ಸಿಎಂ ಬದಲಾವಣೆ ಆಗುತ್ತಾರೆ ಎಂದು ಹೇಳಿದವರು ಯಾರು? ಸಿದ್ದರಾಮಯ್ಯನವರು ಈಗ ಮುಖ್ಯಮಂತ್ರಿಗಳಿದ್ದಾರೆ. ಅವರೇ ಇರುತ್ತಾರೆ. ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ತುಮಕೂರು (ಅ.02): ಸಿಎಂ ಬದಲಾವಣೆ ಆಗುತ್ತಾರೆ ಎಂದು ಹೇಳಿದವರು ಯಾರು? ಸಿದ್ದರಾಮಯ್ಯನವರು ಈಗ ಮುಖ್ಯಮಂತ್ರಿಗಳಿದ್ದಾರೆ. ಅವರೇ ಇರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸಿಎಂ ಬದಲಾವಣೆ ವಿಚಾರ‌ವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಇರುತ್ತಾರೆ ಎಂದು ಅಂದುಕೊಂಡಿದ್ದೇವೆ. ಆಮೇಲೆ ಅವರೇ ಹೇಳಿದ್ದಾರೆ. ಇಷ್ಟೆಲ್ಲ ಹೇಳಿಯೂ ಕೂಡ ನಮ್ಮಲ್ಲಿ ಹೈಕಮಾಂಡ್ ಇದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ ಅಂತಾನೂ ಹೇಳಿದ್ದಾರೆ. ನೀವು ಅದನ್ನು ಗಮನಿಸಿದ್ದೀರಾ ಎಂದರು.

ಯಾವುದೇ ಕ್ರಾಂತಿ ಇಲ್ಲ. ಎಲ್ಲವೂ ಶಾಂತಿ. ಗಾಂಧಿ ಜಯಂತಿ ದಿನ ಶಾಂತಿ ಹೇಳ ಬೇಕೆ ಹೊರತು ಕ್ರಾಂತಿ ಅಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಉಸಿರಾಟ ತೊಂದರೆ ಇದೆ. ನಾನು ಬೆಳಗ್ಗೆ ಹೋಗಿ ರಾಮಯ್ಯ ಆಸ್ಪತ್ರೆಯಲ್ಲಿ ನೋಡಿ ಬಂದೆ. ಅವರಿಗೆ ಪೇಸ್ ಮೇಕರ್ ಹಾಕಿದ್ದಾರೆ. 10-15 ನಿಮಿಷ ಅವರ ಜೊತೆ ಮಾತನಾಡಿಸಿಕೊಂಡು ಬಂದೆ. ಅವರು ಆರೋಗ್ಯವಾಗಿದ್ದಾರೆ. ‌‌ಯಾವುದೆ ತೊಂದರೆ ಇಲ್ಲ ಎಂದು ಹೇಳಿದರು.

ಹಿಂದೂಗಳು ಆತ್ಮ ರಕ್ಷಣೆಗೆ ಆಯುಧಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಹೇಳಿಕೆ ವಿಚಾರವಾಗಿ, ಅದು ನನ್ನ ದೃಷ್ಟಿಯಲ್ಲಿ ಬಹಳ ದೊಡ್ಡ ತಪ್ಪು. ಆ ರೀತಿಯ ಪ್ರಚೋದನಕಾರಿ ಹೇಳಿಕೆ ಯಾರೂ ಕೊಡಬಾರದು. ಅದಕ್ಕಾಗಿ ಕಾನೂನುಗಳಿವೆ.‌‌‌‌‌‌ ಇಲ್ಲಿ ಆತ್ಮ ರಕ್ಷಣೆ ಪ್ರಶ್ನೆಗಳು ಬರೋದಿಲ್ಲ. ಯಾರು ನಾರಾಯಣಸಾ ಬಾಂಡಗೆ ತೊಂದರೆ ಮಾಡಲು ಹೋಗಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಅದನ್ನು ಪ್ರಚೋದನಕಾರಿಯಾರಿ ಜನ ಸಮುದಾಯಕ್ಕೆ ಹೇಳೋದು ಸರಿ ಇಲ್ಲ ಎಂದು ಪರಮಮೇಶ್ವರ್ ತಿಳಿಸಿದರು.

ಆಚಾರ ವಿಚಾರ ಯುವಕರು ಮುಂದುವರೆಸಿ

ಪೂರ್ವಜರು ಕಾಪಾಡಿಕೊಂಡು ಬಂದಂತಹ ಸಂಪ್ರದಾಯ, ಆಚಾರ ವಿಚಾರಗಳನ್ನು ಇಂದಿನ ಯುವ ಪೀಳಿಗೆ ಮುಂದುವರೆಸಬೇಕಿದೆ. ಇಲ್ಲವಾದರೆ ಮನುಕುಲ ಅಂತ್ಯ ಕಟ್ಟಿಟ್ಟಬುತ್ತಿ ಎಂದು ತಿಳಿಸಿದರು. ಮನುಷ್ಯನಲ್ಲಿ ಹಣ ಮತ್ತು ಎಲ್ಲಾ ರೀತಿಯ ಸೌಲಭ್ಯ ಇದ್ದ ಮಾತ್ರಕ್ಕೆ ದೇವಾಲಯ ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕೆ ದೇವಿಯ ಅನುಗ್ರಹ ಕೂಡ ಬೇಕಿದೆ. ನನ್ನ ತಾಯಿ ಕಲಿಸಿದ ಸಂಸ್ಕೃತಿ, ಸಂಪ್ರಾದಾಯದಿಂದ ಇಂದು ಉನ್ನತ ಸ್ಥಾನದಲ್ಲಿದ್ದೇನೆ. ಉದ್ಯಮಿ ನಿಲೇಶ್ ಮತ್ತು ಶಶಿಧರ್ ದುಬೈನಲ್ಲಿದ್ದರೂ ಉದ್ಯಮದ ಜೊತೆಗೆ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಾ ಸಂಸ್ಕೃತಿ, ಆಚರಣೆಯನ್ನು ಮರೆಯದಿರುವುದು ಖುಷಿಯ ವಿಚಾರ ಎಂದು ಶ್ಲಾಘಿಸಿದರು.