Asianet Suvarna News Asianet Suvarna News

ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಆಯ್ಕೆ ಸಲೀಸು..!

*   ಕೊರತೆಯಿದ್ದುದು 20,000 ಮತ, ಸಿಕ್ಕಿದ್ದು 31,537
*   ಎನ್‌ಡಿಎಗೆ ಬಿಜೆಡಿ ಬೆಂಬಲ, ಪೂರ್ಣ ಬಹುಮತ
*  20 ಸಾವಿರ ಮತದ ಕೊರತೆಯನ್ನು ಬಿಜೆಡಿಯೊಂದೇ ಭರಿಸಿಕೊಡಲಿದೆ 
 

Draupadi Murmu Easy to Elect as President of India grg
Author
Bengaluru, First Published Jun 23, 2022, 7:26 AM IST

ನವದೆಹಲಿ(ಜೂ.23): ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರಿಗೆ ಅವರದ್ದೇ ತವರು ರಾಜ್ಯ ಒಡಿಶಾದ ಆಡಳಿತ ಪಕ್ಷವಾದ ಬಿಜು ಜನತಾದಳ (ಬಿಜೆಡಿ) ಬೆಂಬಲ ಘೋಷಿಸಿದೆ. ಇದರಿಂದಾಗಿ ಬಹುಮತಕ್ಕೆ ಕೆಲವೇ ಮತ ಕೊರತೆ ಎದುರಿಸುತ್ತಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಜಯದ ಹಾದಿ ಸುಗಮ ಆದಂತಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ 776 ಸಂಸದರು ಹಾಗೂ 4033 ಶಾಸಕರು ಮತ ಹಾಕಲು ಅರ್ಹರು. ಸಂಸದರ ಮತ ಮೌಲ್ಯ ದೇಶದ ಜನಸಂಖ್ಯೆ ಆಧರಿಸಿ ಹಾಗೂ ಶಾಸಕರ ಮತ ಮೌಲ್ಯ ರಾಜ್ಯಗಳ ಜನಸಂಖ್ಯೆ ಆಧರಿಸಿ ನಿಗದಿ ಆಗುತ್ತದೆ. ಹೀಗಾಗಿ ಒಟ್ಟು ಮತಗಳ ಮೌಲ್ಯ 10,86,431 ಆಗಿದ್ದು, ಬಹುಮತಕ್ಕೆ 5,43,216 ಮತ ಬೇಕು. ಎನ್‌ಡಿಎ 5,25,706 ಮತಗಳ ಮೌಲ್ಯ ಹೊಂದಿದೆ. ಸುಮಾರು 20 ಸಾವಿರ ಮತಗಳ ಕೊರತೆಯನ್ನು ಅದು ಅನುಭವಿಸುತ್ತಿದೆ. ಹೀಗಾಗಿ ಅದು ಎನ್‌ಡಿಎಯಲ್ಲಿ ಇಲ್ಲದಿದ್ದರೂ ಮೋದಿ ಸರ್ಕಾರದ ನೀತಿ ನಿರೂಪಣೆಗಳಿಗೆ ಆಗಾಗ ಬೆಂಬಲ ನೀಡುವ ಬಿಜೆಡಿ, ಆಂಧ್ರಪ್ರದೇಶದ ವೈಎಸ್ಸಾರ್‌ ಕಾಂಗ್ರೆಸ್‌ ಹಾಗೂ ತಮಿಳುನಾಡಿನ ಅಣ್ಣಾ ಡಿಎಂಕೆಯನ್ನು ಜಯಕ್ಕಾಗಿ ನೆಚ್ಚಿಕೊಂಡಿತ್ತು.

ದೇವಸ್ಥಾನದಲ್ಲಿ ಕಸ ಗುಡಿಸಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು!

ಇದರ ನಡುವೆ ತವರು ರಾಜ್ಯದ ಮಹಿಳೆ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆಯಾದ ಕೂಡಲೇ ಒಡಿಶಾ ಮುಖ್ಯಮಂತ್ರಿ ಹಾಗೂ ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌ ಅವರು ದ್ರೌಪದಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಬಿಜೆಡಿಯ 22 ಸಂಸದರು ಹಾಗೂ 114 ಶಾಸಕರ ಮತಗಳ ಒಟ್ಟು ಮೌಲ್ಯ 31,537 ಆಗುತ್ತದೆ. ಹೀಗಾಗಿ 20 ಸಾವಿರ ಮತದ ಕೊರತೆಯನ್ನು ಬಿಜೆಡಿಯೊಂದೇ ಭರಿಸಿಕೊಡಲಿದ್ದು, ದ್ರೌಪದಿ ಅವರ ಆಯ್ಕೆ ಸುಗಮವಾಗಿದೆ.
ಇನ್ನು ವೈಎಸ್ಸಾರ್‌ ಕಾಂಗ್ರೆಸ್‌ನ ಮತದ ಮೌಲ್ಯ 43,450 (28 ಸಂಸದರು, 150 ಶಾಸಕರು) ಹಾಗೂ ಅಣ್ಣಾ ಡಿಎಂಕೆ ಮತದ ಮೌಲ್ಯ 15,640 (6 ಸಂಸದರು, 65 ಶಾಸಕರು) ಆಗುತ್ತದೆ. ಹೀಗಾಗಿ ಈ ಎರಡೂ ಪಕ್ಷಗಳೂ ದ್ರೌಪದಿ ಅವರನ್ನು ಬೆಂಬಲಿಸಿದರೆ ಎನ್‌ಡಿಎ ಅಭ್ಯರ್ಥಿ ಇನ್ನೂ ಭರ್ಜರಿ ಬಹುಮತದಿಂದ ಜಯ ಗಳಿಸುವುದು ನಿಶ್ಚಿತವಾಗಿದೆ. ವೈಎಸ್ಸಾರ್‌ ಕಾಂಗ್ರೆಸ್‌ ಹಾಗೂ ಅಣ್ಣಾ ಡಿಎಂಕೆ ಇನ್ನೂ ತಮ್ಮ ಅಧಿಕೃತ ನಿಲುವು ಪ್ರಕಟಿಸಿಲ್ಲ.

ನವೀನ್‌ ಮನವಿ:

‘ದ್ರೌಪದಿ ಆಯ್ಕೆಗೂ ಮುನ್ನ ಪ್ರಧಾನಿ ನನ್ನ ಜತೆ ಮಾತನಾಡಿದ್ದರು. ನಮ್ಮ ರಾಜ್ಯದ ಪುತ್ರಿಯು ರಾಷ್ಟ್ರಪತಿ ಅಭ್ಯರ್ಥಿ ಎಂದು ಕೇಳಿ ಸಂಥೋಷವಾಗುತ್ತಿದೆ. ಅವರ ಆಯ್ಕೆಗೆ ಬಿಜೆಡಿ ಬೆಂಬಲ ನಿಡಲಿದೆ’ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಪ್ರಕಟಿಸಿದ್ದಾರೆ. ಅಲ್ಲದೆ, ‘ವಿಪಕ್ಷಗಳು ಕೂಡ ದ್ರೌಪದಿ ಅವರನ್ನು ಬೆಂಬಲಿಸಿ ಸರ್ವಾನುಮತದ ಆಯ್ಕೆಗೆ ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.
 

Follow Us:
Download App:
  • android
  • ios