Asianet Suvarna News Asianet Suvarna News

ಕೋವಿಡ್‌ ನಿಯಂತ್ರಣ: ಸಚಿವ ಸುಧಾಕರ್‌ ಕಾರ್ಯಕ್ಕೆ ಪರಂ ಮೆಚ್ಚುಗೆ

ಕೊರಟಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಶನಿವಾರ ತಮ್ಮ ಭಾಷಣದಲ್ಲಿ ಸಚಿವ ಸುಧಾಕರ್‌ ಅವರ ಕಾರ್ಯವೈಖರಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. 

Dr G Parameshwar Praises Minister Dr K Sudhakar At Tumakuru gvd
Author
First Published Dec 25, 2022, 1:30 PM IST

ತುಮಕೂರು (ಡಿ.25): ಕೊರಟಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಶನಿವಾರ ತಮ್ಮ ಭಾಷಣದಲ್ಲಿ ಸಚಿವ ಸುಧಾಕರ್‌ ಅವರ ಕಾರ್ಯವೈಖರಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. 

ಕೋವಿಡ್‌ ಸಂದರ್ಭದಲ್ಲಿ ಸುಧಾಕರ್‌ ಅವರ ಚಾಣಾಕ್ಷತನದ ಕರ್ತವ್ಯ ನಿರ್ವಹಣೆಯಿಂದಾಗಿ ಕೋವಿಡ್‌ ಹಿಮ್ಮೆಟ್ಟಿಸಲು ಸಾಧ್ಯವಾಯಿತು. ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಅವರು ಕೈಗೊಂಡ ಕ್ರಮಗಳಿಂದ ಇವತ್ತು ಅತ್ಯುತ್ತಮ ಮಟ್ಟದ ಸೌಲಭ್ಯ ಸಿಗುತ್ತಿದೆ. ಪಕ್ಷಾತೀತವಾಗಿ ಅವರ ಕೆಲಸಕ್ಕೆ ಮೆಚ್ಚುಗೆ ಹೇಳಲೇಬೇಕಿದೆ. ನಾವು ಸೂಕ್ಷ್ಮ ದೃಷ್ಠಿಯಿಂದ ಸರ್ಕಾರ ಹಾಗೂ ಸಚಿವರನ್ನು, ಮುಖ್ಯಮಂತ್ರಿಯನ್ನು ಗಮನಿಸುತ್ತಿದ್ದೇವೆ. ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುತ್ತೇವೆ.  ಆದರೆ, ಒಬ್ಬ ಸಚಿವರು ಇಡೀ ಕರ್ನಾಟಕದ ಜನ ಸಮುದಾಯಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಅಂದರೆ ಅದು ನಮ್ಮ ಡಾ.ಸುಧಾಕರ್‌. 

ಕೋವಿಡ್‌ ಎದುರಿಸಲು ಡಿ.27ರಂದು ತಾಲೀಮು: ಸಚಿವ ಸುಧಾಕರ್‌

ಅವರನ್ನು ಹೊಗಳುವಂತಹ ಪ್ರಶ್ನೆಯಲ್ಲ, ಕೋವಿಡ್‌ ಸಂದರ್ಭದಲ್ಲಿ ಅವರಿಗೆ ಬಂದಂತಹ ಸವಾಲು ಬಹುಶ: ಸಿಎಂಗೂ ಬಂದಿಲ್ಲ. ಸುಧಾಕರ್‌ ಅವರು ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯದಲ್ಲಿ ಲಕ್ಷಾಂತರ ಜನ ಸಾಯುತ್ತಿದ್ದರು ಎನ್ನುವುದನ್ನು ಮರಿಯಬಾರದು ಎಂದರು. ಈಗಲೂ ಅಷ್ಟೇ, ಕೋವಿಡ್‌ ಬರುವ ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೂಚನೆ ನೀಡುತ್ತಿದ್ದಾರೆ. ಅದನ್ನು ಎಲ್ಲರೂ ಪಾಲಿಸಬೇಕು. ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಬಂದಿದ್ದಾರೆ. ಅದು ಅವರ ದೊಡ್ಡ ಗುಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು ಚಿಕ್ಕಬಳ್ಳಾಪುರ ಶಾಸಕನಾಗಲು ಪರಂ ಕಾರಣ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರು 1993ರಲ್ಲಿ ನನಗೆ ವೈದ್ಯಕೀಯ ಸೀಟು ನೀಡಿ, ಶಿಕ್ಷಣಕ್ಕೆ ಸಹಾಯ ಮಾಡಿದರು. 2013ರಲ್ಲಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕನಾಗಲು ಪ್ರಮುಖ ಕಾರಣವೇ ಡಾ.ಜಿ.ಪರಮೇಶ್ವರ. 2023ಕ್ಕೆ ಕೊರಟಗೆರೆ ಕ್ಷೇತ್ರದ ಆರೋಗ್ಯ ವಿಭಾಗಕ್ಕೆ ವಿಶೇಷ ಅನುದಾನ ನೀಡುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ಕೊರಟಗೆರೆ ತಾಲೂಕಿನ ದೊಡ್ಡ  ಸಾಗ್ಗೆರೆ, ಬುಕ್ಕಾಪಟ್ಟಣದಲ್ಲಿ ಶನಿವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ ಅವರ ಋುಣ ತೀರಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. 2013ರ ಡಾ.ಜಿ.ಪರಮೇಶ್ವರ ಅವರ ಸೋಲು ದುರದೃಷ್ಟಕರ. ಆ ಸೋಲಿನಿಂದಾಗಿ ಅವರಿಗೆ ಉನ್ನತ ಹುದ್ದೆ ಕೈತಪ್ಪಿತು. ನಾನು ಅವರ ಪರವಾಗಿ ಪ್ರಚಾರ ಮಾಡಿದ್ದೇನೆ. ಆ ವಿಚಾರಕ್ಕೆ ನನಗೂ ತುಂಬಾ ನೋವಿದೆ. ನನ್ನ ಬದುಕಿನಲ್ಲಿ ವಿಶೇಷ ಪಾತ್ರ ವಹಿಸಿದ ನಾಯಕರಾದ ಪರಮೇಶ್ವರಗೆ ಮುಂದಿನ ದಿನಗಳಲ್ಲಿ ಶುಭವಾಗಲಿ ಎಂದು ಹಾರೈಸಿದರು.

ಅನುದಾನದ ಕೊರತೆಯಿಂದ 50 ಹೊಸ ತಾಲೂಕಲ್ಲಿ ಆಸ್ಪತ್ರೆಯಿಲ್ಲ: ಸಚಿವ ಸುಧಾಕರ್‌

ಪರಮೇಶ್ವರ ಕಾಲಿಗೆ ನಮಿಸಿದ ಆರೋಗ್ಯ ಸಚಿವ: ದೊಡ್ಡಸಾಗ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು. ಕಟ್ಟಡದ ಉದ್ಘಾಟನೆಯ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಡಾ.ಜಿ.ಪರಮೇಶ್ವರ ಮತ್ತು ಜೈ ಹನುಮಾನ್‌ ಪರವಾಗಿ ಜೈಕಾರ ಕೂಗಿದರೆ, ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಮತ್ತು ಜೈಶ್ರೀರಾಮ್‌ ಪರವಾಗಿ ಘೋಷಣೆ ಕೂಗಿದರು.

Follow Us:
Download App:
  • android
  • ios