ಇವಿಎಂ ಮಿಷನ್ ಮೇಲಿನ ಎಲಾನ್ ಮಸ್ಕ್ ಅನುಮಾನ ಬೆಂಬಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್
ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಅನ್ನು ತಿರುಚಲು ಸಾಧ್ಯವೆಂದು ಹೇಳಿಕೆ ನೀಡಿದ ಎಲಾನ್ ಮಸ್ಕ್ ಅಭಿಪ್ರಾಯವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಸಿದ್ದಾರೆ.
ಬೆಂಗಳೂರು (ಜೂ.17): ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಅನ್ನು ತಿರುಚಲು ಸಾಧ್ಯವೆಂದು ಹೇಳಿಕೆ ನೀಡಿದ ಎಲಾನ್ ಮಸ್ಕ್ ಅಭಿಪ್ರಾಯವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಸಿದ್ದಾರೆ. ಜೊತೆಗೆ, ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆಗಳ ಮೇಲೆ ಅನುಮಾನ ವ್ಯಕ್ತಪಡಿಸುವ ಮೂಲಕ ಸಹೋದರ ಡಿ.ಕೆ. ಸುರೇಶ್ ಸೋಲಿಗೆ ಇವಿಎಂ ಮಷಿನ್ ವೈಫಲ್ಯವೇ ಕಾರಣವೆಂದು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಅಂಶ ಕಂಡುಬರುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ಮಸುಕಾ'ಗಿದ್ದ ಅನುಮಾನ ಈಗ ತೀಕ್ಷ್ಣ. ತಂತ್ರಜ್ಞಾನ ನಿಪುಣ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಎಲಾನ್ ಮಸ್ಕ್ ಅವರೇ ಇವಿಎಂಗಳ ಮೇಲೆ ವ್ಯಕ್ತಪಡಿಸಿರುವ ಅನುಮಾನವು ಭಾರತದಲ್ಲಿ ನಡೆದ ಮತದಾನ ಪ್ರಕ್ರಿಯೆಗಳ ಬಗ್ಗೆ ಆತಂಕ ಮೂಡಿಸಿದೆ. ಚುನಾವಣೆಯ ನಂತರ ದೇಶದ ಕೆಲವೆಡೆ ನಡೆಯುತ್ತಿರುವ ಘಟನೆಗಳಿಗೂ ಮಸ್ಕ್ ಅವರ ಹೇಳಿಕೆಗೂ ತಾಳೆಯಾಗುತ್ತಿದೆ. ಚುನಾವಣೆ ವ್ಯವಸ್ಥೆಯೇ ಪಾರದರ್ಶಕವಾಗಿರದಿದ್ದರೆ ಜನಾದೇಶ ಯಾರ ಕಡೆ ಇದೆ ಎಂದು ತಿಳಿಯುವುದಾದರೂ ಹೇಗೆ? ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಈಗ ಪ್ರಪಂಚಕ್ಕೇ ಅರ್ಥವಾಗಿದೆ. ಭಾರತಕ್ಕೂ ಆ ಕಾಲ ಸನ್ನಿಹಿತವಾಗಿದೆ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇವಿಎಂ ತಿರುಚಬಹುದು: ಎಲಾನ್ ಮಸ್ಕ್ ನುಡಿ ಭಾರತದಲ್ಲಿ ಭಾರಿ ವಿವಾದ!
ಎಲಾನ್ ಮಸ್ಕ್ ಹೇಳಿದ್ದೇನು?
ಮಸ್ಕ್ ಹೇಳಿದ್ದೇನು?: ಇದೇ ವರ್ಷ ಅಮೆರಿಕದಲ್ಲೂ ಅಧ್ಯಕ್ಷೀಯ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಮಸ್ಕ್ ‘ಪೋರ್ಟೊರಿಕೋದಲ್ಲಿ ನೂರಾರು ಇವಿಎಂ ಮಷಿನ್‌ಗಳಲ್ಲಿ ಅಕ್ರಮ ಬೆಳಕಿಗೆ ಬಂದಿದೆ. ಆದರೆ ಅದೃಷ್ಟವಶಾತ್ ಪೇಪರ್ ಟ್ರಯಲ್ ಇದ್ದ ಕಾರಣ ಅವುಗಳ ಮತ ಎಣಿಸಿ ಅಕ್ರಮ ಸರಿಪಡಿಸಲಾಗಿದೆ. ಇವಿಎಂಗಳನ್ನು ಹ್ಯಾಕ್ ಮಾಡುವ ಅವಕಾಶ ಮತ್ತು ಅವುಗಳ ಮಾಹಿತಿಯನ್ನು ತಿರುಚವ ಸಂಭವನೀಯ ಅವಕಾಶ ಇದ್ದೇ ಇದೆ. ಹೀಗಾಗಿ ಹಿಂದಿನಂತೆ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಮೊರೆ ಹೋಗುವುದು ಸೂಕ್ತ’ ಎಂದಿದ್ದಾರೆ.
ಭಾರತದ ಇವಿಎಂಗೆ ಇಂಟರ್‌ನೆಟ್ಟೇ ಇಲ್ಲ ಒಟಿಪಿ ಬಳಸಿ ಇವಿಎಂ ಅನ್‌ಲಾಕ್ ಅಸಾಧ್ಯ: ಚುನಾವಣಾ ಆಯೋಗ
ಎಲಾನ್ ಮಸ್ಕ್ ಎಇಎಂ ಬಗ್ಗೆ ಹೇಳಿಕೆ ನೀಡಲು ಕಾರಣ ಹೀಗಿದೆ ನೋಡಿ...: ಇತ್ತೀಚೆಗೆ ಪೋರ್ಟೊರಿಕೋ ದೇಶದಲ್ಲಿ ನಡೆದ ಚುನಾವಣೆ ವೇಳೆ ಸಾಫ್ಟ್‌ವೇರ್ ದೋಷದಿಂದಾಗಿ ಇವಿಎಂಗಳಲ್ಲಿ ಚಲಾವಣೆಯಾಗಿದ್ದ ಮತಗಳ ಎಣಿಕೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಆದರೆ, ಪೇಪರ್ ಟ್ರಯಲ್ ಇದ್ದ ಕಾರಣ, ಅವುಗಳಲ್ಲಿನ ಮತಗಳನ್ನು ಆಧರಿಸಿ ಫಲಿತಾಂಶ ಘೋಷಣೆ ಮಾಡಲಾಗಿತ್ತು. ಈ ಇವಿಎಂಗಳನ್ನು ಅಮೆರಿಕದ ಕಂಪನಿಯೊಂದು ಪೂರೈಸಿತ್ತು. ಈ ವಿಷಯವೇ ಮಸ್ಕ್ ಅವರು ಇವಿಎಂ ಸಂದೇಹಿಸಲು ಕಾರಣವಾಗಿದೆ.