ಮನಮೋಹನ್ ಸಿಂಗ್ ಹೆಸರಲ್ಲಿ ಬೆಂ.ವಿವಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ: ಡಿ.ಕೆ.ಶಿವಕುಮಾರ್
ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಸಲಹೆ ನೀಡಿದ್ದಾರೆ.
ಬೆಳಗಾವಿ (ಡಿ.28): ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಸಲಹೆ ನೀಡಿದ್ದಾರೆ. ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಅಧಿವೇಶನ ರದ್ದುಗೊಳಿಸಿ ಅದೇ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಮನಮೋಹನ್ ಸಿಂಗ್ ಈ ದೇಶ ಕಂಡ ಶ್ರೇಷ್ಠ ಪ್ರಧಾನಿ.
ದೇಶದ ಎಲ್ಲಾ ವರ್ಗದ ಜನರನ್ನು ಕಾಪಾಡಿದ ನಿಜವಾದ ಆರ್ಥಿಕ ತಜ್ಞ ಹಾಗೂ ಕ್ರಾಂತಿಕಾರಿ. ಮುಂದಿನ ಪೀಳಿಗೆಗೆ ಇವರು ಮಾಡಿದ ಆರ್ಥಿಕ ಕ್ರಾಂತಿ ಸೇರಿ ದೇಶಕ್ಕೆ ನೀಡಿದ ಕೊಡುಗೆಗಳನ್ನು ತಲುಪಿಸುವುದೇ ನಿಜವಾದ ಶ್ರದ್ಧಾಂಜಲಿ. ವಿದ್ಯಾರ್ಥಿಗಳು ಇವರ ಆರ್ಥಿಕ ನೀತಿಗಳನ್ನು ಅಧ್ಯಯನ ಮಾಡಿ, ಹೊಸ ಸಂಶೋಧನಾ ಕಾರ್ಯಗಳ ಮೂಲಕ ದೇಶದ ಆರ್ಥಿಕತೆ ಮತ್ತಷ್ಟು ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದರು.
ಧಾರವಾಡ ಪೇಢಾ ಎಂದರೆ ಮನಮೋಹನ ಸಿಂಗ್‌ಗೆ ಬಲು ಪ್ರೀತಿ!
ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್‌ಗೆ ಡಿಸಿಎಂ ಸಲಹೆ: ಮನಮೋಹನ್ ಸಿಂಗ್ ಅವರು ಪುಣ್ಯದ ಹಾಗೂ ಅಭಿವೃದ್ಧಿಯ ಬೀಜ ಬಿತ್ತಿ ಹೋಗಿದ್ದಾರೆ. ಅದನ್ನು ನಾವು ಬೆಳೆಸೋಣ, ಉಳಿಸೋಣ. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣ. ಗಾಂಧಿಯವರ ಇತಿಹಾಸವನ್ನು ಮೆಲುಕು ಹಾಕಲು ದೇಶದ ಮೂಲೆ ಮೂಲೆಗಳಿಂದ ನಾಯಕರು ಬೆಳಗಾವಿಗೆ ಬಂದಿದ್ದರು. ನಮ್ಮ ಮುಂದಿನ ಪೀಳಿಗೆಗೆ ಗಾಂಧಿ ಅವರ ಆದರ್ಶಗಳನ್ನು ತಲುಪಿಸುವ ಕೆಲಸಕ್ಕೆ ನಾವು ಮುಂದಾಗಿದ್ದೆವು. ಆದರೆ ವಿಧಿಯಾಟ ಬೇರೆಯಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಅವರು ಸಾಕ್ಷಿಯಾಗಲಿ ಎಂದು ಜೂಮ್ ಆ್ಯಪ್ ಮುಖಾಂತರ ಅವರಿಗೆ ಕಾರ್ಯಕ್ರಮದ ಕೊಂಡಿ ಕಳಿಸಲಾಗಿತ್ತು.
ವೇಣುಗೋಪಾಲ್ ಅವರ ಸಲಹೆಯಂತೆ ಮನಮೋಹನ್ ಸಿಂಗ್ ಅವರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲೆಂದು ನಾವು ಬಯಸಿದ್ದೆವು. ಈ ಕಾರಣಕ್ಕೆ ಅವರ ಕಚೇರಿಯನ್ನು ಸಂಪರ್ಕಿಸಿದಾಗ ಸಿಂಗ್ ಅವರ ಆರೋಗ್ಯ ಸರಿ ಇಲ್ಲ. ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ದೊರೆಯಿತು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಸಿಂಗ್ ಆಡಳಿತ ಕಾಲದಲ್ಲಿ ಜಿಡಿಪಿ ಶೇ 7.7ಕ್ಕೆ ತಲುಪಿ ದಾಖಲೆಯಾಗಿತ್ತು. ಅವರು ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ. ಜಗತ್ತಿನ ಇತಿಹಾಸದಲ್ಲಿ ಇವರ ಹೆಸರು ಅಜಾರಾಮರ. ಬಡವರ ನಾಡಿಮಿಡಿತ ಹಿಡಿದು ಕೆಲಸ ಮಾಡಿದವರು.
ಖ್ಯಾತ ನಿರ್ದೇಶಕನ ಪುತ್ರಿ ಜೊತೆ ಕಾಣಿಸಿಕೊಂಡ ರಾಮ್ ಚರಣ್: ಆದರೆ ಫ್ಯಾನ್ಸ್ ಕೊಟ್ರು ಸಲಹೆ!
ದೇಶದಲ್ಲಿ ಆಧಾರ್ ಕಾರ್ಡ್ ಪರಿಚಯಿಸಿದರು ಅವರು. ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು, ನರೇಗಾ ಸೇರಿ ಅನೇಕ ಕಾನೂನುಗಳನ್ನು ತಂದರು. ಆ ಮೂಲಕ ಆಡಳಿತಕ್ಕೆ ಪಾರದರ್ಶಕತೆ ತಂದರು. ಅವರ ಆದರ್ಶ ಜೀವನ ಎಲ್ಲರಿಗೂ ಸ್ಫೂರ್ತಿ. ನಾನು 15 ವರ್ಷಗಳ ಕಾಲ ಅವರ ಜತೆ ಕೆಲಸ ಮಾಡಿದ್ದೇನೆ. ಅವರು ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದಾಗ ಕರ್ನಾಟಕದ ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ದೇಶದಲ್ಲೇ ಮೊದಲ ಬಾರಿಗೆ ನೀರಾವರಿ ಬಾಂಡ್ ಮಂಜೂರು ಮಾಡಿ 2 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳುವಂತೆ ಮಾಡಿದರು. ಮನಮೋಹನ್ ಸಿಂಗ್ ಸದಾ ಆದರ್ಶದ ಧ್ರುವ ನಕ್ಷತ್ರವಾಗಿ ನಿಲ್ಲಲಿದ್ದಾರೆ ಎಂದರು. ಸಭೆಯಲ್ಲಿ ಸಚಿವರು, ಶಾಸಕರು, ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಸೇರಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಉಪಸ್ಥಿತರಿದ್ದರು.