Asianet Suvarna News Asianet Suvarna News

ನಿರ್ಮಲಾ ಸೀತಾರಾಮನ್‌ ಜಾದು, ಸಿದ್ದರಾಮಯ್ಯ ಬಜೆಟ್ ಟೀಕೆಗೆ ಸದಾನಂದಗೌಡ ತಿರುಗೇಟು

“ಆತ್ಮನಿರ್ಭರ್‌ ಬಜೆಟ್‌”ಗೆ ಕೇಂದ್ರ ಸಚಿವ ಸದಾನಂದ ಗೌಡ ಸ್ವಾಗತಿಸಿದ್ದು, ಕೊರೋನಾ ಸಂಕಷ್ಟದ ನಡುವೆಯೂ ನಿರ್ಮಲಾ ಸೀತಾರಾಮನ್‌ ಜಾದು ಎಂದಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಬಜೆಟ್ ಟೀಕೆಗೆ ತಿರುಗೇಟು ಕೊಟ್ಟಿದ್ದಾರೆ.

DV Sadananda gowda Hits back at Siddaramaiah Statement on union budget 2021 rbj
Author
Bengaluru, First Published Feb 1, 2021, 8:36 PM IST

ನವದೆಹಲಿ, (ಫೆ.01): ಕೊರೋನಾದಂತಹ ಸಾಂಕ್ರಾಮಿಕ ರೋಗವು ತಂದೊಡ್ಡಿರುವ ಆರ್ಥಕ ಸಂಕಷ್ಟದ ಮಧ್ಯೆಯೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅತ್ಯುತ್ತಮವಾದ ಬಜೆಟ್‌ ಮಂಡಿಸಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ತಿಳಿಸಿದ್ದಾರೆ.

ಬಜೆಟ್‌ ನಂತರ ಸುದ್ದಿಗಾರರೊಂದಿವೆ ಮಾತನಾಡಿದ ಸಚಿವರು, ಆಯವ್ಯಯವು ತಾತ್ಕಾಲಿಕ ಅವಶ್ಯಕತೆಗಳ ಜೊತೆಗೇ ದೇಶವನ್ನು ಅಭಿವೃದ್ಧಿ ಪಥದ ಮೇಲೆ ಕೊಂಡೊಯ್ಯುವ ದೂರದೃಷ್ಟಿ ಪ್ರಸ್ತಾವನೆಗಳನ್ನು ಒಳಗೊಂಡಿದೆ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳನ್ನೂ ಸ್ವಾವಲಂಬಿಯಾಗಿ ರೂಪಿಸುವ “ಆತ್ಮನಿರ್ಭರ್ ಬಜೆಟ್”‌ ಇದಾಗಿದೆ, ಹಣಕಾಸು ಸಚಿವರಿಗೂ ಮತ್ತು ಅವರಿಗೆ ಮಾರ್ಗದರ್ಶನ ಮಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.

ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 5.54 ಲಕ್ಷ ಕೋಟಿ ರೂಪಾಯಿ ಕ್ಯಾಪಿಟಲ್‌ ಎಕ್ಸ್ಪೆಂಡಿಚರ್‌ ಮಾಡಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 34ರಷ್ಟು ಜಾಸ್ತಿ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021: ಸಿದ್ದರಾಮಯ್ಯನವರ ಫಸ್ಟ್ ರಿಯಾಕ್ಷನ್..!

ಯಾವುದೇ ಒಂದು ದೇಶದ ಅಭಿವೃದ್ಧಿಯಲ್ಲಿ ರಸ್ತೆ ಹಾಗೂ ರೇಲ್ವೆ ಸಂಪರ್ಕ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಈ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಭೂಸಾರಿಗೆ ಇಲಾಖೆಗೆ 1.18 ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿದೆ. ಹಾಗೆಯೇ ರೇಲ್ವೆ ಇಲಾಖೆಗೆ 1.10 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಪ್ರತ್ಯೇಕ ಸರಕುಸಾಗಣೆ ಕಾರಿಡಾರುಗಳ ಅಭಿವೃದ್ಧಿ ಪಡಿಸಲಾಗುತ್ತಿದೆ. ಹಾಗೆಯೇ ಎಲ್ಲ ರೈಲು ಮಾರ್ಗಗಳನ್ನು ವಿದ್ಯುದ್ಧೀಕರಣ ಮಾಡಲು ಆಯವ್ಯಯದಲ್ಲಿ ಪ್ರಸ್ತಾವನೆಗಳು ಇವೆ ಎಂದು ಸದಾನಂದ ಗೌಡ ತಿಳಿಸಿದರು.

