ಮಹಾರಾಷ್ಟ್ರ ಸರ್ಕಾರದ ಸಿಎಂ ಯಾರೆಂಬುದೇ ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ತಾತ್ಕಾಲಿಕ ಮುಖ್ಯಮಂತ್ರಿ ಇದ್ದಾರೆ ಎಂದು ಆದಿತ್ಯ ಠಾಕ್ರೆ ಟೀಕೆ ಮಾಡಿದ್ದಾರೆ. 

ಮಹಾರಾಷ್ಟ್ರದ ಏಕನಾಥ್‌ ಶಿಂಧೆ - ದೇವೇಂದ್ರ ಫಡ್ನವೀಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ದಿನಗಳು ಕಳೆದ್ರೂ ಸಚಿವ ಸಂಪುಟದಲ್ಲಿ ಸಹ ಇಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೊಂದೆಡೆ, ಏಕನಾಥ್‌ ಶಿಂಧೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದು, ದೇವೇಂದ್ರ ಫಡ್ನವೀಸ್‌ ಉಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಶಿಂಧೆ ಅವರಿಗಿಂತ ಫಡ್ನವೀಸ್‌ ಮಾಧ್ಯಮಗಳ ಎದುರು ಹೆಚ್ಚು ಸಕ್ರಿಯರಾಗಿದ್ದಾರೆ. ಅಲ್ಲದೆ, ಫಡ್ನವೀಸ್‌ರನ್ನು ಸೂಪರ್‌ ಸಿಎಂ ಎಂದು ಹಲವರು ವ್ಯಾಖ್ಯಾನಿಸುತ್ತಿದ್ದಾರೆ. ಇದೇ ರೀತಿ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ನೂತನ ಸರ್ಕಾರವನ್ನು ಟೀಕಿಸಿದ್ದಾರೆ.

ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಮಹಾರಾಷ್ಟ್ರದ ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮತ್ತು ಆಡಳಿತದಲ್ಲಿ ನಿಜವಾದ ಮುಖ್ಯಮಂತ್ರಿ ಯಾರು ಎಂದು ಅರ್ಥಮಾಡಿಕೊಳ್ಳುವುದೇ ಕಷ್ಟ ಎಂದು ಹೇಳಿದರು. ಮುಂಬೈನ ಮಾತೋಶ್ರೀಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಆದಿತ್ಯ ಠಾಕ್ರೆ, ಬಂಡಾಯ ಶಾಸಕರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಶಿವಸೇನೆಯ ಹೋರಾಟದ ತೀರ್ಪು ಕೇವಲ ಪಕ್ಷದ ಮೇಲೆ ಮಾತ್ರವಲ್ಲದೆ, ಇಡೀ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಮಹಾರಾಷ್ಟ್ರ ಸಂಪುಟ ವಿಸ್ತರಣೆ , ನಾಳೆ 11 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ!

"ರಾಜ್ಯದಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿದೆಯೇ ಅಥವಾ ಇಲ್ಲವೇ ಎಂಬುದು ಕೇಳಲಾಗುವ ಪ್ರಶ್ನೆಯಾಗಿದೆ. ಇಬ್ಬರ ‘ಜಂಬೋ’ ಕ್ಯಾಬಿನೆಟ್‌ನಲ್ಲಿ ನಿಜವಾದ ಮುಖ್ಯಮಂತ್ರಿ ಯಾರೆಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ. ಅಲ್ಲದೆ, ಶಿಂಧೆ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳುವುದರಿಂದ ‘ತಾತ್ಕಾಲಿಕ’ ಮುಖ್ಯಮಂತ್ರಿ ಅಧಿಕಾರದಲ್ಲಿದ್ದಾರೆ ಎಂದೂ ಠಾಕ್ರೆ ಹೇಳಿದ್ದಾರೆ.

