ಕೋವಿಡ್ ಎದುರಿಸಲು ಡಿ.27ರಂದು ತಾಲೀಮು: ಸಚಿವ ಸುಧಾಕರ್
ಕೊರೋನಾ ಸೋಂಕು ಚಿಕಿತ್ಸಾ ವ್ಯವಸ್ಥೆಗಳ ಸುಸ್ಥಿತಿಯನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಡಿ.27ರಂದು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು (ಮಾಕ್‌ಡ್ರಿಲ್) ಕಾರ್ಯಾಚರಣೆ ನಡೆಸಲಾಗುವುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು (ಡಿ.24): ಕೊರೋನಾ ಸೋಂಕು ಚಿಕಿತ್ಸಾ ವ್ಯವಸ್ಥೆಗಳ ಸುಸ್ಥಿತಿಯನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಡಿ.27ರಂದು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು (ಮಾಕ್‌ಡ್ರಿಲ್) ಕಾರ್ಯಾಚರಣೆ ನಡೆಸಲಾಗುವುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಕೇಂದ್ರ ಆರೋಗ್ಯ ಸಚಿವರ ವಿಡಿಯೋ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ‘ಒಂದು ವೇಳೆ ಸೋಂಕು ಹೆಚ್ಚಳವಾದರೆ ಚಿಕಿತ್ಸೆಗೆ ಎಲ್ಲಾ ತಯಾರಿ ಹೊಂದಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಜನರೇಟರ್ ಸೇರಿದಂತೆ ಕೋವಿಡ್ ಉಪಕರಣಗಳು, ಸಿಬ್ಬಂದಿ, ವ್ಯವಸ್ಥೆಗಳು ಸರಿಯಾಗಿದೆಯೇ ಅನ್ನುವುದನ್ನು ಪರಿಶೀಲನೆ ನಡೆಸಲಾಗುತ್ತದೆ. ಅಗತ್ಯ ವ್ಯವಸ್ಥೆ, ಪರಿಷ್ಕರಣೆ ಮಾಡಿಕೊಳ್ಳಲಾಗುವುದು. ಅಂತಿಮವಾಗಿ 27ರಂದು ಕೊರೋನಾ ಚಿಕಿತ್ಸೆ ವ್ಯವಸ್ಥೆಯ ಅಣಕು ಕಾರ್ಯಾಚರಣೆ ನಡೆಸಲಾಗುವುದು’ ಎಂದರು. ಕಳೆದ ಮೂರು ತಿಂಗಳಿನಿಂದ ಕೊರೋನಾ ವಿಶ್ವದ ನಾನಾ ದೇಶಗಳಲ್ಲಿ ಹೇಗೆ ಏರಿಕೆಯಾಗುತ್ತಿದೆ ಎನ್ನುವ ಬಗ್ಗೆ ಸಭೆಯಲ್ಲಿ ಎಲ್ಲಾ ರಾಜ್ಯಗಳಿಗೂ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ನೀಡಲಾಯಿತು.
