Goa Congress MLAs joined BJP: ಗೋವಾ ಕಾಂಗ್ರೆಸ್‌ನ ಎಂಟು ಶಾಸಕರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಸೇರ್ಪಡೆಯಾದ ನಂತರ ಮಾತನಾಡಿದ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಬಿಜೆಪಿ ಸೇರಿರುವುದಾಗಿ ತಿಳಿಸಿದ್ದಾರೆ.

ಪಣಜಿ: ಕಾಂಗ್ರೆಸ್‌ನಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದ್ದು ಗೋವಾ ಕಾಂಗ್ರೆಸ್‌ನ ಎಂಟು ಮಂದಿ ಶಾಸಕರು ಮತ್ತು ಮಾಜಿ ಮುಖ್ಯಮಂತ್ರಿ Digambar Kamat ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆಯೇ ದಿಗಂಬರ್‌ ಕಾಮತ್‌ ಕಾಂಗ್ರೆಸ್‌ನ ಜವಾಬ್ದಾರಿಗಳಿಂದ ಹಿಂದೆ ಸರಿದಿದ್ದರು. ತಿಂಗಳುಗಳ ಹಿಂದೆಯೇ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು. ಆದರೀಗ ತಮ್ಮ ಜೊತೆ ಇನ್ನೂ ಏಳು ಶಾಸಕರ ಜೊತೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ್‌ ಶೇಟ್‌ ತಾನಾವಡೆ ಇಂದು ಬೆಳಗ್ಗೆ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು. ಮಾಜಿ ಮುಖ್ಯಮಂತ್ರಿ ದಿಗಂಬರ್‌ ಕಾಮತ್‌, ವಿರೋಧ ಪಕ್ಷದ ನಾಯಕ ಮೈಕೆಲ್‌ ಲೋಬೊ ಸೇರಿ ಒಟ್ಟೂ ಎಂಟು ಶಾಸಕರು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದರು. ಗೋವಾದಲ್ಲಿ ಒಟ್ಟೂ 11 ಕಾಂಗ್ರೆಸ್‌ ಶಾಸಕರಿದ್ದು, ಮೂರು ಶಾಸಕರು ಮಾತ್ರ ಕಾಂಗ್ರೆಸ್‌ನಲ್ಲಿ ಮುಂದುವರೆಯಲಿದ್ದಾರೆ. 

ದಿಗಂಬರ್‌ ಕಾಮತ್‌, ಮೈಕೆಲ್‌ ಲೋಬೊ, ದೆಲಿಲಾಹ್‌ ಲೋಬೊ, ರಾಜೇಶ್‌ ಫಾಲ್ದೆಸಾಯಿ, ಕೇದಾರ ನಾಯ್ಕ್‌, ಸಂಕಲ್ಪ್‌ ಅಮೋನ್ಕರ್‌, ಅಲೆಕ್ಸಿಯೊ ಸಿಕ್ವೆರಾ ಮತ್ತು ರುಡೊಲ್ಫ್‌ ಫರ್ನಾಂಡೆಸ್‌ ಗೋವಾ ಬಿಜೆಪಿ ಸೇರಿರುವ ಶಾಸಕರು. ಬುಧವಾರ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ರನ್ನು ಭೇಟಿಯಾಗಿ ಅವರ ಸಮ್ಮುಖದಲ್ಲೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದಿಗಂಬರ್‌ ಕಾಮತ್‌ ಬಿಜೆಪಿ ಸೇರ್ಪಡೆಯಾದ ನಂತರ ಮಾತನಾಡಿದ್ದು "ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲ ಪಡಿಸಲು ಬಿಜೆಪಿಗೆ ಸೇರಿದ್ದೇವೆ," ಎಂದು ಹೇಳಿದ್ದಾರೆ. 

ಒಂದೆಡೆ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್‌ ಜೋಡೊ ಯಾತ್ರೆ ಮಾಡುತ್ತಿದ್ದರೆ, ಕಾಂಗ್ರೆಸ್ ಶಾಸಕರು ಬಿಜೆಪಿ ಜೋಡೊ ಯಾತ್ರೆ ಮಾಡುತ್ತಿದ್ಧಾರೆ. ಗೋವಾ ಚುನಾವಣೆ ಸಂದರ್ಭದಲ್ಲಿ ರಾಹುಲ್‌ ಗಾಂಧಿಯವರ ಕಾರಣದಿಂದಲೇ ಜನ ಕಾಂಗ್ರೆಸ್‌ ಮತ ಹಾಕುತ್ತಿಲ್ಲ ಎಂಬ ಮಾತನ್ನು ಕಾಂಗ್ರೆಸ್‌ ಮೂಲಗಳೇ ಹೇಳಿದ್ದವು. ರಾಹುಲ್‌ ಗಾಂಧಿಯವರ ವರ್ಚಸ್ಸು ಗೋವಾದಲ್ಲಿ ಅಷ್ಟಾಗಿಲ್ಲದ ಹಿನ್ನೆಲೆ ಕಾಂಗ್ರೆಸ್‌ ಸೋಲು ಅನುಭವಿಸಿತು ಎಂದು ನಾಯಕರೂ ನಂಬಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ್ತೊಂದು ಶಾಕಿಂಗ್‌ ಸುದ್ದಿ: ಮಾಜಿ ಸಿಎಂ ಸೇರಿ Goa Congressನ 8 ಶಾಸಕರು ಬಿಜೆಪಿ ಸೇರ್ಪಡೆ

ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ: 

ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ, ಸಮಾಜವಾದಿ ಪಕ್ಷಕ್ಕೆ ತೆರಳಿದ್ದರು. ಸಿಬಲ್ ಅವರು ಎಸ್‌ಪಿ ಟಿಕೆಟ್‌ನಲ್ಲಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಸಿಬಲ್ ಬುಧವಾರ ಲಕ್ನೋದಲ್ಲಿ ನಾಮಪತ್ರ ಸಲ್ಲಿಸಿದ್ದರು. ಇದೇ ವೇಳೆ ಮೇ 16ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದರು. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ರಾಮ್ ಗೋಪಾಲ್ ಯಾದವ್ ಕೂಡ ಸಿಬಲ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು.

