ಶಾಸಕರಾದರೂ ಅಂಗಡಿ ಚನ್ನಬಸಪ್ಪನವರಿಗೆ ಸ್ವಂತ ಸೂರು ಇರಲಿಲ್ಲ!
1962ರಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ ಜಯಗಳಿಸಿ ಶಾಸಕರಾದ ಅಂಗಡಿ ಚನ್ನಬಸಪ್ಪನವರ ಕುಟುಂಬ ವಾಸವಾಗಿರಲು ಮನೆ ಕೂಡಾ ಇರಲಿಲ್ಲ!
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ (ಏ.18) : 1962ರಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ ಜಯಗಳಿಸಿ ಶಾಸಕರಾದ ಅಂಗಡಿ ಚನ್ನಬಸಪ್ಪ(Angadi channabasappa ex MLA)ನವರ ಕುಟುಂಬ ವಾಸವಾಗಿರಲು ಮನೆ ಕೂಡಾ ಇರಲಿಲ್ಲ!
ದಕ್ಷ, ಪ್ರಾಮಾಣಿಕತೆಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹೆಸರು ಮಾಡಿದ್ದ, ಚನ್ನಬಸಪ್ಪನವರು ವೃತ್ತಿಯಲ್ಲಿ ಕ್ರಿಮಿನಲ್ ವಕೀಲರಾಗಿದ್ದರು. ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಅಂಗಡಿ ಚನ್ನಬಸಪ್ಪನವರು 5 ವರ್ಷಗಳ ಕಾಲ ಶಾಸಕರಾಗಿದ್ದರೂ ಒಂದು ಮನೆ ಕಟ್ಟಿಕೊಳ್ಳಲಾಗದ ಸ್ಥಿತಿ ಇತ್ತು. ಶಾಸಕರಾಗಿದ್ದಾಗ ಇವರ ಕಚೇರಿ ನಿತ್ಯ ಜನಸಂಪರ್ಕ ಕಚೇರಿಯಾಗಿ ಪರಿವರ್ತನೆಯಾಗಿತ್ತು.
ಚುನಾವಣೆ ಕಣಕ್ಕೆ ರಂಗು ತುಂಬಿದ ಪತ್ನಿಯರು: ಕುಂಕುಮ ತಿಲಕವಿಟ್ಟು ಮತ ಯಾಚನೆ
ನಿತ್ಯ ಜನರ ಒಡನಾಟದಲ್ಲಿ ಇದ್ದುಕೊಂಡು ಪ್ರತಿಯೊಂದು ಸಮಸ್ಯೆಯನ್ನು ಆಲಿಸುತ್ತಿದ್ದರು. ವಕೀಲರ ವೃತ್ತಿ ಮತ್ತು ಶಾಸಕರಾಗಿದ್ದ ಸಂದರ್ಭದಲ್ಲಿ ಎಂದಿಗೂ ದುಡ್ಡಿಗೆ ಬೆನ್ನು ಬೀಳದೆ ಜನಸೇವೆಯಲ್ಲೆ ನಿರತರಾಗುತ್ತಿದ್ದರು. ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆಗಳ ಸಂಪರ್ಕ ಹೊಂದಲು ತುಂಗಭದ್ರಾ ನದಿ ಸುತ್ತುವರಿದಿದ್ದರಿಂದ ದೂರದ ಹರಿಹರಕ್ಕೆ ಹೋಗಿ ಸುತ್ತಿ ಬಳಸಿ ಬರಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ತುಂಗಭದ್ರಾ ನದಿಗೆ ಮೈಲಾರ- ಗುತ್ತಲ ಸೇತುವೆ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದರು. ಆ ಸೇತುವೆ ಇಂದಿಗೂ ಅವರ ಹೆಸರು ಹೇಳುತ್ತಿದೆ.
ಅಂಗಡಿ ಚನ್ನಬಸಪ್ಪ ತಮ್ಮ 44ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಮರಣ ಹೊಂದಿದರು. ಆ ಸಂದರ್ಭದಲ್ಲಿ ಅವರ ಅಂತ್ಯಸಂಸ್ಕಾರಕ್ಕೂ ಅವರ ಬಳಿ ಹಣವಿರಲಿಲ್ಲ. ಅಂದು ಅವರು ರೂಢಿಸಿಕೊಂಡು ಬಂದಿದ್ದ ನೈಜ ಸಮಾಜವಾದದ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಜನಗಳಿಕೆ ಮಾಡಿಕೊಂಡಿದ್ದರು. ಹೀಗಾಗಿ ಅವರ ಅಂತ್ಯಕ್ರಿಯೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಸಾಕಷ್ಟುಜನಸೇವೆ ಮಾಡಿ ಜನಾನುರಾಗಿ ಶಾಸಕರಾಗಿದ್ದು, ಇವರ ಕುಟುಂಬಕ್ಕೆ ವಾಸಕ್ಕೊಂದು ಮನೆಯೂ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ಮಂಡಲ ಪಂಚಾಯಿತಿ ವ್ಯವಸ್ಥೆಯಲ್ಲಿ ಹಿರೇಹಡಗಲಿಯ, ಪಿ. ನೀಲಕಂಠಪ್ಪ ಪ್ರಧಾನರಾಗಿದ್ದ ಸಮಯದಲ್ಲಿ ಜನತಾ ಮನೆಯೊಂದು ಮಂಜೂರಾಗಿತ್ತು. ಇವರ ಬದುಕಿನ ಭದ್ರತೆಗೆ ಸ್ವಾತಂತ್ರ್ಯ ಯೋಧರಿಗೆ ನೀಡುವ ಪಿಂಚಣಿಯ ಹಣದಲ್ಲೇ ಪತ್ನಿ ಬದುಕು ಸಾಗಿಸುತ್ತಿದ್ದರು.
ರಾಯಚೂರು: ಮಾನ್ವಿ ಕ್ಷೇತ್ರದಿಂದ ಕಿಚ್ಚ ಸುದೀಪ್‌ರನ್ನ ಚುನಾವಣಾ ಕಣಕ್ಕಿಳಿಸಲು ಬಿಜೆಪಿ ಪ್ಲಾನ್?!
ಇಂದಿನ ಸ್ವಾರ್ಥ ರಾಜಕಾರಣಿಗಳಿಗೆ ಅಂದಿನ ಶಾಸಕರಾಗಿದ್ದ ಅಂಗಡಿ ಚನ್ನಬಸಪ್ಪ ಮಾದರಿಯಾಗಿದ್ದಾರೆ. ಭವಿಷ್ಯ ಜೀವನಕ್ಕೆ ಹಣದ ಅಗತ್ಯತೆ ಎಂಬ ಅರಿವು ಅವರಿಗೆ ಬರಲೇ ಇಲ್ಲ. ಅಂತಹ ಅಪರೂಪದ ಜನಪರ, ನಿಸ್ವಾರ್ಥಿ ರಾಜಕಾರಣಿ ಅಂಗಡಿ ಚನ್ನಬಸಪ್ಪ ಎಂದು ಕ್ಷೇತ್ರದ ಹಿರಿಯರು ಇಂದಿಗೂ ಸ್ಮರಿಸುತ್ತಾರೆ.