ಅನುದಾನದ ಕೊರತೆಯಿಂದ 50 ಹೊಸ ತಾಲೂಕಲ್ಲಿ ಆಸ್ಪತ್ರೆಯಿಲ್ಲ: ಸಚಿವ ಸುಧಾಕರ್
ಪ್ರತಿದಿನ ವಿಶ್ವದಲ್ಲಿ ಐದು ಲಕ್ಷ ಕೇಸ್‌ಗಳು ಪತ್ತೆಯಾಗುತ್ತಿವೆ. ಈ ಪೈಕಿ ಚೀನಾ, ಜಪಾನ್, ತೈವಾನ್, ಅಮೆರಿಕಾ, ಯುರೋಪ್, ನ್ಯೂಜಿಲೆಂಡ್ ಸೇರಿದಂತೆ 10 ರಾಷ್ಟ್ರಗಳಲ್ಲಿ ಶೇ.80ರಷ್ಟು ಹೊಸ ಕೇಸ್‌ಗಳು ಕಾಣಿಸಿಕೊಳ್ಳುತ್ತಿವೆ. ಸದ್ಯ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.03 ರಷ್ಟು ಇದೆ. ಈ ಮಟ್ಟದ ನಿಯಂತ್ರಣಕ್ಕೆ ಭಾರತದಲ್ಲಿ ಎರಡು ಡೋಸ್‌ಗಳ ಲಸಿಕಾಕರಣ ಆಗಿರುವುದು ಪ್ರಮುಖ ಕಾರಣವಾಗಿದೆ. ಜತೆಗೆ ಜನರಲ್ಲಿರುವ ಸ್ವಾಭಾವಿಕದಂತಹ ರೋಗ ನಿರೋಧಕ ಶಕ್ತಿಯೂ ಒಂದು ಕಾರಣವಾಗಿರಬಹುದು. ವಿದೇಶಗಳಿಗೆ ಹೋಲಿಕೆ ಮಾಡಿದಾಗ ಕೊರೊನಾ ನಿಯಂತ್ರಣದ ಬಗ್ಗೆ ನಮ್ಮ ದೇಶದ ಜನ ಹೆಚ್ಚು ಒಲವು ತೋರಿರುವುದು ಕಂಡು ಬಂದಿದೆ ಎಂದು ಹೇಳಿದರು.
18 ಜನರಿಗೆ ಹರಡುವ ಸಾಮರ್ಥ್ಯ: ಕೊರೊನಾ ರೂಪಾಂತರ ತಳಿ ಬಿಎಫ್7 ಆರ್ ವ್ಯಾಲ್ಯೂ ಪ್ರಕಾರ, ಇದು ಒಬ್ಬ ವ್ಯಕ್ತಿಯಿಂದ 17-18 ಜನಕ್ಕೆ ಹರಡುವ ಸಾಮರ್ಥ್ಯ ಹೊಂದಿದೆ. ಸೋಂಕು ಪರೀಕ್ಷೆ, ಕಣ್ಗಾವಲು ಹೆಚ್ಚಿಸಲು ಕೂಡ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ರಾಜ್ಯದಲ್ಲಿ 8 ರಿಂದ 10 ಲಕ್ಷ ಲಸಿಕೆಗಳಿದ್ದು, ಜನರು ಸ್ವಯಂ ಪ್ರೇರಿತರಾಗಿ ಮೂರನೇ ಡೋಸ್ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಗುರುವಾರ ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಪಾಸಿಟಿವ್ ಕೇಸ್‌ಗಳನ್ನು ಕಡ್ಡಾಯವಾಗಿ ವಂಶವಾಹಿ ಪರೀಕ್ಷೆಗೆ ಕಳುಹಿಸಲಿದೆ. ಹಿರಿಯರಿಗೆ ಪ್ರಾಶಸ್ತ್ಯ ನೀಡಿ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದರು.
ಚೀನಾದಲ್ಲಿ 10 ಲಕ್ಷ ಸಾವು: ಅಮೆರಿಕಾದ ಸಂಸ್ಥೆಯೊಂದು ಮಾಡಿರುವ ವರದಿ ಪ್ರಕಾರ, ಮುಂದಿನ ವರ್ಷದಲ್ಲಿ ಚೀನಾ ಒಂದರಲ್ಲೇ 10 ಲಕ್ಷ ಜನರು ಕೊರೋನಾದಿಂದ ಸಾವನ್ನಪ್ಪುವ ಸಾಧ್ಯತೆ ಇದೆ. ಚೀನಾದ ಲಸಿಕೆ, ಲಸಿಕಾಕರಣದ ನಿರ್ಲಕ್ಷ್ಯ, ಜನರ ಅಜಾಗರೂಕತೆ, ವಯೋವೃದ್ಧರ ಜನಸಂಖ್ಯೆ ಮತ್ತು ಅವರಿಗೆ ಇರುವ ಆರೋಗ್ಯ ಸಮಸ್ಯೆ ಇದಕ್ಕೆ ಕಾರಣವಾಗಬಹುದು. 2 ವರ್ಷಗಳ ಹಿಂದೆ ಆರಂಭವಾದ ಕೊರೋನಾ ಇನ್ನೂ ಶಾಶ್ವತವಾಗಿ ನಾಶವಾಗಿಲ್ಲ. ಹೀಗಾಗಿ ಜನರು ಹೆಚ್ಚು ಜಾಗೃತೆಯಿಂದ ಇರಬೇಕಿದ್ದು, ಬೂಸ್ಟರ್ ಡೋಸ್‌ಗಳನ್ನು ಆದಷ್ಟು ಬೇಗನೆ ಪಡೆದುಕೊಳ್ಳುವಂತೆ ವಿನಂತಿಸಿದರು.
ಕೇಂದ್ರ ಸರ್ಕಾರಕ್ಕೆ ಸಚಿವ ಕೆ.ಸುಧಾಕರ್ ಸಲಹೆ: ಏರ್‌ಪೋರ್ಟ್‌ನಲ್ಲಿ ಶೇ.2 ಪ್ರಯಾಣಿಕರಿಗೆ ರಾರಯಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಮುಂದುವರೆದು ಕೇಂದ್ರ ಸರ್ಕಾರವು ವಿದೇಶಿ ಪ್ರಯಾಣಿಕರಿಗೆ ಕೊರೋನಾ ಪರೀಕ್ಷೆ ನೆಗೆಟಿವ್ ವರದಿ ಕಡ್ಡಾಯಗೊಳಿಸಬೇಕು. ಏರ್ ಸುವಿಧಾ ಮೂಲಕ 72 ಗಂಟೆಗಳ ಒಳಗಡೆ ಅಂತಾರಾಷ್ಟ್ರೀಯ ಪ್ರಯಾಣಿಕರು ಕೊರೋನಾ ನೆಗೆಟಿವ್ ಸರ್ಟಿಫಿಕೆಟ್ ಅಪ್‌ಲೋಡ್ ಮಾಡಬೇಕು. ಈ ಕುರಿತ ಮಾರ್ಗಸೂಚಿಯನ್ನು ಜಾರಿಗೊಳಿಸಬೇಕು ಎಂದು ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.
ಶೀಘ್ರ ಕೋವಿಡ್ ಮಾರ್ಗಸೂಚಿ ಬಿಡುಗಡೆ: ಸಚಿವ ಸುಧಾಕರ್
ಹೊಸ ವರ್ಷ, ಸಮಾರಂಭಗಳ ಆಯೋಜನೆ ಮುಂದೂಡಿಕೆ ಸೂಕ್ತ: ರಾಜ್ಯದಲ್ಲಿ ಒಂದು ವಾರಗಳ ಕಾಲ ಸೋಂಕು ಪ್ರಕರಣಗಳ ಪರಾಮರ್ಶಿಸಿ ಹೊಸ ವರ್ಷಾಚರಣೆ ಸೇರಿದಂತೆ ಇತರೆ ತೀರ್ಮಾನ ಕೈಗೊಳ್ಳಲಾಗುವುದು. ಮಾಸ್ಕ್ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಜನರು ಕೈಗೊಳ್ಳಬೇಕು. ಹೊಸ ವರ್ಷ ಸೇರಿದಂತೆ ಹೆಚ್ಚು ಜನರು ಸೇರುವ ಕಡೆ ಸಮಾರಂಭಗಳನ್ನು ಆಯೋಜಿಸುವುದನ್ನು ಕೆಲ ದಿನಗಳ ಮುಂದೂಡುವುದು ಉತ್ತಮ ಎಂದು ಸಚಿವರು ತಿಳಿಸಿದ್ದಾರೆ.