Karnataka BJP: ಬಿಜೆಪಿ ರಾಜ್ಯಾಧ್ಯಕ್ಷರ ತವರು ಕ್ಷೇತ್ರದಲ್ಲೇ ಅಭ್ಯರ್ಥಿ ಆಯ್ಕೆ ಕಗ್ಗಂಟು!

  • ಬಿಜೆಪಿ ರಾಜ್ಯಾಧ್ಯಕ್ಷರ ತವರು ಕ್ಷೇತ್ರದಲ್ಲೇ ಅಭ್ಯರ್ಥಿ ಆಯ್ಕೆ ಕಗ್ಗಂಟು!
  • ಹಾಲಿ ಶಾಸಕ ಸಂಜೀವ ಮಠಂದೂರು ಬದಲು ಹೊಸ ಮುಖ ಕಣಕ್ಕೆ?
  • ಮುಂಚೂಣಿಯಲ್ಲಿ ಜಗನ್ನಿವಾಸ ರಾವ್‌, ಪುತ್ತಿಲ, ಬೊಟ್ಯಾಡಿ ಹೆಸರು
Election of candidate in BJP state president's home constituency is in trouble rav

ಆತ್ಮಭೂಷಣ್‌ 

ಮಂಗಳೂರು (ಏ.9) : ಕ್ಷಿಪ್ರ ವಿದ್ಯಮಾನಗಳಿಂದ ರಾಜ್ಯದ ಗಮನ ಸೆಳೆದಿರುವ ಮಾತ್ರವಲ್ಲ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ತವರು ಕ್ಷೇತ್ರವಾಗಿರುವ ಪುತ್ತೂರಿನಲ್ಲಿ ಅಭ್ಯರ್ಥಿ ಬದಲಾವಣೆಗೆ ಬಿಜೆಪಿ ಹಾಗೂ ಸಂಘಪರಿವಾರ ಪ್ರಮುಖರು ಮುಂದಾಗಿದ್ದಾರೆ. ಅಭ್ಯರ್ಥಿ ರೇಸಿನಲ್ಲಿ ಹಾಲಿ ಶಾಸಕರ ಹೆಸರು ಇದ್ದರೂ ಹೊಸ ಮುಖವನ್ನು ಕಣಕ್ಕೆ ಇಳಿಸುವ ತೀರ್ಮಾನಕ್ಕೆ ಬಹುತೇಕ ಬಂದಿರುವುದರಿಂದ ಮೂವರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಲಭ್ಯ ಮಾಹಿತಿ ಪ್ರಕಾರ ಹಾಲಿ ಶಾಸಕ ಸಂಜೀವ ಮಠಂದೂರು(Sanjeev mathandur) ಮೂರನೇ ಬಾರಿಗೆ ಟಿಕೆಟ್‌ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಇತ್ತೀಚೆಗಿನ ಹಠಾತ್‌ ಬೆಳವಣಿಗೆಗಳು ಅವರ ಸ್ಪರ್ಧೆಗೆ ಟಿಕೆಟ್‌ ನೀಡುವುದಕ್ಕೆ ತೊಡಕಾಗಿ ಪರಿಣಮಿಸಿದ್ದು, ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಬದಲಾವಣೆಗೆ ಪಕ್ಷದಲ್ಲೇ ಚಿಂತನೆ ನಡೆಯುತ್ತಿದೆ ಎಂದು ವಿಶ್ವಾಸನೀಯ ಮೂಲಗಳು ಹೇಳುತ್ತಿವೆ. ಪ್ರಸಕ್ತ ನಗರ ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್‌, ಹಿಂದೂ ಸಂಘಟಕ ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಇವರಲ್ಲದೆ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್‌ ಕೆಂಜಿಪಿಲಿ, ಜಿ.ಪಂ. ಮಾಜಿ ಸದಸ್ಯೆ ಆಶಾ ತಿಮ್ಮಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್‌ ಮೆದು ಹೆಸರು ರೇಸ್‌ನಲ್ಲಿ ಇದೆ.

 

