ಏಪ್ರಿಲ್ ಮೊದಲ ವಾರದಲ್ಲಿ ಚುನಾವಣೆ ಘೋಷಣೆ: ಮಾಹಿತಿ ನೀಡಿದ ರಾಜ್ಯ ನಾಯಕ
ಪಂಚರತ್ನ ಯೋಜನೆಯನ್ನು ರಾಜ್ಯದ ಜನರು ಸ್ವೀಕರಿಸಿದ್ದು, ಮೈಸೂರಿನಲ್ಲಿ ನಡೆಯುವ ಅಂತಿಮ ಸಾರೋಪ ಸಮಾವೇಶಕ್ಕೆ 10 ಲಕ್ಷ ಜನರನ್ನು ಸೇರಿಸುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಮಾ.21): ಏಪ್ರಿಲ್ ಮೊದಲ ವಾರದಲ್ಲಿ ಚುನಾವಣಾ ದಿನಾಂಕದ ನಿರೀಕ್ಷೆ ಇದೆ. ಪಂಚರತ್ನ ಯೋಜನೆಯನ್ನು ರಾಜ್ಯದ ಜನರು ಸ್ವೀಕರಿಸಿದ್ದು, ಮೈಸೂರಿನಲ್ಲಿ ನಡೆಯುವ ಅಂತಿಮ ಸಾರೋಪ ಸಮಾವೇಶಕ್ಕೆ 10 ಲಕ್ಷ ಜನರನ್ನು ಸೇರಿಸುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಮಾ.26ರಂದು ಮೈಸೂರಿನಲ್ಲಿ ನಡೆಯುವ ಪಂಚರತ್ನ ಯೋಜನೆ ಸಮಾರೋಪ ಸಮಾರಂಭದ ಸಿದ್ಧತೆ ಪರಿಶೀಲನೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚರತ್ನ ಯೋಜನೆಯನ್ನು ಜನರು ಸ್ವೀಕರಿಸಿದ್ದಾರೆ. ಜೆಡಿಎಸ್‌ನಿಂದ ರಾಮರಾಜ್ಯ ಶುರುವಾಗಲಿದೆ. ದಲಿತರ ಹಿಂದುಳಿದವರಿಗೆ ಬಜೆಟ್ ನಲ್ಲಿ ಏನೇನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿವೆ. ಮನೆಗಳನ್ನ ನಿರ್ಮಾಣ ಮಾಡುವುದು ಹಾಗೂ ಸಂಪೂರ್ಣ ರಾಜ್ಯದ್ಯಂತ ನಿರ್ಮಾಣವಾಗಿದೆ ಎಂದು ಬಿಂಬಿತವಾಗಿದೆ. ಇದು ಪೇಪರ್ ನಲ್ಲಿ ಇರುವ ದಾಖಲೆ ಅಷ್ಟೇ. ಇನ್ನೂ ಸಹ ಲಕ್ಷಾಂತರ ಕುಟುಂಬಕ್ಕೆ ಮನೆ ಸೌಲಭ್ಯವೆ ಇಲ್ಲ. ರಾಜ್ಯದ ಪ್ರವಾಸದಲ್ಲಿ ನಾನೇ ಗಮನಿಸಿದ್ದೇನೆ ಎಂದರು.