ದೇಶದ 13 ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು 1.97 ಕೋಟಿ ರೂಪಾಯಿ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಘೋಷಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೂಡಾ ಸಂಪೂರ್ಣ ಸ್ವಾವಲಂಬನೆ ಸಾಧಿಸಲು ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ. ಈ ಸಲ ಆರೋಗ್ಯ ಇಲಾಖೆಯ ಅನುದಾನ 2.24 ಕೋಟಿ ರೂಪಾಯಿ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 137ರಷ್ಟು ಹೆಚ್ಚು. ಆರೋಗ್ಯ ವಲಯದ ವಿಶೇಷ ಯೋಜನೆಗಳಿಗಾಗಿ 64,180 ಕೋಟಿ ರೂ ಒದಗಿಸಲಾಗಿದೆ ಎಂದು ವಿವರಿಸಿದರು.

ಎಲ್ಲರಿಗೂ ಕೋವಿಡ್‌ ಲಸಿಕೆ ಒದಗಿಸಲು ಮೋದಿ ನೇತೃತ್ವದ ನಮ್ಮ ಸರ್ಕಾರವು ಕಟಿಬದ್ಧವಾಗಿದೆ. ಕೋವಿಡ್‌ ಲಸಿಕಾ ಅಭಿಯಾನಕ್ಕಾಗಿ ಈ ವರ್ಷ 35,000 ಕೋಟಿ ರೂಪಾಯಿ ಒದಗಿಸಲಾಗಿದ್ದು ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಉಂಟಾದರೆ ಅದನ್ನೂ ಒದಗಿಸಲಾಗುವುದು ಎಂದು ಹಣಕಾಸು ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

'ಅತ್ಮನಿರ್ಭರ ಭಾರತ' ಹೆಸರಲ್ಲಿ ಆತ್ಮವಂಚನೆಯ ಬಜೆಟ್‌'

ದಕ್ಷೀಣ ಭಾರತದ ಹಲವು ರೇಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಂದ ರಾಜ್ಯಕ್ಕೆ ಅನುಕೂಲವಾಗಿದೆ. ಬೆಂಗಳೂರು ಮೆಟ್ರೋ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಬೇಕೆಂಬ ಬೇಡಿಕೆಗೆ ವಿತ್ತ ಸಚಿವರು ಸ್ಪಂದಿಸಿದ್ದಾರೆ. ಮೆಟ್ರೋ ಯೋಜನೆಯ 2A ಮತ್ತು d 2B ಹಂತದ 58.19 ಕಿಮೀ ಮಾರ್ಗವನ್ನು ಪೂರ್ಣಗೊಳಿಸಲು 14,788 ಕೋಟಿ ರೂಪಾಯಿ ಒದಗಿಸಿರುವುದು ಶ್ಲಾಘನೀಯ. ಅವರಿಗೆ ಧನ್ಯವಾದಗಳು ಎಂದರು.

ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಡಿವಿಎಸ್
ಇದೆ ವೇಳೆ ಕೇಂದ್ರದ ಬಜೆಟ್ “ಆತ್ಮನಿರ್ಭರ್‌” ಅಲ್ಲ “ಆತ್ಮಬರ್ಬರ” ಎಂದಿರುವ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಸದಾನಂದಗೌಡ ತರಾಟಗೆ ತೆಗೆದುಕೊಂಡಿದ್ದು, ಹತ್ತಾರು ಬಾರಿ ರಾಜ್ಯ ಬಜೆಟ್‌ ಮಂಡಿಸಿರುವ ಕಾಂಗ್ರೆಸ್‌ ನಾಯಕರಿಗೆ “ತೆರಿಗೆ ಯಾವುದು..? ಸೆಸ್‌ ಯಾವುದು..? ಕಸ್ಟಮ್ಸ್‌ ಡ್ಯೂಟಿ ಯಾವುದು..? ಎಂಬುದರ ವ್ಯತ್ಯಾಸ ಗೊತ್ತಿಲ್ಲದಿರುವು ಆಶ್ಚರ್ಯವಾಗುತ್ತದೆ ಎಂದು ಟಾಂಗ್ ಕೊಟ್ಟರು.