ದೈವ ನರ್ತನ ವೇಳೆ ಕುಸಿದು ಬಿದ್ದು ದೈವನರ್ತಕ ಸಾವು: ಕಡಬದಲ್ಲೊಂದು ಹೃದಯ ವಿದ್ರಾವಕ ಘಟನೆ

ಜಿಲ್ಲೆಯ ಆಂತರಿಕ ಅಭಿಪ್ರಾಯ ಸಂಗ್ರಹ ವೇಳೆ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚಣಿಲ ತಿಮ್ಮಪ್ಪ ಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿæೕರಿದಂತೆ ಆಕಾಂಕ್ಷಿಗಳ ಹೆಸರು ರಾಜ್ಯಕ್ಕೆ ರವಾನೆಯಾಗಿದೆ. ಅಂತಿಮವಾಗಿ ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಿದ ಮೂರು ಮಂದಿ ಪಟ್ಟಿಯಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು, ನಗರ ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್‌ ಹಾಗೂ ಅರುಣ್‌ ಕುಮಾರ್‌ ಪುತ್ತಿಲ ಹೆಸರು ಉಲ್ಲೇಖಗೊಂಡಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಈ ಮೂರು ಮಂದಿಯಲ್ಲಿ ಒಬ್ಬರನ್ನು ವರಿಷ್ಠರು ಆಯ್ಕೆ ಮಾಡಬಹುದು ಇಲ್ಲವೇ ಇವರ ಹೊರತಾಗಿ ಬೇರೆಯೇ ಹೆಸರನ್ನೂ ಅಂತಿಮಗೊಳಿಸಬಹುದು ಎನ್ನಲಾಗುತ್ತಿದೆ.

ಅಭ್ಯರ್ಥಿ ಬದಲಾವಣೆಗೆ ಪಟ್ಟು:

ಹಾಲಿ ಶಾಸಕ ಸಂಜೀವ ಮಠಂದೂರು ಮೂರನೇ ಬಾರಿ ಸ್ಪರ್ಧಿಸಲು ಉತ್ಸುಕರಾಗಿದ್ದು, ಅವರ ಉತ್ಸಾಹಕ್ಕೆ ಸ್ವಪಕ್ಷೀಯರೇ ಅಡ್ಡಗಾಲು ಹಾಕುತ್ತಿದ್ದಾರೆ. ಈಗಾಗಲೇ ಶಾಸಕರ ವಿರುದ್ಧ ಅಸಮಾಧಾನ ತೋರ್ಪಡಿಸಿದ ಪಕ್ಷದ ಒಂದು ಬಣ, ಜಾಲ ತಾಣದಲ್ಲಿ ನಡೆಯುತ್ತಿರುವ ಅಭ್ಯರ್ಥಿ ಬದಲಾವಣೆ ಅಭಿಯಾನಕ್ಕೆ ಹಿಂದಿನಿಂದ ಕೈಜೋಡಿಸಿದೆ ಎಂಬ ಆರೋಪ ಕೇಳಿಬರುತ್ತಿದೆ.

ಮಂಗಳೂರಿನಲ್ಲಿ ಶುಕ್ರವಾರ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಮಕ್ಷಮ ನಡೆದ ಪುತ್ತೂರು ಕ್ಷೇತ್ರದ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಬದಲಾವಣೆಗೆ ಪಕ್ಷದ ಪದಾಧಿಕಾರಿಗಳು ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಸಭೆಗೆ ಪುತ್ತೂರು ಶಾಸಕರು ಗೈರಾಗಿದ್ದು, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತರುವ ಭರವಸೆ ದೊರೆತಿದೆ ಎಂದು ಹೇಳಲಾಗಿದೆ.

ಜಗನ್ನಿವಾಸ ರಾವ್‌ ಹೆಸರು ಮುಂಚೂಣಿಗೆ:

ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಕೇಂದ್ರಕ್ಕೆ ಕಳುಹಿಸಿದ ಪಟ್ಟಿಯಲ್ಲಿ ಶಾಸಕರನ್ನು ಹೊರತುಪಡಿಸಿ ಜಗನ್ನಿವಾಸ ರಾವ್‌ ಹೆಸರು ಮುಂಚೂಣಿಯಲ್ಲಿ ಇದೆ ಎಂದು ಹೇಳಲಾಗಿದೆ.

ನಗರ ಪಂಚಾಯ್ತಿ ಸದಸ್ಯರಲ್ಲದೆ, ನಗರ ಬಿಜೆಪಿ ಅಧ್ಯಕ್ಷರಾಗಿರುವ ಇವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಆರ್‌ಎಸ್‌ಎಸ್‌ ಸಕ್ರಿಯ ಕಾರ್ಯಕರ್ತ. ಕೋವಿಡ್‌ ವೇಳೆ 70ಕ್ಕೂ ಅಧಿಕ ಶವಗಳ ಸಂಸ್ಕಾರ ನಡೆಸಿ ಪಕ್ಷದ ಹಿರಿಯರಿಂದ ಪ್ರಶಂಸೆಯನ್ನೂ ಪಡೆದುಕೊಂಡಿದ್ದರು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಾಸ್ತು ಎಂಜಿನಿಯರ್‌ ಆಗಿಯೂ ಕಾರ್ಯನಿರ್ವಹಿಸಿಸುತ್ತಿದ್ದಾರೆ. ಪಕ್ಷದ ವರಿಷ್ಠರು ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ಜಗನ್ನಿವಾಸ ರಾವ್‌ ಹೆಸರು ಮುನ್ನಲೆಗೆ ಬಂದಿದೆ ಎಂದು ಮೂಲಗಳು ಹೇಳುತ್ತಿವೆ.

