ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನದ ಹಿಂದೆ ನಡೆದ 'ಅಪಾರ್ಟ್‌ಮೆಂಟ್ ರಹಸ್ಯ ಸಭೆ'ಯ ಬಗ್ಗೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ತಮ್ಮ ಎಚ್ಚರಿಕೆಯ ಹೊರತಾಗಿಯೂ ರಾಜ್ಯ ನಾಯಕರ ಉದಾಸೀನತೆ ಮತ್ತು ಆಂತರಿಕ ವೈಫಲ್ಯದಿಂದಲೇ ಪಕ್ಷಕ್ಕೆ ಮುಖಭಂಗವಾಗಿದೆ ಎಂದಿದ್ದಾರೆ.

ಬೆಂಗಳೂರು (ಜೂ.22): ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ (Cross Voting) ವಿಚಾರ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಐದನೇ ಅಭ್ಯರ್ಥಿಯ ಗೆಲುವಿನ ಹಿಂದೆ ನಡೆದಿದ್ದ ‘ಅಪಾರ್ಟ್‌ಮೆಂಟ್ ರಹಸ್ಯ ಸಭೆ’ಗಳ ಕುರಿತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಅತ್ಯಂತ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಪಕ್ಷದ ರಾಜ್ಯ ನಾಯಕರ ಉದಾಸೀನತೆಯೇ ಇಂದಿನ ಸೋಲಿಗೆ ಪ್ರಮುಖ ಕಾರಣ ಎಂದು ಅವರು ನೇರವಾಗಿ ಚಾಟಿ ಬೀಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಪ್ರೆಸ್ಟೀಜ್ ಅಪಾರ್ಟ್‌ಮೆಂಟ್’ ರಹಸ್ಯ ಬಯಲು ಮಾಡಿದ ಡಿವಿಎಸ್!

"ಕಾಂಗ್ರೆಸ್ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು," ಎಂದು ಮಾತು ಆರಂಭಿಸಿದ ಸದಾನಂದ ಗೌಡ, ತೆರೆಮರೆಯಲ್ಲಿ ನಡೆದ ರಾಜಕೀಯ ಆಪರೇಷನ್‌ನ ಸಂಪೂರ್ಣ ವಿವರವನ್ನು ಬಿಚ್ಚಿಟ್ಟಿದ್ದಾರೆ.

ಜೂನ್ 13 ರಂದು ನನಗೆ ಹೆಬ್ಬಾಳದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಿಂದ ಒಂದು ಕರೆ ಬಂದಿತ್ತು. ಕಾಂಗ್ರೆಸ್‌ನ ನಾಲ್ಕು ಪ್ರಮುಖ ನಾಯಕರು ಮತ್ತು ಬಿಜೆಪಿಯ ಕೆಲ ಶಾಸಕರು ಅಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಆ ವ್ಯಕ್ತಿ ಮಾಹಿತಿ ನೀಡಿದರು. ನಾನು ತಕ್ಷಣವೇ ಅಲರ್ಟ್ ಆಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ಮತ್ತು ಆರ್. ಅಶೋಕ್ ಅವರಿಗೆ ಕರೆ ಮಾಡಿದೆ. ಆದರೆ ಇಬ್ಬರೂ ಸಿಗಲಿಲ್ಲ. ತಕ್ಷಣವೇ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ಅವರು 'ಸರಿ ನೋಡ್ತೇನೆ' ಎಂದರು. ಆದರೆ ಮರುದಿನವೇ ಅದೇ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಪಕ್ಕದ ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ ಎರಡನೇ ಸಭೆಯೂ ನಡೆಯಿತು! ಆಗಲೂ ನಾನು ಅದೇ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ಎಚ್ಚರಿಸಿದೆ. ಆದರೆ ನಮ್ಮವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ.

ವಿಪರ್ಯಾಸ ಎಂದರೆ, ಅಡ್ಡಮತದಾನ ನಡೆದು ಪಕ್ಷಕ್ಕೆ ಭಾರಿ ಮುಖಭಂಗವಾದ ಮೇಲೆ ಅದೇ ಪ್ರಧಾನ ಕಾರ್ಯದರ್ಶಿ ಡಿವಿಎಸ್ ಅವರಿಗೆ ಕರೆ ಮಾಡಿ, "ಅಣ್ಣ ನೀವು ಹೇಳಿದ ಹಾಗೆಯೇ ಆಯ್ತಲ್ಲ!' ಎಂದಿದ್ದರು. ಅದಕ್ಕೆ ಸದಾನಂದ ಗೌಡರು, "ಹೊಳೆ ದಾಟಿದ ಮೇಲೆ ಮತ್ತೇನು ಚರ್ಚೆ?" ಎಂದು ಬೇಸರದಿಂದಲೇ ಸುಮ್ಮನಾಗಿದ್ದಾರೆ.