ರಾಜ್ಯ ರಾಜಕಾರಣಕ್ಕೆ ರಮ್ಯಾ ರೀ ಎಂಟ್ರಿ: ಎರಡು ಕ್ಷೇತ್ರದಲ್ಲಿ ಸ್ಪರ್ಧೆ ನಿರೀಕ್ಷಿತ
10 ಲಕ್ಷ ಜನರನ್ನು ಸೇರಿಸುವ ಸಿದ್ಧತೆ: ಜನತಾ ದಳ ವತಿಯಿಂದ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯುತ್ತದೆ. ಸುಮಾರು 100 ಎಕರೆಯಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆದಿದೆ. ಈ ಒಂದು ಕಾರ್ಯಕ್ರಮವನ್ನ ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಲಿಕ್ಕೆ ಎಲ್ಲರು ಸಹ ಕೈಜೋಡಿಸಿ ಕೆಲಸ ಪ್ರಾರಂಭ ಮಾಡಿದ್ದಾರೆ. ಪಂಚರತ್ನ ಯಾತ್ರೆಗೆ ಆಶೀರ್ವಾದ ಮಾಡಿದ್ದು, ಅಂತಿಮವಾಗಿ ಸಮಾರೋಪ ಸಮಾವೇಶಕ್ಕೆ 10 ಲಕ್ಷ ಜನರನ್ನು ಒಗ್ಗೂಡಿಸುವ ಸಿದ್ಧತೆ ನಡೆಯುತ್ತಿದೆ. ಈ ಒಂದು ಕಾರ್ಯಕ್ರಮ 2023ರ ಚುನಾವಣೆ ಪ್ರಚಾರಕ್ಕೂ ಸಾಕ್ಷಿಯಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಸಾಲ ಮನ್ನಾ ಹಣ ಬಿಡುಗಡೆ ಮಾಡದ ಬಿಜೆಪಿ: ಪಂಚರತ್ನ ಯೋಜನೆ ಜಾರಿಗೆ 2.50 ಲಕ್ಷ ಕೋಟಿ ರೂ. ಹಣ ಬೇಕು. ನನ್ನ ಗುರಿ, ಕನಸು ಸಾಕಾರಗೊಳಿಸಲು ಅವಕಾಶ ಇದೆ. ನಾನು ದಿನಕ್ಕೆ 100 ಕಿ.ಮೀ. ಪ್ರವಾಸ ಮಾಡಿದ್ದೇನೆ. ನನ್ನ ಯೋಜನೆಗೆ ಒಂದು ಅವಕಾಶ ಕೊಡಿ ಅಂತ ಕೇಳಿದ್ದೇನೆ. ಬಹುಮತದ ಸರ್ಕಾರ ಬಾರದೆ ಇದ್ದರೂ ಮುಖ್ಯಮಂತ್ರಿಯಾದೆ. 37 ಶಾಸಕರನ್ನು ಇಟ್ಟುಕೊಂಡು ಕಾಂಗ್ರೆಸ್ ಭಾಗ್ಯಗಳನ್ನು ಮುಂದುವರಿಸಿದೆ. ಇದರ ನಡುವೆಯೂ ಸಾಲ ಮನ್ನಾ ಮಾಡಿದೆ. ಆದರೆ, ಬಿಜೆಪಿಯವರು ಈಗಲೂ ರೈತರ ಸಾಲ ಮನ್ನಾ ಯೋಜನೆಗೆ 1800 ಕೋಟಿ ರೂ. ಕೊಟ್ಟಿಲ್ಲ ಎಂದು ಮಾಹಿತಿ ನೀಡಿದರು.
ಡಬಲ್ ಎಂಜಿನ್ ಸರ್ಕಾರದಿಂದ ಉಪಯೋಗವಿಲ್ಲ: ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್‌ನದ್ದು ಗ್ಯಾರಂಟಿ ಅಲ್ಲ, ಡ್ಯುಪ್ಲಿಕೇಟ್ ಕಾರ್ಡ್: ಕಾಂಗ್ರೆಸ್ ನಾಯಕರು ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಬಿಜೆಪಿಯವರು ಟೀಕೆ, ಪ್ರಶ್ನೆ ಮಾಡಿದ್ದಾರೆ. ಎರಡೂ ಪಕ್ಷಗಳು ಟೀಕೆಗೆ ಮೀಸಲಾಗಿದ್ದಾರೆ. ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಡ್ಯುಪ್ಲಿಕೇಟ್ ಕಾರ್ಡ್. ಗೃಹ ಲಕ್ಷ್ಮಿ ಕಾರ್ಡ್‌ಗೆ 25 ಸಾವಿರ ಕೋಟಿ ರೂ. ಬೇಕು. ಆದರೆ ನನ್ನ ಕಾರ್ಯಕ್ರಮ ಸರ್ಕಾರದ ಆದಾಯ ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಆದ್ದರಿಂದ ಒಂದು ಅವಧಿಯ ಸರ್ಕಾರ ಕೊಡಿ ಅಂತ ಕೇಳುತ್ತಿದ್ದೇನೆ ಎಂದು ಮತದಾರರಲ್ಲಿ ಮನವಿ ಮಾಡಕೊಂಡಿದ್ದೇನೆ ಎಂದರು.
ಅಧಿಕಾರಿಗಳ ಮೂಲಕ ಬಿಜೆಪಿ ಜನ ಸೇರಿಸುತ್ತಿದೆ: ಬಿಜೆಪಿ ನಾಯಕರು ವಿಜಯ ಸಂಕಲ್ಪ ಯಾತ್ರೆಗೆ ಫಲಾನುಭವಿಗಳನ್ನು ಕರೆದುಕೊಂಡು ಬರುತ್ತಿದ್ದಾರೆ. ಸರ್ಕಾರದ ಅಧಿಕಾರಿಗಳ ಮೂಲಕ ಜನ ಕರೆಸುತ್ತಿದ್ದಾರೆ. ಕಳೆದ ಎಂಟತ್ತು ವರ್ಷದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಸಮಸ್ಯೆ ಇರುವ ಜನರು ನನ್ನನ್ನು ನಿರಂತರ ಸಂಪರ್ಕಿಸುತ್ತಿದ್ದಾರೆ. ಇದನ್ನ ಮನಗಂಡು ಪಂಚರತ್ನ ಕಾರ್ಯಕ್ರಮದಲ್ಲಿ ಅಳವಡಿಸಿದ್ದೇವೆ. ಉರಿಗೌಡ ನಂಜೇಗೌಡ ಚರ್ಚೆ ಮೂಲಕ ಹುಡುಗಾಟಿಕೆ ಆಡುತ್ತಿದ್ದವರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬುದ್ದಿ ಹೇಳಿದ್ದಾರೆ. ಇದಕ್ಕಾಗಿ ನಾನು ಶ್ರೀಗಳನ್ನು ಅಭಿನಂದಿಸುತ್ತೇನೆ. ಈ ಬಗ್ಗೆ ನಾನು ಸಹಾ ಏನು ಮಾತನಾಡುವುದಿಲ್ಲ ಎಂದರು.
ಮೈಸೂರು: ಪಂಚರತ್ನ ರಥಯಾತ್ರೆ ವೇಳೆ ತಂದೆಯ ಅನಾರೋಗ್ಯ ನೆನೆದು ಎಚ್‌ಡಿಕೆ ಭಾವುಕ ಮಾತು
ದೇವೇಗೌಡರು ಆರೊಗ್ಯವಾಗಿದ್ದಾರೆ: ಎಚ್ ಡಿ ದೇವೇಗೌಡರ ಆರೋಗ್ಯ ಕ್ಷೀಣಿಸಿಲ್ಲ. ಮನುಷ್ಯತ್ವ ಇರುವವರಿಗೆ ಕಣ್ಣೀರು ಬರುತ್ತದೆ. ಕಟುಕರಿಗೆ ಕಣ್ಣೀರು ಬರುವುದಿಲ್ಲ. ಕಣ್ಣೀರು ಯಾವುದೇ ಕಾರಣಕ್ಕೂ ವೀಕ್‌ನೆಸ್ ಅಲ್ಲ. ನನ್ನ ಕಣ್ಣೀರು ಮನದಾಳದಿಂದ ಬಂದಿದೆ ಅಂತ ಜನ ಎಂದುಕೊಳ್ಳುತ್ತಾರೆ ಎನ್ನುವ ಮೂಲಕ ಕಣ್ಣೀರು ಹಾಕಿದ್ದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ.