ಅಧಿಕಾರ ಹಂಚಿಕೆಗೆ ಶಾಸಕರ ಬಲ ಮುಖ್ಯ ಆಗಲ್ಲ. ಹೈಕಮಾಂಡ್ ನಿರ್ಣಯವೇ ಮುಖ್ಯ. ಯಾರಿಗೆ ಬಹುಮತ ಬರುತ್ತದೋ ಅಂಥವರ ಹೆಸರನ್ನೇ ಮುಖ್ಯಮಂತ್ರಿಯಾಗಿ ಪ್ರಕಟ ಮಾಡುತ್ತಾರೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು (ಅ.14): ಅಧಿಕಾರ ಹಂಚಿಕೆಗೆ ಶಾಸಕರ ಬಲ ಮುಖ್ಯ ಆಗಲ್ಲ. ಹೈಕಮಾಂಡ್ ನಿರ್ಣಯವೇ ಮುಖ್ಯ. ಯಾರಿಗೆ ಬಹುಮತ ಬರುತ್ತದೋ ಅಂಥವರ ಹೆಸರನ್ನೇ ಮುಖ್ಯಮಂತ್ರಿಯಾಗಿ ಪ್ರಕಟ ಮಾಡುತ್ತಾರೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು. ಹೈಕಮಾಂಡ್ ನಿಲುವು ಅಂತಿಮ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ಮುಖ್ಯಮಂತ್ರಿಯವರ ಆಯ್ಕೆ ಸಂದರ್ಭದಲ್ಲಿ ಶಾಸಕರ ಅಭಿಪ್ರಾಯ ತೆಗೆದುಕೊಂಡು ಹೈಕಮಾಂಡ್ ತೀರ್ಮಾನ ಮಾಡುತ್ತದೆ.
ವೀಕ್ಷಕರು ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್‌ಗೆ ವರದಿ ಕೊಡುತ್ತಾರೆ. ಯಾರ ಪರ ಹೆಚ್ಚುಮತ ಬರುತ್ತದೆಯೋ ಅವರನ್ನು ಮುಖ್ಯಮಂತ್ರಿಯಾಗಿ ನಿರ್ಧರಿಸಲಾಗುತ್ತದೆ. ಸಿದ್ದರಾಮಯ್ಯ ಮೊದಲ ಮತ್ತು 2ನೇ ಬಾರಿಗೆ ಮುಖ್ಯಮಂತ್ರಿಯಾದಾಗಲೂ ಇದೇ ಪದ್ಧತಿ ಅನುಸರಿಸಲಾಗಿತ್ತು ಎಂದು ತಿಳಿಸಿದರು. ಕಾಂಗ್ರೆಸ್‌ನಲ್ಲಿ ಈಗಲೂ ಶಾಸಕರ ಅಭಿಪ್ರಾಯ ತೆಗೆದುಕೊಳ್ಳಬೇಕು ಎನ್ನುವ ಪದ್ಧತಿ ಇದೆ. ಇಲ್ಲ, ನಮಗೆ ಅಭಿಪ್ರಾಯ ಬೇಕಾಗಿಲ್ಲ. ನಾವೇ ತೀರ್ಮಾನ ಮಾಡುತ್ತೇವೆ ಅಂದರೆ ಅದು ಹೈಕಮಾಂಡ್‌ಗೆ ಬಿಟ್ಟದ್ದು. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಗೌರವ ಕೊಡುತ್ತಾರೆ ಎಂದರು.
ಸುಮ್ಮನೆ ಹೇಳಿದ್ದು-ಪರಂ
ನಾನು ಏಕೆ ಸಿಎಂ ಆಗಬಾರದು ಎಂಬ ಹೇಳಿಕೆ ಸುಮ್ಮನೆ ಹೇಳಿದ್ದೇನೆ ಅಷ್ಟೆ. ನಮ್ಮಲ್ಲಿ ಬಹಳ ಜನ ಆಕಾಂಕ್ಷಿಗಳು ಇದ್ದಾರೆ. ಹೈಕಮಾಂಡ್ ಯಾರನ್ನು ತೀರ್ಮಾನ ಮಾಡುತ್ತದೋ ನಾವೆಲ್ಲ ಅವರಿಗೆ ಜೈ ಎನ್ನುತ್ತೇವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಫ್ರಂಟ್ ರನ್ನರ್ಸ್, ಬೇರೆಯವರೆಲ್ಲ ಸೆಕೆಂಡ್ ಲೆವೆಲ್, ಥರ್ಡ್ ಲೆವೆಲ್ ಇದ್ದಾರೆ ಎಂದು ಹೇಳಿದರು. ಗ್ಯಾರಂಟಿ ಯೋಜನೆ ನಿಲ್ಲಿಸುವ ಕುರಿತ ಆರ್.ವಿ.ದೇಶಪಾಂಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಯಾದಾಗ ಬೇಕಿದ್ದರೆ ಗ್ಯಾರಂಟಿ ಯೋಜನೆ ನಿಲ್ಲಿಸಲಿ. ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ, ಅದು ಸರ್ಕಾರದ ಅಭಿಪ್ರಾಯ ಆಗುವುದಿಲ್ಲ. ಸರ್ಕಾರ ಯೋಚಿಸಿಯೇ ಗ್ಯಾರಂಟಿ ಯೋಜನೆ ಕೊಟ್ಟಿದೆ. ಈ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ ಆಗಿಲ್ಲ ಎಂದರು.


