂಡ್ರೆ
ಯಡಿಯೂರಪ್ಪ ಗರಡಿಯಲ್ಲಿ ವಿಜಯೇಂದ್ರ ಬೆಳೆದಿದ್ದಾರೆ. ಏನೇ ಸವಾಲುಗಳಿದ್ದರೂ ಅದನ್ನೂ ಎದುರಿಸುವ ಸಾಮರ್ಥ್ಯ ವಿಜಯೇಂದ್ರನಿಗೆ ಇದೆ. ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಅನಂತ್‌ಕುಮಾರ್ ಹೆಗ್ಡೆರಂತ ನಾಯಕರು ಪಕ್ಷದ ಸಂಘಟನೆಯನ್ನು ಬಲಪಡಿಸಿದ್ದಾರೆ. ಅವರ ಹಾದಿಯಲ್ಲೇ ವಿಜಯೇಂದ್ರ ನಡೆಯುತ್ತಾರೆ. ಹಿರಿಯರ ಜೊತೆ ಸಂಘಟನೆ ತೆಗೆದುಕೊಂಡು ಹೋಗುತ್ತಾರೆ. ಮುಂದಿನ ದಿನದಲ್ಲಿ ವಿಜಯೇಂದ್ರ ಅವರ ಮುಂದಾಳತ್ವದಲ್ಲಿ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.