ಮನೆಮನೆಗೆ ಹೋಗಿ ಸಮೀಕ್ಷೆ ನಡೆಸುವುದನ್ನು ಕೈಬಿಟ್ಟ ಸಂಸ್ಥೆಗಳು, ಮತದಾರರಿಗೆ ಧ್ವನಿಮುದ್ರಿತ ಕರೆ ಮಾಡಿ ಅಭಿಪ್ರಾಯ ಸಂಗ್ರಹ. 

ಬೆಂಗಳೂರು(ಮೇ.03):  ವಿಧಾನಸಭೆ ಚುನಾವಣೆ ಹತ್ತಿರಾಗುತ್ತಿದ್ದಂತೆ ಮತದಾರ ಯಾರ ಪರವಾಗಿದ್ದಾನೆ ಎಂಬ ಬಗ್ಗೆ ಹಲವು ಸಂಸ್ಥೆಗಳು ಸಮೀಕ್ಷೆ ನಡೆಸುತ್ತಿವೆ. ಈವರೆಗೆ ಜನರ ಬಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದ ಸಂಸ್ಥೆಗಳು, ಮತದಾರನ ಮನಸ್ಸನ್ನರಿಯಲು ಧ್ವನಿಮುದ್ರಿತ ದೂರವಾಣಿ ಕರೆಗಳ ಮೊರೆ ಹೋಗುತ್ತಿವೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮತ ಪಡೆದು ಗೆಲ್ಲುವವರು ಯಾರು ಎಂದು ಖಾಸಗಿ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಅದರ ಜತೆಗೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಕೂಡ ತಮ್ಮ ಕ್ಷೇತ್ರದಲ್ಲಿ ಮತದಾರ ಯಾರ ಬಗ್ಗೆ ಒಲವು ತೋರುತ್ತಾನೆ ಎಂಬುದನ್ನು ಅರಿಯಲು ಸರ್ವೇ ನಡೆಸಸುತ್ತವೆ. ಹೀಗೆ ಸಮೀಕ್ಷೆಯ ಹೊಣೆ ಹೊತ್ತ ಸಂಸ್ಥೆಗಳು ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚಿನ ಜನರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಜನರ ಅಭಿಪ್ರಾಯ ತಿಳಿಯುತ್ತವೆ. ಆದರೆ ಇದೀಗ ಸಮೀಕ್ಷೆ ನಡೆಸುವ ಪ್ರಕ್ರಿಯೆಯನ್ನೇ ಬದಲಿಸಲಾಗಿದ್ದು, ಜನರ ಬಳಿಗೆ ನೇರವಾಗಿ ಹೋಗದೆ ಸಾಮಾಜಿಕ ಜಾಲತಾಣ, ಮತದಾರರಿಗೆ ಧ್ವನಿ ಮುದ್ರಿತ ಕರೆ ಮಾಡಿ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ.

ಖರ್ಗೆ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್‌ಗೆ ನಷ್ಟ, ಸಮೀಕ್ಷೆಯಲ್ಲಿ ಬಯಲಾಯ್ತು ರಹಸ್ಯ!

ಇತ್ತೀಚಿನ ದಿನಗಳಲ್ಲಿ ಮತದಾರರ ಮಾಹಿತಿ ಸಂಗ್ರಹ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸಮೀಕ್ಷೆ ನಡೆಸಲು ಹೋಗುವವರಿಗೆ ಜನರು ಉತ್ತರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರ ಬಳಿಗೆ ನೇರವಾಗಿ ತೆರಳದೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರನ್ನು ಹಾಕಿ, ನೀವು ಯಾರಿಗೆ ಬೆಂಬಲ ನೀಡುತ್ತೀರಾ ಎಂಬಂತಹ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆದರೆ, ಈ ಸಮೀಕ್ಷೆಯಲ್ಲಿ ಆಯಾ ಕ್ಷೇತ್ರದ ಮತದಾರನೇ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ ಎಂಬುದರ ಬಗ್ಗೆ ಖಾತ್ರಿಯಿರುವುದಿಲ್ಲ.

ಸಮೀಕ್ಷೆಯನ್ನು ಮತ್ತಷ್ಟುನಿಖರವಾಗಿ ಮಾಡಲು ಧ್ವನಿಮುದ್ರಿತ ದೂರವಾಣಿ ಕರೆಗಳ ಮೊರೆ ಹೋಗಲಾಗುತ್ತಿದೆ. ಅದರಂತೆ ಕ್ಷೇತ್ರದ ಮತದಾರರ ಮೊಬೈಲ್‌ಗೆ ಕರೆ ಮಾಡಿ ಕ್ಷೇತ್ರದಲ್ಲಿ ಯಾವ ರಾಜಕೀಯ ಪಕ್ಷದಿಂದ ಯಾರು ಸ್ಪರ್ಧಿಸಿದ್ದಾರೆ. ಅವರಲ್ಲಿ ನೀವು ಯಾರನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಗುತ್ತದೆ. ನಂತರ ನೀವು ಯಾರಿಗೆ ಬೆಂಬಲಿಸುತ್ತೀರಾ ಎಂದು ತಿಳಿಯಲು ಸಂಖ್ಯೆಯನ್ನು ನಮೂದಿಸುವ ಮೂಲಕ ತಿಳಿಸುವಂತೆ ಕೋರಲಾಗುತ್ತದೆ. ಹೀಗೆ ಮತದಾರರು ತಾವು ಬೆಂಬಲಿಸಲಿರುವ ಅಭ್ಯರ್ಥಿಗಳ ಬಗ್ಗೆ ತಿಳಿಸಲು ನೀಡಲಾದ ಸಂಖ್ಯೆಯನ್ನು ಮೊಬೈಲ್‌ನಲ್ಲಿ ನಮೂದಿಸಿದರೆ, ಅದು ಸಮೀಕ್ಷೆ ನಡೆಸುತ್ತಿರುವ ಸಂಸ್ಥೆಯ ಸಿಸ್ಟಂನಲ್ಲಿ ಪ್ರತಿಫಲಿಸಲಿದೆ. ಅದನ್ನಾಧರಿಸಿ ಯಾರಿಗೆ ಎಷ್ಟು ಬೆಂಬಲವಿದೆ ಎಂಬುದನ್ನು ತಿಳಿಯಲಾಗುತ್ತಿದೆ.