ಕೇಂದ್ರದಿಂದ ಅಕ್ಕಿ ಕೊಡದಿದ್ದರೂ 5 ಕೆಜಿ ಅಕ್ಕಿ, ರೂ.170 ಕೊಡುತ್ತೇವೆ: ಶಾಸಕ ಲಕ್ಷ್ಮಣ ಸವದಿ
ಸ್ವಾಮಿ ಯಡಿಯೂರಪ್ಪನವರೇ ನೀವು ಕೇಂದ್ರದಿಂದ ಅಕ್ಕಿ ಕೊಡದಿದ್ದರೂ ನಾವು ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ಹಾಗೂ 170 ಕೊಡುತ್ತೇವೆ. ಮುಂದಿನ ದಿನಮಾನಗಳಲ್ಲಿ 65 ಬದಲಾಗಿ 6 ಸ್ಥಾನಕ್ಕೆ ಇಳಿಯುತ್ತಿರಿ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಲೇವಡಿ ಮಾಡಿದರು.
ಕಾಗವಾಡ (ಜೂ.30): ಸ್ವಾಮಿ ಯಡಿಯೂರಪ್ಪನವರೇ ನೀವು ಕೇಂದ್ರದಿಂದ ಅಕ್ಕಿ ಕೊಡದಿದ್ದರೂ ನಾವು ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ಹಾಗೂ 170 ಕೊಡುತ್ತೇವೆ. ಮುಂದಿನ ದಿನಮಾನಗಳಲ್ಲಿ 65 ಬದಲಾಗಿ 6 ಸ್ಥಾನಕ್ಕೆ ಇಳಿಯುತ್ತಿರಿ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಲೇವಡಿ ಮಾಡಿದರು. ತಾಲೂಕಿನ ಐನಾಪುರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಮುಖ 5 ಗ್ಯಾರಂಟಿಗಳನ್ನು ಘೋಷಿಸಿ ಅದರಲ್ಲಿ ಒಂದನ್ನು ಈಡೇರಿಸಿದ್ದೇವೆ. 4 ಯೋಜನೆಗಳಿಗೆ ಸಿದ್ಧತೆ ನಡೆದಿದೆ. ಆದರೆ, ಯಡಿಯೂರಪ್ಪನವರು ಹೇಳುತ್ತಾರೆ.
ಜು.1ರ ನಂತರ ಗ್ಯಾರಂಟಿಗಳನ್ನು ಕೊಡದಿದ್ದರೇ ವಿಧಾನಸೌಧದ ಒಳಗೂ, ಹೊರಗೂ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾನು ಬಿಎಸ್‌ವೈ ಅವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಅವರಲ್ಲಿ 7 ಲಕ್ಷ ಮೆಟ್ರಿಕ್ ಟನ್ ಗೋದಾಮಿನಲ್ಲಿ ಅಕ್ಕಿ ದಾಸ್ತಾನು ಇದೆ. ಪ್ರತಿ ಕೆಜಿಗೆ ರಾಜ್ಯ ಸರ್ಕಾರದಿಂದ 34 ಕೊಡುತ್ತೇವೆ. ಅದನ್ನು ನಮಗೆ ಕೊಡಿ ಎಂದು ಕೇಳಿದರೆ ರಾಜ್ಯದ ಬಿಜೆಪಿ ನಾಯಕರು ಕೊಡಬೇಡಿ ಅಂತಾ ಹೇಳುತ್ತಾರೆ. ಇಲ್ಲಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಮಗುವನ್ನು ಚಿವುಟುವುದು ಅವರೇ ತೊಟ್ಟಿಲನ್ನು ತೂಗುವುದು ಅವರೆ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಸಿದ್ದು, ಶಿವಕುಮಾರ್ ಮೈತ್ರಿ ಸರ್ಕಾರ: ಅಶೋಕ್ ವ್ಯಂಗ್ಯ
ಗ್ಯಾರಂಟಿ ಕೊಟ್ಟರೆ ರಾಜ್ಯ ದಿವಾಳಿ: ರಾಜ್ಯದ ಬಡ ಜನರಿಗೆ 5 ಗ್ಯಾರಂಟಿಗಳನ್ನು ಕೊಟ್ಟರೆ ವರ್ಷಕ್ಕೆ .45 ಸಾವಿರ ಕೋಟಿ ಖರ್ಚಾಗುತ್ತದೆ. ಇದರಿಂದ ಕರ್ನಾಟಕ ದಿವಾಳಿ ಆಗಿ ಪಾಕಿಸ್ತಾನ, ಬಾಂಗ್ಲಾದೇಶದ ಹಾಗೆ ಆಗುತ್ತದೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ಕರ್ನಾಟಕದಲ್ಲಿ ನೀವು ಅಧಿಕಾರದಲ್ಲಿದ್ದಾಗ ಯಾವ್ಯಾವ ಖಾಸಗಿ ಕಾರ್ಖಾನೆಗಳಿಗೆ ಸಾಲ ಕೊಟ್ಟಿದ್ದೀರಿ? ಎಷ್ಟು ವಸೂಲಾತಿ ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ಸಾವಿರಾರು ಕೋಟಿ ಸಾಲ ಪಡೆದು ದೇಶ ಬಿಟ್ಟು ಹೋದವರ ಬಳಿ ಒಂದು ನಯಾಪೈಸಾನು ವಸೂಲಿ ಮಾಡಲಿಲ್ಲ. ಆಗ ದೇಶ ದಿವಾಳಿ ಆಗಲಿಲ್ಲ. ಈಗ ಬಡವರಿಗೆ ಸೌಲಭ್ಯಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗುತ್ತಾ?
5 ಗ್ಯಾರಂಟಿಗಳನ್ನು ಕೊಡುವುದಾಗಿ ನಿರ್ದರಿಸಿದ್ದೇವೆ. ತಾಳ್ಮೆಯಿಂದ ಕಾಯಬೇಕು. ಅದನ್ನು ಬಿಟ್ಟು ದುರುದ್ದೇಶದಿಂದ ಟೀಕಿಸುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜನತೆ ನೆಮ್ಮದಿಯ ಜೀವನ ನಡೆಸುವ ಭರವಸೆ ಸಿಕ್ಕಿದೆ. ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ ಗ್ಯಾರಂಟಿಗಳನ್ನು ಜನರ ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಚುನಾವಣಾ ಪೂರ್ವದಲ್ಲಿ 5 ಪ್ರಮುಖ ಗ್ಯಾರಂಟಿಗಳನ್ನು ನೀಡುತ್ತೇವೆಂದು ಆಶ್ವಾಸನೆ ಕೊಡಲಾಗಿತ್ತು.
ಅದರಲ್ಲಿ ಈಗಾಗಲೇ ಒಂದು ಗ್ಯಾರಂಟಿಯನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗಿದ್ದು, ಲಕ್ಷಾಂತರ ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ. ಇನ್ನು 4 ಗ್ಯಾರಂಟಿಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಬಿಜೆಪಿಯವರ ಮಾತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಶಾಸಕ ರಾಜು ಕಾಗೆ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಮತ್ತು ಲಕ್ಷ್ಮಣ ಸವದಿ ಮತ್ತೇ ಶಾಸಕರಾಗಿದ್ದೇವೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಅಥಣಿ ಮತ್ತು ಕಾಗವಾಡ ಎರಡೂ ಕ್ಷೇತ್ರಗಳಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ. ಜೊತೆಗೆ ರಸ್ತೆ, ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆ ಜನರಿಗೆ ಕೊಡದಂತೆ ಮಾಡುವುದು ಕೇಂದ್ರದ ಉದ್ದೇಶ: ಸಚಿವ ಚಲುವರಾಯಸ್ವಾಮಿ
ಈ ವೇಳೆ ವೇದಿಕೆಯ ಮೇಲೆ ಸುಭಾಷ ಪಾಟೀಲ, ಚಮನರಾವ್ ಪಾಟೀಲ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ, ಸಂಜಯ ಕುಚನೂರೆ, ಕುಮಾರ ಅಪರಾಜ, ಸತೀಶ ಗಾಣಿಗೇರ, ಸುರೇಶ ಗಾಣಿಗೇರ, ಅನುಪ ಶೆಟ್ಟಿ, ಅಪ್ಪಾಸಾಬ್ ಚೌಗುಲಾ, ಪ್ರಕಾಶ ಕೋರ್ಬು, ಗುರುರಾಜ ಮಡಿವಾಳರ, ಶಿದರಾಯ ಗಾಡಿವಡ್ಡರ, ಅಶೋಕ ಹುಗ್ಗಿ, ಚಿದಾನಂದ ಕೋರ್ಬು, ವಿಶ್ವನಾಥ ನಾಮದಾರ, ಸಂಜಯ ಕುಸನಾಳೆ, ಬಾಹುಬಲಿ ಕುಸನಾಳೆ, ಮಹೇಶ ಸೊಲ್ಲಾಪುರೆ, ಅನಿಲ ಸತ್ತಿ, ಅನೀಲ ಗಾಣಿಗೇರ, ದಾದಾ ಜಂತೆನ್ನವರ, ಅರವಿಂದ ಕಾರ್ಚಿ ಸೇರಿದಂತೆ ಅನೇಕರು ಇದ್ದರು.