ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಕೆ.ಆರ್‌. ಕ್ಷೇತ್ರದಲ್ಲಿ ಶಾಸಕ ಎಸ್‌.ಎ.ರಾಮದಾಸ್‌ ಅವರನ್ನು ಹೊರತುಪಡಿಸಿ ಬೇರೊಬ್ಬರಿಗೆ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌ ಆಗ್ರಹಿಸಿದರು. 

ಮೈಸೂರು (ಫೆ.24): ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಕೆ.ಆರ್‌. ಕ್ಷೇತ್ರದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ ಅವರನ್ನು ಹೊರತುಪಡಿಸಿ ಬೇರೊಬ್ಬರಿಗೆ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌ ಆಗ್ರಹಿಸಿದರು. ಕೆ.ಆರ್‌. ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ಅವರ ಕಾರ್ಯವೈಖರಿ ವಿರುದ್ಧ ಕ್ಷೇತ್ರದ ವಿಪ್ರ ಸಮುದಾಯದ ಅನೇಕ ಮುಖಂಡರು ಸಿಡಿದೆದ್ದಿದಾರೆ. ಈ ಕುರಿತಂತೆ ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಸ್‌.ಎ. ರಾಮದಾಸ್‌ ಅವರು ವಿಪ್ರ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ವಿಪ್ರ ಸಮುದಾಯದ ಹೆಚ್ಚು ಸಾಂದ್ರತೆ ಇರುವ ಅನೇಕ ವಿಧಾನಸಭಾ ಕ್ಷೇತ್ರಗಳ ಪೈಕಿ ಮೈಸೂರಿನ ಕೃಷ್ಣರಾಜ ಕ್ಷೇತ್ರವೂ ಒಂದಾಗಿದೆ. ಕೆ.ಆರ್‌. ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಬಹುತೇಕವಾಗಿ ಬ್ರಾಹ್ಮಣ ಅಭ್ಯರ್ಥಿಗಳೇ ಎಲ್ಲರ ಸಹಕಾರದೊಂದಿಗೆ ವಿಜೇತರಾಗಿರುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಹೀಗಾಗಿ, ಇವರ ಒಲವಿನ ಕಾರಣ ಎಸ್‌.ಎ. ರಾಮದಾಸ್‌ ಸತತ ಗೆಲುವು ಸಾಧಿಸುತ್ತಿದ್ದಾರೆ ಎಂದರು. ಆದರೆ, ಶಾಸಕ ಎಸ್‌.ಎ. ರಾಮದಾಸ್‌ ಅವರು ವಿಪ್ರ ಸಮುದಾಯದ ಸಮಾಜದ ಕಷ್ಟಕಾರ್ಪಣ್ಯ, ದುಃಖದುಮ್ಮಾನ, ಸುಖ ದುಃಖಗಳಿಗೆ ಸ್ಪಂದಿಸುತ್ತಾರೆಂಬ ನಿರೀಕ್ಷೆ ಹುಸಿಗೊಳಿಸಿದ್ದಾರೆ. 

ಬಿಜೆಪಿಗೆ ತುಮಕೂರು ಅಭ್ಯರ್ಥಿ ನಾನೇ: ಸೊಗಡು ಶಿವಣ್ಣ

ಇದೇ ರೀತಿಯಲ್ಲಿ ಸಮುದಾಯದವರು ತಮ್ಮ ತಮ್ಮ ವೈಯಕ್ತಿಕ, ಸಾಂಸ್ಥಿಕ ಸಾರ್ವಜನಿಕ ಸಮಸ್ಯೆ ಪರಿಹಾರಕ್ಕಾಗಿ ಹಲವಾರು ಬಾರಿ ಅವರ ಕಚೇರಿಗೆ ಅಥವಾ ಸಾಂದರ್ಭಿಕ ಭೇಟಿ ಆದಾಗಲೆಲ್ಲಾ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದರು. ಬ್ರಾಹ್ಮಣರಿಗೆ ಇಡಬ್ಲ್ಯೂಎಸ್‌ ಸರ್ಟಿಫಿಕೇಟ್‌ ನೀಡುವಲ್ಲಿರುವ ಗೊಂದಲ ಪರಿಹರಿಸಲು ಶ್ರಮಿಸಿಲ್ಲ. ಪ್ರಧಾನಮಂತ್ರಿಗಳು ರಾಷ್ಟ್ರವ್ಯಾಪ್ತಿ ನೀಡಿರುವ ಶೇ.10 ಮೀಸಲಾತಿ ಅನುಷ್ಠಾನಕ್ಕೆ ಸರ್ಕಾರದೊಡನೆ ಸೂಕ್ತ ರೀತಿಯಲ್ಲಿ ವ್ಯವಹರಿಸಿ ನ್ಯಾಯ ಒದಗಿಸುತ್ತಿಲ್ಲ. 

ಹೀಗಾಗಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್‌. ಕ್ಷೇತ್ರದಲ್ಲಿ ಎಸ್‌.ಎ. ರಾಮದಾಸ್‌ ಅವರನ್ನು ಹೊರತು ಪಡಿಸಿ ವಿಪ್ರ ಸಮುದಾಯದ ಬೇರೊಬ್ಬರಿಗೆ ಟಿಕೆಟ್‌ ನೀಡಬೇಕು ಎಂದು ಅವರು ಒತ್ತಾಯಿಸಿದರು. ಬಿಜೆಪಿಯಲ್ಲಿ ಎಸ್‌.ಎ. ರಾಮದಾಸ್‌ ಅವರಿಗೆ ಇನ್ನಿತರ ಹುದ್ದೆ ನೀಡಿದರೂ ತಮ್ಮ ಅಭ್ಯಂತರವಿಲ್ಲ. ರಾಮದಾಸ್‌ ಅವರನ್ನು ಹೊರತುಪಡಿಸಿ ವಿಪ್ರ ಸಮುದಾಯದ ಸೂಕ್ತ ವ್ಯಕ್ತಿಗೆ ಟಿಕೆಟ್‌ ನೀಡಲಿ. ಒಂದು ವೇಳೆ ಎಸ್‌.ಎ. ರಾಮದಾಸ್‌ ಅವರಿಗೇ ಮತ್ತೆ ಬಿಜೆಪಿ ಟಿಕೆಟ್‌ ನೀಡಿದಲ್ಲಿ ವಿಪ್ರ ಸಮುದಾಯ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಜ್ಯೂನಿಯರ್‌ ಖರ್ಗೆ ಎದುರು ಕೇಸರಿ ಅಭ್ಯರ್ಥಿ ಯಾರು?: ತಂದೆ​ಯಂತೆ ಮಗ​ನನ್ನೂ ಸೋಲಿ​ಸಲು ಬಿಜೆಪಿ ರಣ ತಂತ್ರ

ವಿಪ್ರರಿಗೆ ಟಿಕೆಟ್‌ ನೀಡಿ: ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ನಟರಾಜ ಜೋಯಿಸ್‌ ಮಾತನಾಡಿ, ಕೆ.ಆರ್‌. ಕ್ಷೇತ್ರದಲ್ಲಿ ವಿಪ್ರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ವಿಪ್ರರಿಗೆ ಟಿಕೆಟ್‌ ನೀಡಬೇಕು. ಆಗ ಸಂಘ ಸಂಸ್ಥೆಗಳು ಸಭೆ ಸೇರಿ ಸೂಕ್ತ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸುತ್ತೇವೆ. ಬಿಜೆಪಿಯಲ್ಲಿ ಎಸ್‌.ಎ. ರಾಮದಾಸ್‌ ಅವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು. ವಂಗೀಪುರ ಮಠದ ಶ್ರೀ ಇಳೈ ಆಳ್ವಾರ್‌ ಸ್ವಾಮೀಜಿ, ವಿಪ್ರ ಮಹಿಳಾ ಸಂಗಮ ಅಧ್ಯಕ್ಷೆ ಡಾ. ಲಕ್ಷ್ಮಿ, ಸಮಾಜ ಸೇವಕ ಕೆ. ರಘುರಾಂ, ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಶ್ರೀನಿವಾಸ್‌ ಇದ್ದರು.