2016 ರಲ್ಲಿ, ಆಗಿನ ಆಡಳಿತಾರೂಢ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುಪಿಯಿಂದ ರಾಜ್ಯಸಭೆಗೆ ಸಿಬಲ್ ಆಯ್ಕೆಯಾದರು. ಕಪಿಲ್ ಸಿಬಲ್ ಬಗ್ಗೆ, ಅಜಂ ಖಾನ್ ಅವರ ನಿರ್ಲಕ್ಷ್ಯ ಮತ್ತು ಬಿಡುಗಡೆಯ ನಂತರದ ಗೆಸ್ಚರ್ ನಡುವಿನ ಈ ಅವಕಾಶವನ್ನು ಅಖಿಲೇಶ್ ಬಳಸಿಕೊಳ್ಳಲು ಬಯಸುತ್ತಾರೆ ಎಂದು ಭಾವಿಸುತ್ತೇನೆ. ನನ್ನ ನಾಶದಲ್ಲಿ ನನ್ನ ಪ್ರೀತಿಪಾತ್ರರ ಕೈವಾಡವಿದೆ ಎಂದು ಜೈಲಿನಿಂದ ಹೊರಬಂದ ನಂತರ ಅಜಂ ಖಾನ್ ಹೇಳಿದ್ದರು.

ಇದನ್ನೂ ಓದಿ: ನಡೆಯಲಿಲ್ಲ ಉದಯ್‌ಪುರ್‌ ಚಿಂತನ ಶಿಬಿರದ ಜಾದೂ, ಹಾರ್ದಿಕ್ ಪಟೇಲ್‌ ಕಾಂಗ್ರೆಸ್‌ಗೆ ರಾಜೀನಾಮೆ!

ಇದೇ ರೀತಿ ಗುಜರಾತ್‌ನ ಫೈರ್‌ ಬ್ರ್ಯಾಂಡ್‌ ಪಾಟಿದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ರಾಜೀನಾಮೆ ನೀಡಿದ್ದರು. ಉದಯ್‌ಪುರದಲ್ಲಿ ನಡೆದ ಚಿಂತನ್‌ ಶಿವಿರ್‌ ಮಂಥನ ಕಾರ್ಯಕ್ರಮದ ಬೆನ್ನಲ್ಲೇ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದರು. ಕರ್ನಾಟಕದಲ್ಲಿ ಬ್ರಿಜೇಶ್‌ ಕಾಳಪ್ಪ ಕಾಂಗ್ರೆಸ್‌ ತೊರೆದು ಆಮ್‌ ಆದ್ಮಿ ಪಕ್ಷ ಸೇರಿದ್ದಾರೆ. ಸೋನಿಯಾ ಗಾಂಧಿಯವರ ಆಪ್ತ ಅನಿಸಿಕೊಂಡಿದ್ದ ಗುಲಾಂ ನಬಿ ಆಜಾದ್‌ ಸಹ ರಾಹುಲ್‌ ಗಾಂಧಿ ವಿರುದ್ಧ ಆಕ್ರೋಶಭರಿತ ಪತ್ರ ಬರೆದು ಪಕ್ಷ ತೊರೆದರು. ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ ತೊರೆದು ಒಂದು ಗಂಟೆಯೊಳಗೆ ಬಿಜೆಪಿಗೆ ಸೇರ್ಪಡೆಯಾದರು. ಜ್ಯೋತಿರಾದಿತ್ಯ ಸಿಂಧಿಯಾ, ವಿಕ್ರಮಾದಿತ್ಯ ಸಿಂಗ್‌, ಸಿಎಂ ಇಬ್ರಾಹಿಂ, ಹೀಗೇ ಕಾಂಗ್ರೆಸ್‌ ತೊರೆದು ಹೋದವರ ಪಟ್ಟಿ ದೊಡ್ಡದೇ ಇದೆ. ಈ ಪಕ್ಷಾಂತರ ಪರ್ವ ಇಲ್ಲಿಗೇ ಮುಗಿಯುವಂತೆಯೂ ಕಾಣುತ್ತಿಲ್ಲ. ಯಾಕೆಂದರೆ ಪಕ್ಷದ ನಾಯಕತ್ವದ ಮೇಲೆ ಹಲವು ಹಿರಿಯ ನಾಯಕರಿಗೆ ಈಗಲೂ ಬೇಸರವಿದೆ. ಒಟ್ಟಿನಲ್ಲಿ ಒಂದೆಡೆ ಕಾಂಗ್ರೆಸ್‌ ಭಾರತ್‌ ಜೋಡೊ ಯಾತ್ರೆ ಮಾಡುತ್ತಿದ್ದರೆ, ಪಕ್ಷದ ಹಿರಿಯ ನಾಯಕರು ಬಿಜೆಪಿ ಜೋಡೊ ಯಾತ್ರೆ ಮಾಡುತ್ತಿದ್ದಾರೆ.