ತಾವು ಅಧಿಕಾರದಲ್ಲಿದ್ದಾಗ ರೈತರ ಏಳ್ಗೆಗೆ ಏನೂ ಮಾಡದ ಕಾಂಗ್ರೆಸ್ಸಿಗರು ಈಗ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ರೈತರ ಬಗ್ಗೆ ಕಾಂಗ್ರೆಸ್‌ ಸರ್ಕಾರ ಏನು ಮಾಡಿತು ಮತ್ತು ಮೋದಿ ಸರ್ಕಾರ ಏನು ಮಾಡಿದೆ ಎಂಬ ಬಗ್ಗೆ ಹಣಕಾಸು ಸಚಿವರು ಒಂದಿಷ್ಟು ಮಾಹಿತಿ ನೀಡಿದ್ದಾರೆ. ಕಾಂಗ್ರಸ್‌ ಆಡಳಿತದ ಕೊನೆಯ ವರ್ಷ ಅಂದರೆ 2013-14ರಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆ ಮೂಲಕ ಕೇಂದ್ರ ಸರ್ಕಾರವು ರೈತರಿಂದ 33878 ಕೋಟಿ ರೂ ಮೌಲ್ಯದ ಗೋಧಿ ಖರೀದಿಸಿತ್ತು. ಅದೇ ನಮ್ಮ ಮೋದಿ ಸರ್ಕಾರ ಕಳೆದ ಹಣಕಾಸು ವರ್ಷದಲ್ಲಿ 52,802 ಕೋಟಿ ರೂ ಗೋಧಿ ಖರೀಧಿಸಿದೆ. ಈ ವರ್ಷ (ಮಾರ್ಚ್‌ ವರೆಗೆ) 75000 ಕೋಟಿ ರೂ ಮೌಲ್ಯದ ಗೋಧಿ ಖರೀದಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು.

ಭತ್ತಕ್ಕೆ ಸಂಬಂಧಿಸಿ ಹೇಳುವುದಾದರೆ ಕಾಂಗ್ರೆಸ್‌ ಸರ್ಕಾರ 2013-14ರಲ್ಲಿ 63,928 ಕೋಟಿ ರೂ ವ್ಯಯಿಸಿತ್ತು. ನಾವು 2019-20ರಲ್ಲಿ 1,41,930 ಕೋಟಿ ರೂ ಮೊತ್ತದ ಭತ್ತ ಖರೀದಿಸಿದ್ದೇವೆ. ಈ ವರ್ಷ ಮಾರ್ಚ್‌ ವರೆಗೆ 1.71 ಲಕ್ಷ ಕೋಟಿ ರೂ ಭತ್ತ ಖರೀದಿಸುತ್ತಿದ್ದೇವೆ. ಇನ್ನು ಬೇಳೆಕಾಳಿನ ಆವಕಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಮ್ಮ ಸರ್ಕಾರದ ಸಾಧನೆಗೂ ಕಾಂಗ್ರೆಸ್ಸಿನದಕ್ಕೂ ಹೋಲಿಕೆಯೇ ಇಲ್ಲ. 2013-14ರಲ್ಲಿ ಕಾಂಗ್ರೆಸ್‌ ಸರ್ಕಾರ 236 ಕೋಟಿ ರೂಪಾಯಿ ಮೌಲ್ಯದ ಬೇಳೆಕಾಳು ಖರೀದಿಸಿತ್ತು. ನಮ್ಮ ಸರ್ಕಾರ 2019-20ರಲ್ಲಿ 8,285 ಕೋಟಿ ಮೌಲ್ಯದ ಬೇಳೆಕಾಳು ಖರೀದಿಸಿದೆ ಎಂದು ಹೇಳಿದರು.
 
2020-21ರಲ್ಲಿ10,530 ಕೋಟಿ ಮೌಲ್ಯದ ಬೇಳೆಕಾಳು ಖರೀದಿಸುತ್ತಿದ್ದೇವೆ. ಈ ಅಂಕಿ-ಅಂಶಗಳಿಂದ ಯಾರು ನಿಜವಾಗಿಯೂ ರೈತರ ಪರ ಇದ್ದಾರೆ ಎಂಬುದು ಸುಲಭವಾಗಿ ತಿಳಿಯುತ್ತದೆ ಎಂದು ಸದಾನಂದ ಗೌಡ ಹೇಳಿದರು.

Follow Us:
Download App:
  • android
  • ios