ಧರ್ಮಸ್ಥಳ ಆಣೆ-ಪ್ರಮಾಣಕ್ಕೆ ತೀವ್ರ ಆಕ್ಷೇಪ

ಇತ್ತೀಚೆಗೆ ರಾಜಕೀಯ ಜಿದ್ದಾಜಿದ್ದಿಗೆ ಧರ್ಮಸ್ಥಳದ ಹೆಸರನ್ನು ಎಳೆದು ತರುತ್ತಿರುವುದರ ಕುರಿತು ಡಿವಿಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾನು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಸ್ಪಷ್ಟವಾಗಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಧರ್ಮದ ಕ್ಷೇತ್ರಕ್ಕೆ ರಾಜಕೀಯವನ್ನು ತೆಗೆದುಕೊಂಡು ಹೋಗಬೇಡಿ. ದೇವರ ಹತ್ತಿರವೂ ರಾಜಕೀಯ ಹೋಗುವುದಾದರೆ ಎಲ್ಲವನ್ನೂ ದೇವರಿಗೇ ಬಿಟ್ಟುಬಿಡಿ. ದೇವರೇ ರಾಜಕೀಯ ಮಾಡಲಿ! ನಮ್ಮಿಂದ ರಾಜಕೀಯ ಮಾಡಲು ಆಗದಿದ್ದರೆ ದೇವರಿಗೇ ಬಿಟ್ಟುಬಿಡಿ," ಎಂದು ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.

ಕಾರ್ಯಕರ್ತರ ಅಸ್ತಿತ್ವ ಉಳಿಸಿ; ನಾಯಕರ ವಿರುದ್ಧ ಆಕ್ರೋಶ

"ರಾಜ್ಯ ನಾಯಕರು ಕೇವಲ ತಮ್ಮ ಸ್ವಂತ ಅಸ್ತಿತ್ವ ಉಳಿಸಿಕೊಳ್ಳಲು ಶ್ರಮ ಹಾಕುತ್ತಿದ್ದೀರಿ. ಮೊದಲು ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಅಸ್ತಿತ್ವ ಉಳಿಸಿ. ಇಂದು ಬೀದಿಯಲ್ಲಿ ನಮಗೆ ಕಾರ್ಯಕರ್ತರು ಬೈಯುತ್ತಿದ್ದಾರೆ," ಎಂದು ರಾಜ್ಯ ನಾಯಕತ್ವದ ವಿರುದ್ಧ ಸದಾನಂದ ಗೌಡರು ಹರಿಹಾಯ್ದಿದ್ದಾರೆ.

ಪಕ್ಷದ ಒಳಜಗಳದ ಬಗ್ಗೆ ಮಾತನಾಡಿದ ಅವರು, "ಸಮಿತಿಗಳನ್ನೇನೋ ಮಾಡಿದ್ದೀರಿ ಸರಿ. ಆದರೆ ಕೋರ್ ಕಮಿಟಿ ಸದಸ್ಯರ ಜೊತೆ ಚರ್ಚೆ ಮಾಡಿ ತೀರ್ಮಾನ ತಗೊಂಡಿದ್ದೀರಾ? ಕನಿಷ್ಠ ಒಂದು ಅಭಿಪ್ರಾಯವನ್ನಾದರೂ ಕೇಳಿದ್ದೀರಾ? ಯಾರನ್ನೂ ಸಮಾಲೋಚನೆ ಮಾಡದೇ ಎಲ್ಲವನ್ನೂ ಏಕಪಕ್ಷೀಯವಾಗಿ ಮಾಡುತ್ತಿರುವುದರ ಪರಿಣಾಮವೇ ಈ ಇಂದಿನ ಸೋಲು. ನಮ್ಮ ಒಳಜಗಳ ಮತ್ತು ಆಂತರಿಕ ವ್ಯವಸ್ಥೆ ಸರಿ ಇಲ್ಲದ ಕಾರಣಕ್ಕೇ ನಾವು ಸೋತಿದ್ದೇವೆ," ಎಂದು ಒಪ್ಪಿಕೊಂಡಿದ್ದಾರೆ.

ಇದು ಡಿಕೆಶಿ ಗೆಲುವೋ? ನಮ್ಮ ವೈಫಲ್ಯವೋ?

ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯತಂತ್ರವನ್ನು ಉಲ್ಲೇಖಿಸಿದ ಡಿವಿಎಸ್, "ಡಿಕೆ ಶಿವಕುಮಾರ್ ಅಂತಹ ನಾಯಕ ಸಿಎಂ ಆದ ವಾರದಲ್ಲೇ ಇಂತಹ ಭರ್ಜರಿ ಏಟು ಕೊಟ್ಟಿದ್ದಾರೆ. ಇದನ್ನು ಡಿಕೆ ಶಿವಕುಮಾರ್ ಅವರ ಗೆಲುವು ಅನ್ನಬೇಕೋ ಅಥವಾ ನಮ್ಮೊಳಗಿನ ವೈಫಲ್ಯ ಅನ್ನಬೇಕೋ? ಈಗಲಾದರೂ ಸಂಪೂರ್ಣ ವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯವಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತಿದ್ದರೆ, ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಸಂಪೂರ್ಣವಾಗಿ ಬಂದ್ ಆಗುತ್ತಿತ್ತು. ಆತ್ಮ ಇರುವವರು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ," ಎಂದು ಸ್ವಪಕ್ಷದ ನಾಯಕರಿಗೆ ತೀಕ್ಷ್ಣವಾಗಿ ಎಚ್ಚರಿಸಿದ್ದಾರೆ.