ಉದ್ಧವ್ ಠಾಕ್ರೆ ವಿರುದ್ಧ ಅಂತಿಮ ಅಸ್ತ್ರ ಪ್ರಯೋಗ: ಶಿವಸೇನೆ ಹಕ್ಕುದಾರಿಕೆ ಕೋರಿ ಆಯೋಗದ ಮೆಟ್ಟಿಲೇರಿದ ಶಿಂಧೆ
Eknath Shinde vs Uddhav Thackeray: ಏಕನಾಥ ಶಿಂಧೆ ಶಿವಸೇನೆಯನ್ನು ಇಬ್ಬಾಗ ಮಾಡಿ ಬಿಜೆಪಿ ಜತೆ ಕೈಜೋಡಿಸಿ ಮುಖ್ಯಮಂತ್ರಿ ಗಾದಿಗೆ ಏರಿದ್ದಾಯಿತು. ಇದೀಗ ಉದ್ಧವ್ ಠಾಕ್ರೆ ರಾಜಕೀಯ ಭವಿಷ್ಯಕ್ಕೆ ಅಂತಿಮ ಕೊಡಲಿ ಪೆಟ್ಟು ನೀಡಲು ಮುಂದಾಗಿದ್ದು, ಶಿವಸೇನೆಯ ಹಕ್ಕುದಾರಿಕೆಯನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿ ಮಹಾ ವಿಕಾಸ ಅಘಾಢಿಯನ್ನು ಬುಡಮೇಲು ಮಾಡಿ ಮುಖ್ಯಮಂತ್ರಿ ಪದವಿಗೇರಿದ ಏಕನಾಥ ಶಿಂಧೇ, ಇದೀಗ ಉದ್ಧವ್ ಠಾಕ್ರೆ ವಿರುದ್ಧ ಕಡೆಯ ಅಸ್ತ್ರ ಪ್ರಯೋಗಿಸಿದ್ದಾರೆ. ಶಿವಸೇನೆಯ ಬಹುತೇಕ ನಾಯಕರು ತಮ್ಮ ಕಡೆಗಿದ್ದು, ಪಕ್ಷದ ಹಕ್ಕು ತಮಗೇ ಸೇರಬೇಕು ಎಂದು ಶಿಂಧೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಉದ್ಧವ್ ಠಾಕ್ರೆ ಅವರ ಜೊತೆಗಿದ್ದ ಬಹುತೇಕರು ಏಕನಾಥ ಶಿಂಧೆ ಬಣವನ್ನು ಸೇರಿಕೊಂಡಿದ್ದಾರೆ. 19 ಲೋಕಸಭಾ ಸದಸ್ಯರ ಪೈಕಿ 12 ಜನ ಶಿಂಧೆ ಜೊತೆಗೆ ನಿಂತಿದ್ದು, ಅಲ್ಲೂ ಠಾಕ್ರೆಗೆ ಹಿನ್ನಡೆಯಾಗಿದೆ. ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಪ್ರಕಾರ, ಏಕನಾಥ ಶಿಂಧೆ ಅವರ ಬಳಿ ಪಕ್ಷದ ಮೆಜಾರಿಟಿ ಸದಸ್ಯರಿದ್ದಾರೆ. ಈಗಾಗಲೇ ಉದ್ಧವ್ ಠಾಕ್ರೆ ರಚಿಸಿದ್ದ ಪಕ್ಷದ ಸಮಿತಿಯನ್ನು ವಜಾಗೊಳಿಸಿ ಹೊಸ ಸಮಿತಿಯನ್ನು ಪಕ್ಷ ರಚಿಸಿದೆ, ಎಂದು ತಿಳಿಸಲಾಗಿದೆ.
ಸೋಮವಾರ ಶಿಂಧೆ ಬಣದ ಸದಸ್ಯರು ರಾಷ್ಟ್ರೀಯ ಕಾರ್ಯಕಾರಿಣಿ ನಡೆಸಲಾಗಿದ್ದು, ಏಕನಾಥ ಶಿಂಧೆ ಅವರನ್ನು ಪಕ್ಷದ ಮುಖ್ಯ ನಾಯಕನನ್ನಾಗಿ ನೇಮಿಸಲಾಗಿದೆ. ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಇದೇ ಕಾರಣಕ್ಕಾಗಿ ಎರಡು ದಿನ ಮುನ್ನವೇ ಶಿಂಧೆ ಅವರನ್ನು ಅಧಿಕೃತ ನಾಯಕನನ್ನಾಗಿ ಪಕ್ಷ ನೇಮಿಸಿದೆ.
ಶಿಂಧೆ ಬಣ ಪಕ್ಷದ ಹಕ್ಕನ್ನು ಕೋರಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಿದೆ ಎಂಬ ನಿರೀಕ್ಷೆಯಿದ್ದ ಠಾಕ್ರೆಯವರ ಶಿವಸೇನೆ ಬಣ ಈಗಾಗಲೇ ಚುನಾವಣಾ ಆಯೋಗದ ಮುಂದೆ ಕೇವಿಯಟ್ ಸಲ್ಲಿಸಿದೆ. ಶಿಂಧೆ ಅಥವಾ ಇನ್ಯಾವುದೇ ವ್ಯಕ್ತಿಯಿಂದ ಶಿವಸೇನೆಯ ಅಧಿಕೃತ ಹಕ್ಕು ಕೋರಿ ಅರ್ಜಿ ಬಂದರೆ ಠಾಕ್ರೆಯವರ ಪರ ವಾದ ಆಲಿಸದೇ ಆದೇಶಿಸುವಂತಿಲ್ಲ ಎಂದು ಕೇವಿಯಟ್ ಸಲ್ಲಿಸಿದೆ. "ಯಾವುದೇ ಪಕ್ಷ ಅಥವಾ ವ್ಯಕ್ತಿ ನಿಜವಾದ ಶಿವಸೇನೆ ತಮ್ಮದು ಎಂದು ಅರ್ಜಿ ಸಲ್ಲಿಸಿದರೆ, ನಮ್ಮ ಪರ ವಾದ ಆಲಿಸಿ ನಂತರ ನಿರ್ಧರಿಸಬೇಕು. ಅದಕ್ಕೂ ಮುನ್ನ ಯಾವುದೇ ಆದೇಶ ಹೊರಡಿಸಬಾರದು," ಎಂದು ಠಾಕ್ರೆ ಪರ ವಕೀಲರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜುಲೈ 20ಕ್ಕೆ ಮಹಾರಾಷ್ಟ್ರ ನೂತನ ಸರ್ಕಾರದ ಮೊದಲ ಕ್ಯಾಬಿನೆಟ್ ವಿಸ್ತರಣೆ ಸಾಧ್ಯತೆ!
ಠಾಕ್ರೆಯ ವಿರುದ್ಧ ಬಂಡಾಯ:
ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಯಾರೂ ಊಹಿಸಲಾರದಂತ ರಾಜಕೀಯ ಬೆಳವಣಿಗೆ ಬಿರುಸುಗೊಂಡಿತು. ಉದ್ಧವ್ ಠಾಕ್ರೆ ಆಪ್ತ ಬಣದಲ್ಲಿದ್ದ ಏಕನಾಥ ಶಿಂಧೆ ಇದ್ದಕ್ಕಿದ್ದಂತೆ ಠಾಕ್ರೆ ವಿರುದ್ಧ ಸಮರ ಸಾರಿದ್ದರು. ಮಹಾರಾಷ್ಟ್ರದಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಶಿವಸೇನೆಯ ವಿರುದ್ಧ ಶಿಂಧೆ ಬಣದ ಸದಸ್ಯರು ಅಡ್ಡಮತದಾನ ಮಾಡುವ ಮೂಲಕ ಶೀತಲ ಸಮರವನ್ನು ಮುನ್ನೆಲೆಗೆ ತಂದಿದ್ದರು. ಅದಾದ ನಂತರ ಶಿಂಧೆ ಬಣ ರೆಸಾರ್ಟ್ ರಾಜಕಾರಣ ಆರಂಭಿಸಿತ್ತು. ಉದ್ಧವ್ ಠಾಕ್ರೆ ಮೊದಲು ಬೆದರಿಕೆಯ ತಂತ್ರ ಪ್ರಯೋಗಿಸಿದರು, ನಂತರ ಒತ್ತಡ ತಂತ್ರ, ಕಡೆಗೆ ಮನವಿ ಮಾಡಿದರು. ಆದರೆ ಯಾವುದಕ್ಕೂ ಬಗ್ಗದ ಶಿಂಧೆ, ನಿಜವಾದ ಶಿವ ಸೈನಿಕರು ನಾವು. ಉದ್ಧವ್ ಠಾಕ್ರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಮೂಲಕ ಭಾಳಾ ಸಾಹೇಬ ಠಾಕ್ರೆಯವರ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಉದ್ಧವ್ ಠಾಕ್ರೆಗೆ ಮತ್ತೊಂದು ಶಾಕ್, ಶಿವಸೇನೆಯ ವಕ್ತಾರೆ ಶಿಂಧೆ ಬಣಕ್ಕೆ!
ನಂತರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿಂಧೆ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಇದಕ್ಕೂ ಮುನ್ನ ಮುಖ್ಯಮಂತ್ರಿ ಸ್ಥಾನವನ್ನು ಶಿಂಧೆ ಅವರಿಗೆ ಕೊಡಲು ಸಿದ್ಧನಿದ್ದೇನೆ ಎಂದೂ ಉದ್ಧವ್ ಠಾಕ್ರೆ ಹೇಳಿದ್ದರು. ಆದರೆ ಯಾವ ಅಂಶವೂ ಶಿಂಧೆ ಅವರ ಮನವೊಲಿಸಲು ಸಾಧ್ಯವಾಗಲಿಲ್ಲ. ಇದೀಗ ಭಾಳಾ ಸಾಹೇಬರು ಕಟ್ಟಿದ ಶಿವಸೇನೆ ಪಕ್ಷ ಅವರ ಮಗ ಉದ್ಧವ್ ಠಾಕ್ರೆ ಕೈಯಿಂದ ದೂರಾಗುವ ಸಾಧ್ಯತೆಯಿದೆ.