ವಾಲ್ಮೀಕಿ ಅಭಿವೃದ್ದಿ ಅಕ್ರಮದಲ್ಲಿ ಸಚಿವರು ತಪ್ಪು ಮಾಡಿದ್ರೂ ಕಠಿಣ ಶಿಕ್ಷೆಯಾಗಲಿ: ಶಾಸಕ ಗೋಪಾಲಕೃಷ್ಣ ಬೇಳೂರು
ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಿಸಿ ಯಾರೇ ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಒಂದೊಮ್ಮೆ ಸಚಿವರು ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆಯಾಗಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ (ಜೂ.02): ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಿಸಿ ಯಾರೇ ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಒಂದೊಮ್ಮೆ ಸಚಿವರು ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆಯಾಗಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಪತ್ರಕರ್ತರೊಂದಿಗೆ ಮಾತನಾಡಿ ತಪ್ಪು ಮಾಡಿದವರ ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ಬರಬೇಕು. ರಾಜ್ಯ ಸರ್ಕಾರ ಪದೇಪದೇ ಟೀಕಿಸುವ ಬಿಜೆಪಿಯವರು ಕೇಂದ್ರದಲ್ಲಿರುವ ತಮ್ಮ ನೇತೃತ್ವದ ಪಕ್ಷದ ಮೇಲೆ ಅಂತಹ ಕಾನೂನು ಜಾರಿಗೆ ತರಲು ಒತ್ತಡ ಹೇರಲಿ ಎಂದು ಸಲಹೆ ನೀಡಿದರು.
ಸರ್ಕಾರದ ಹಣ ದುರುಪಯೋಗ ಮಾಡುವುದು ಸಹಿಸುವುದಿಲ್ಲ. ಈಗಾಗಲೇ ಪ್ರಕರಣ ಎಸ್‌ಐಟಿಗೆ ವಹಿಸಲಾಗಿದೆ. ಸಿಬಿಐಗೆ ವಹಿಸಿದರೂ ಚಿಂತೆಯಿಲ್ಲ. ಒಟ್ಟಾರೆ ನ್ಯಾಯಯುತ ತನಿಖೆ ನಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಆಗಬೇಕು ಎಂದರು. ಪರಿಷತ್‌ನಲ್ಲಿ ಸಂಖ್ಯಾಬಲ ಹೆಚ್ಚಳ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದೆ. ನೈಋತ್ಯ ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ್ ಮತ್ತು ಶಿಕ್ಷಕ ಕ್ಷೇತ್ರದ ಕೆ.ಕೆ.ಮಂಜುನಾಥ್ ಪರವಾಗಿ ಮತದಾರರು ಒಲವು ಹೊಂದಿದ್ದು ಇಬ್ಬರೂ ಸುಲಭವಾಗಿ ಗೆಲ್ಲುತ್ತಾರೆ.
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಪಡೆಯುವ ಮೂಲಕ ವಿಧಾನ ಪರಿಷತ್ನಲ್ಲಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲಿದೆ. ರಾಜ್ಯ ಸರ್ಕಾರ ನಮ್ಮದೆ ಇರುವುದರಿಂದ ವಿಧಾನ ಪರಿಷತ್ ಚುನಾವಣೆ ನಂತರ ಎನ್.ಪಿ.ಎಸ್. ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದ್ದು, ಎನ್.ಪಿ.ಎಸ್. ನೌಕರರ ಪರವಾಗಿ ನಾನು ನಿಲ್ಲುತ್ತೇನೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಅಧ್ಯಕ್ಷ ಐ.ಎನ್.ಸುರೇಶಬಾಬು, ಮಹಿಳಾ ಕಾಂಗ್ರೇಸ್ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಪ್ರಮುಖರಾದ ಉಷಾ ಎನ್., ಸೋಮಶೇಖರ ಲ್ಯಾವಿಗೆರೆ, ಗಣಪತಿ ಮಂಡಗಳಲೆ, ಮಧುಮಾಲತಿ, ಸರಸ್ವತಿ ನಾಗರಾಜ್, ಬಿ.ಎ.ಇಂದೂಧರ ಗೌಡ, ಮಹ್ಮದ್ ಖಾಸಿಂ ಇನ್ನಿತರರಿದ್ದರು.
ಆರ್‌ಎಸ್‌ಎಸ್ ಸಂಘಟನೆ ದೇಶ ಕಟ್ಟುವ, ಪಕ್ಷ ಬೆಳೆಸುವುದನ್ನು ಕಲಿಸಿದೆ: ಡಾ.ಧನಂಜಯ ಸರ್ಜಿ
ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ನಿರೀಕ್ಷೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರುವ ನಿರೀಕ್ಷೆಯಿದೆ. ಬಿಜೆಪಿ ಬಹುಮತ ಬರುವ ವಾತಾವರಣ ಇರಲಿಲ್ಲ. ಮೋದಿಯವರ ಮುಖದಲ್ಲೂ ಕೇಂದ್ರದಲ್ಲಿ ಮತ್ತೊಮ್ಮೆ ತಮ್ಮದೆ ಸರ್ಕಾರ ಬರುತ್ತದೆ ಎನ್ನುವ ವಿಶ್ವಾಸ ಇರಲಿಲ್ಲ. ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದು ಮೋದಿಯವರು ತಮಗೆ ಹೆಚ್ಚು ಭಾಷಣ ಮಾಡಲು ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಮಾತ್ರ. ಮುಂದಿನ ದಿನಗಳಲ್ಲಿ ಮೂರು ಅಥವಾ ನಾಲ್ಕು ಹಂತದಲ್ಲಿ ಲೋಕಸಭಾ ಚುನಾವಣೆ ಮುಗಿಸುವಂತಾಗಬೇಕು ಎಂದು ಶಾಸಕ ಬೇಳೂರು ಹೇಳಿದರು.