"ನಮಗೆ ತಾತ್ಕಾಲಿಕ ಮುಖ್ಯಮಂತ್ರಿ ಇದ್ದಾರೆ. ತಾತ್ಕಾಲಿಕ ಏಕೆಂದರೆ ಸರ್ಕಾರ ಪತನಗೊಳ್ಳುತ್ತದೆ," ಎಂದೂ ಆದಿತ್ಯ ಠಾಕ್ರೆ ಹೇಳಿದ್ದಾರೆ. ಶಿಂಧೆ "ಕೆಲವೊಮ್ಮೆ" ದೆಹಲಿಯಿಂದ ಮಹಾರಾಷ್ಟ್ರಕ್ಕೆ ಬರುತ್ತಾರೆ, ಸ್ಥಳಗಳನ್ನು ಸುತ್ತುತ್ತಾರೆ, ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಾರೆ ಮತ್ತು ನಂತರ ರಾಷ್ಟ್ರ ರಾಜಧಾನಿಗೆ ಹಿಂತಿರುಗುತ್ತಾರೆ ಎಂದು ಟೀಕೆ ಮಾಡಿದ್ದಾರೆ. ಇನ್ನೊಂದೆಡೆ, ಮಹಾರಾಷ್ಟ್ರದ ಹಲವೆಡೆ ಭಾರಿ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತರದಾಯಿತ್ವದ ಸರ್ಕಾರವೇ ಇಲ್ಲ ಎಂದು ಠಾಕ್ರೆ ಹೇಳಿದರು.

ಈ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದ್ದು, ನಂತರ ಮಹಾರಾಷ್ಟ್ರದಲ್ಲಿ ಅವಧಿಪೂರ್ವ ಚುನಾವಣೆ ನಡೆಯಲಿದೆ ಎಂದೂ ಆದಿತ್ಯ ಠಾಕ್ರೆ ಇತ್ತೀಚೆಗೆ ಹೇಳಿದ್ದರು. 

ರಸ್ತೆ ಗುಂಡಿ ಮುಚ್ಚಲು ಜಿಯೊಪಾಲಿಮರ್, ಮುಂಬೈಗೆ ಏಕನಾಥ್ ಶಿಂಧೆ ಹೊಸ ಸ್ಪರ್ಶ

ಜೂನ್ 30 ರಂದು ಶಿಂಧೆ ಮತ್ತು ಫಡ್ನವೀಸ್ ಅವರು ಸಿಎಂ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದ ನಂತರ ಮಹಾರಾಷ್ಟ್ರದ ನೂತನ ಸರ್ಕಾರದ ಸಂಪುಟ ವಿಸ್ತರಣೆಯು ಮಂಗಳವಾರ ನಡೆಯಲಿದೆ.

ಈ ಮಧ್ಯೆ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್‌ ಠಾಕ್ರೆ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಏಕನಾಥ ಶಿಂಧೆ ಸರ್ಕಾರದಲ್ಲಿ ಎಂಎನ್‌ಎಸ್‌ ಪಕ್ಷದವರಿಗೂ ಒಂದು ಸಚಿವ ಸ್ಥಾನ ನೀಡುವ ಬಗ್ಗೆ ಆಫರ್‌ ನೀಡಲಾಗಿದೆ ಎನ್ನಲಾಗಿದೆ. ಒಂದು ವೇಳೆ ಈ ಪ್ರಸ್ತಾಪವನ್ನು ರಾಜ್‌ ಠಾಕ್ರೆ ಒಪ್ಪಿದರೆ, ಅದು ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಲಿದೆ. ರಾಜ್‌, ಒಪ್ಪಿದರೆ ಅವರ ಮಗ ಅಮಿತ್‌ ಠಾಕ್ರೆಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ. ಆದರೆ ಈ ಹೇಳಿಕೆಗಳನ್ನು ರಾಜ್‌ ಠಾಕ್ರೆ ತಳ್ಳಿಹಾಕಿದ್ದು, ಸಚಿವ ಸಂಪುಟದ ಕುರಿತಾಗಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.
ಏಕನಾಥ್‌ ಶಿಂದೆ ಹಾಗೂ ಇತರೆ 39 ಮಂದಿ ಶಿವಸೇನಾ ಶಾಸಕರ ಬಂಡಾಯದ ನಂತರ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಜೂನ್ 29 ರಂದು ಪತನಗೊಂಡಿತ್ತು.