ಪುತ್ತಿಲ, ಬೊಟ್ಯಾಡಿ ರೇಸ್‌ನಲ್ಲಿ:

ಪುತ್ತಿಲ ಅವರು ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಬಳಿಕ ಶ್ರೀರಾಮ ಸೇನೆಯಲ್ಲಿ ಜವಾಬ್ದಾರಿ ನಿರ್ವಹಿಸಿದವರು. ಪ್ರಸಕ್ತ ಬಿಜೆಪಿ ಪರವಾಗಿ ಮಾತ್ರವಲ್ಲಸಂಘಪರಿವಾರ ಸಂಘಟನೆಗಳಲ್ಲೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ನಿಷ್ಠಾವಂತ ಕಾರ್ಯಕರ್ತ. ಶಾಸಕರ ಬದಲು ಹೊಸ ಅಭ್ಯರ್ಥಿಯಾಗಿ ಇವರಿಗೇ ಟಿಕೆಟ್‌ ನೀಡಬೇಕು ಎನ್ನುವ ಅಭಿಯಾನವನ್ನು ಇವರ ಬೆಂಬಲಿಗರೇ ಹುಟ್ಟುಹಾಕಿದ್ದು, ಇದನ್ನು ಪಕ್ಷದ ವರಿಷ್ಠರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಿಶೋರ್‌ ಕುಮಾರ್‌ ಬೊಟ್ಯಾಡಿ ಅವರು ಮೆಸ್ಕಾಂ ನಿರ್ದೇಶಕರಾಗಿದ್ದು, ಪಕ್ಷದ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಕೂಡ ಇವರ ಹೆಸರು ಪ್ರಸ್ತಾಪಕ್ಕೆ ಬಂದಿದ್ದು, ಸಂಘಪರಿವಾರ ಇವರ ಬೆನ್ನಿಗೆ ನಿಂತಿದೆ. ಈ ಹಿಂದೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದರು. ಮೂಲತಃ ಪುತ್ತೂರಿನವರಾದರೂ ಕಾರ್ಯಕ್ಷೇತ್ರ ಮಂಗಳೂರು,

ಪಕ್ಷದ ಆಗುಹೋಗುಗಳಲ್ಲಿ ಸಕ್ರಿಯರು. ಇವರಿಗೆ ಟಿಕೆಟ್‌ ನೀಡುವಂತೆ ಸಂಘಪರಿವಾರದಿಂದ ಪ್ರಯತ್ನ ನಡೆಯುತ್ತಿದೆ.

ಬಿಲ್ಲವರಿಗೆ ಕನಿಷ್ಠ 10 ಸೀಟ್‌ ಕೊಡಲೇಬೇಕು: ಪ್ರಣವಾನಂದ ಸ್ವಾಮೀಜಿ

ಜಾತಿ ಲೆಕ್ಕಾಚಾರ ಮೀರಿ ಸ್ಥಳೀಯರಿಗೆ ಟಿಕೆಟ್‌ಗೆ ಆಗ್ರಹ

ಮಂಗಳೂರಿನಲ್ಲಿ(Mangaluru) ಶುಕ್ರವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಪುತ್ತೂರು ಕ್ಷೇತ್ರಕ್ಕೆ ಜಾತಿ, ಮತ ಮೀರಿ ಟಿಕೆಟ್‌ ನೀಡಬೇಕು. ಮಾತ್ರವಲ್ಲ ಹೊರಗಿನವರ ಬದಲು ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿಯಲ್ಲಿ ಜಾತಿ ಲೆಕ್ಕಾಚಾರದಲ್ಲಿ ಈ ಬಾರಿ ಟಿಕೆಟ್‌ ನೀಡಬಾರದು. ಪುತ್ತೂರಿನಲ್ಲಿ ಅಭಿವೃದ್ಧಿ ಕಾರ್ಯ ಜತೆಗೆ ಹಿಂದುತ್ವ ಪ್ರಮುಖವಾಗಿದ್ದು, ಇದೇ ಮಾನದಂಡದಲ್ಲಿ ಜಾತಿ ಮೀರಿ ಅರ್ಹರಿಗೆ ಟಿಕೆಟ್‌ ನೀಡಬೇಕು. ಪುತ್ತೂರಲ್ಲೇ ಪಕ್ಷದಲ್ಲಿ ಸಕ್ರಿಯರಾಗಿರುವ, ಸಂಘಪರಿವಾರದಲ್ಲಿ ಗುರುತಿಸಿರುವ ಯಾರಿಗೂ ಟಿಕೆಟ್‌ ನೀಡಿದರೂ ನಾವು ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲವಿಗೆ ಕೆಲಸ ಮಾಡುವುದಾಗಿ ಸಭೆಯಲ್ಲಿ ಒಕ್ಕೊರೊಲಿನಿಂದ ರಾಜ್ಯಾಧ್ಯಕ್ಷರಿಗೆ ಮಾತು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios